ಕುಡಿಯುವ ನೀರಿಗಾಗಿ ಗ್ರಾಪಂಗೆ ಮಹಿಳೆಯರ ಮುತ್ತಿಗೆ

KannadaprabhaNewsNetwork | Published : Dec 23, 2023 1:46 AM

ಸಾರಾಂಶ

ಲಕ್ಷ್ಮೇಶ್ವರಕ್ಕೆ ಸಮೀಪದ ಬಟ್ಟೂರ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಗ್ರಾಮಸ್ಥರು ಕೊಡಗಳನ್ನು ಹಿಡಿದು ಗ್ರಾಪಂಗೆ ಮುತ್ತಿಗೆ ಹಾಕಿ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಸ್ಮಶಾನಕ್ಕೆ ಹೋಗುವ ದಾರಿ ದುರಸ್ತಿ ಮಾಡಿಸಿಕೊಡುವಂತೆ ಆಗ್ರಹಿಸಿದ ಘಟನೆ ಶುಕ್ರವಾರ ನಡೆಯಿತು.

ಬಟ್ಟೂರಿನಲ್ಲಿ 15 ದಿನಗಳಿಂದ ನೀರಿಗಾಗಿ ಪರಿತಪಿಸುತ್ತಿರುವ ಜನತೆಲಕ್ಷ್ಮೇಶ್ವರ: ಸಮೀಪದ ಬಟ್ಟೂರ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಗ್ರಾಮಸ್ಥರು ಕೊಡಗಳನ್ನು ಹಿಡಿದು ಗ್ರಾಪಂಗೆ ಮುತ್ತಿಗೆ ಹಾಕಿ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಸ್ಮಶಾನಕ್ಕೆ ಹೋಗುವ ದಾರಿ ದುರಸ್ತಿ ಮಾಡಿಸಿಕೊಡುವಂತೆ ಆಗ್ರಹಿಸಿದ ಘಟನೆ ಶುಕ್ರವಾರ ನಡೆಯಿತು.

ನೀರಿಗಾಗಿ ಕೊಡಗಳನ್ನು ಹಿಡಿದು ಓಣಿಯಿಂದ ಓಣಿಗೆ ಅಲೆಯುತ್ತಿದ್ದರೂ ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಇತ್ತ ಕಡೆಗೆ ಗಮನಹರಿಸುತ್ತಿಲ್ಲ. ಆದ್ದರಿಂದ ಗ್ರಾಪಂಗೆ ಕೊಡಗಳನ್ನು ಹಿಡಿದು ಮುತ್ತಿಗೆ ಹಾಕಬೇಕಾಯಿತು ಎಂದು ಗ್ರಾಮದ ವೃದ್ಧರಾದ ಗಂಗವ್ವ ಚೌಡಾಳ ಹಾಗೂ ಫಕ್ಕೀರವ್ವ ಕುರ್ತಕೋಟಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಯಲ್ಲವ್ವ ಬಾರಕೇರ ಮಾತನಾಡಿ, ಗ್ರಾಮೀಣ ಭಾಗದ ಪ್ರತಿ ಮನೆಗೂ ದಿನದ 24 ತಾಸು ಕುಡಿಯುವ ನೀರಿನ ಯೋಜನೆಯ ಜಲ ಜೀವನ್ ಮಿಷನ್‌ನ ನೀರು ಕೂಡಾ ಬರುತ್ತಿಲ್ಲ, ಕಳೆದ ಒಂದು ವಾರದಿಂದ ಹೊಲ ಮನಿ ಕೆಲಸ ಬಿಟ್ಟು ನೀರು ತರುವುದೇ ಕಾಯಕವಾಗಿದೆ. ಮಯೋವೃದ್ದರು ಕುಡಿಯುವ ನೀರು ಇಲ್ಲದೆ ಯಾತನೆ ಅನುಭವಿಸುವಂತಾಗಿದೆ. ಮಕ್ಕಳು ಮಹಿಳೆಯರು ವೃದ್ಧರು ನೀರು ಇಲ್ಲದೆ ಇರುವುದರಿಂದ ಸ್ನಾನ ಸಹ ಮಾಡಲು ಆಗದೆ ಪರದಾಡುವಂತಾಗಿದೆ. ಸಾರ್ವಜನಿಕ ನಲ್ಲಿಯು ಕೆಟ್ಟು ಹಲವು ತಿಂಗಳಾದರೂ ಗ್ರಾಪಂ ಆಡಳಿತ ಮಂಡಳಿ ದುರಸ್ತಿ ಮಾಡಿಸುವ ಕಾರ್ಯ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಗಂಗವ್ವ ಚೌಡಾಳ ಮಾತನಾಡಿ, ಗ್ರಾಮೀಣ ಮಹಿಳೆಯರು ವೈಯಕ್ತಿಕ ಹಾಗೂ ಸಾರ್ವಜನಿಕ ಶೌಚಾಲಯವಿಲ್ಲದೆ ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಪು.ಬಡ್ನಿಯ ರಸ್ತೆಯ ಪಕ್ಕದಲ್ಲಿನ ಗಿಡಗಂಟಿಗಳನ್ನು ಮಹಿಳೆಯರು ತಮ್ಮ ಶೌಚಕ್ಕಾಗಿ ಮೊರ ಹೋಗಬೇಕಾಗಿರುವುದು ದುರಂತವಾಗಿದೆ. ಸಣ್ಣ ಪುಟ್ಟ ಗುಡಿಸಲಲ್ಲಿ ವಾಸ ಮಾಡುತ್ತಿರುವ ಮಹಿಳೆಯರು ವೈಯಕ್ತಿಕ ಶೌಚಾಲಯಗಳು ಇಲ್ಲದೆ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಗ್ರಾಮದಲ್ಲಿ ಇದ್ದ ಸಾರ್ವಜನಿಕ ಶೌಚಾಲಯವನ್ನು ಕೆಡವಿ ಹಾಕಿದ್ದು ಮತ್ತೆ ನೂತನ ಶೌಚಾಲಯ ಕಟ್ಟಿಸಿಕೊಡುವ ಭರವಸೆ ನೀಡುವವರೆಗೆ ನಾವು ಇಲ್ಲಿಂದ ಎದ್ದು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.ಈ ವೇಳೆ ಈರಣ್ಣ ಬಾರಕೇರ ಮಾತನಾಡಿ, ಊರಿನಲ್ಲಿ ಸ್ಮಶಾನ ಇದ್ದರೂ ಅಲ್ಲಿಗೆ ಹೋಗಲು ಸರಿಯಾದ ದಾರಿ ಇಲ್ಲದೆ ಶವಗಳನ್ನು ಹೊತ್ತು ಸಾಗುವುದು ಅಸಾಧ್ಯದ ಮಾತಾಗಿದೆ. ಶೀಘ್ರದಲ್ಲಿ ಸ್ಮಶಾನಕ್ಕೆ ದಾರಿ ಮಾಡಿ ಕೊಡದೆ ಹೋದಲ್ಲಿ ಇನ್ನು ಮುಂದೆ ಯಾರಾದರೂ ನಮ್ಮೂರಲ್ಲಿ ಮರಣ ಹೊಂದಿದರೆ ಅವರ ಶವಗಳನ್ನು ಗ್ರಾಪಂ ಎದುರು ಸುಡುವ ಕಾರ್ಯ ಮಾಡುವ ದಿನಗಳು ದೂರ ಇಲ್ಲ ಎಂದು ಹೇಳಿದರು. ಈ ವೇಳೆ ಗ್ರಾಪಂಗೆ ಆಗಮಿಸಿದ್ದ ತಾಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯನ್ನು 2-3 ದಿನಗಳಲ್ಲಿ ಪರಿಹರಿಸಿ ಕೊಡುವ ಕಾರ್ಯ ಮಾಡುತ್ತೇವೆ. ಸ್ವತಃ ನಾವೇ ನಿಂತು ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಿಕೊಡುತ್ತೇವೆ. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ನಮ್ಮದೇನೂ ಅಭ್ಯಂತರವಿಲ್ಲ ಆದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಹಿಂದೆ ಇದ್ದ ಸಾಮೂಹಿಕ ಶೌಚಾಲಯವನ್ನು ಕೆಡವಿ ಹಾಕಲಾಗಿದೆ. ಮಹಿಳೆಯರ ಕಷ್ಟ ನಮಗೆ ಅರ್ಥವಾಗುತ್ತದೆ. ಆದರೆ ಸರ್ಕಾರದ ಮಾರ್ಗದರ್ಶನದಂತೆ ನಡೆದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಶೌಚಾಲಯವನ್ನು 3 ತಿಂಗಳ ಅವಧಿಯಲ್ಲಿ ನಿರ್ಮಿಸಿಕೊಡುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ಗ್ರಾಪಂ ಅಧ್ಯಕ್ಷ ಜಗದೀಶಗೌಡ ಪಾಟೀಲ ಮಾತನಾಡಿ, ನಮ್ಮೂರಿನಲ್ಲಿ ಸ್ಮಶಾನ ಇದೆ ಆದರೆ ಅಲ್ಲಿಗೆ ಹೋಗಲು ದಾರಿಯ ಸಮಸ್ಯೆ ಇದ್ದು ಅದಕ್ಕಾಗಿ ಈ ಹಿಂದೆ ಹಲವಾರು ಬಾರಿ ಗ್ರಾಮಸ್ಥರು ಪ್ರಯತ್ನ ನಡೆಸಿದ್ದಾರೆ, ಅದು ಕೂಡಾ ಫಲಪ್ರದವಾಗಿಲ್ಲ ಆದ್ದರಿಂದ ಗ್ರಾಮದಲ್ಲಿ ಇನ್ನೊಮ್ಮೆ ಗ್ರಾಮಸ್ಥರ ಸಭೆ ನಡೆಸಿ ಸ್ಮಶಾನಕ್ಕೆ ದಾರಿ ಮಾಡಿ ಕೊಡುವ ಕಾರ್ಯಕ್ಕೆ ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ನಿಂಗವ್ವ ರೋಣದ, ನೂರಜಹಾನ ಸುಂಕದ, ಸವಿತಾ ಕಮ್ಮಾರ, ಶೃತಿ ವಡವಿ, ಹೀನಾಕೌಶರ ನದಾಫ್,ಯಲ್ಲವ್ವ ಹಾವನೂರ, ಕಾಶವ್ವ ಚೌಡಾಳ, ಶೇಖವ್ವ ತಳವಾರ, ಜ್ಯೋತಿ ಹಿರೇಮಠ, ಪ್ರೇಮಾ ಬಾರಕೇರ, ಸತೀಶ ಅತ್ತಿಗೇರಿ, ಮಹಾದೇವಪ್ಪ ಉಡಚಗೌಡ್ರ, ಗ್ರಾಪಂ ಪಿಡಿಓ ಮಂಜುನಾಥ ಮಾದರ, ಗ್ರಾಪಂ ಸದಸ್ಯ ಮಾಲತೇಶ ಹೊಳಲಾಪೂರ, ನಾಗಪ್ಪ ಹೂಗಾರ, ಯಲ್ಲಪ್ಪ ಹೊಳಲಾಪೂರ, ಕಿರಣ ಹಿರೇಮಠ ಇದ್ದರು.

Share this article