ರೋಣ: ಮೊಹರಂ ಕೊನೆಯ ದಿನವಾದ ಗುರುವಾರ ರಾತ್ರಿ ಪಂಜಾ ಮೆರವಣಿಗೆ ವೇಳೆ ತಾಲೂಕಿನ ಅರಹುಣಸಿ ಮತ್ತು ಹಿರೇಮಣ್ಣೂರ ಗ್ರಾಮಸ್ಥರ ಮಧ್ಯೆ ಗಲಾಟೆ, ತಳ್ಳಾಟ ಉಂಟಾಗಿದೆ.
ಘಟನೆ ವಿವರ:
ತಾಲೂಕಿನಾದ್ಯಂತ ಮಂಗಳವಾರ ಕತ್ತಲ ರಾತ್ರಿ ಆಚರಿಸಿ ಬುಧವಾರ ರಾತ್ರಿ ಮೊಹರಂ ಹಬ್ಬಕ್ಕೆ ವಿದಾಯ ಹೇಳಲಾಗಿತ್ತು. ಆದರೆ ಅರಹುಣಸಿ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತೆ ದೇವಮ್ಮದೇವಿಯರ ಜಾತ್ರೆಯ ಹಿನ್ನೆಲೆ ಎರಡು ಗ್ರಾಮನವರು ಕತ್ತಲ ರಾತ್ರಿಯನ್ನು ಬುಧವಾರ ಆಚರಿಸಿ ಪಂಜಾಗಳ (ಅಲೈದೇವರ) ವಿಸರ್ಜನೆಯನ್ನು ಗುರುವಾರ ರಾತ್ರಿ ಹಮ್ಮಿಕೊಳ್ಳುವುದಾಗಿ ಪರಸ್ಪರ ನಿರ್ಧರಿಸಿದ್ದರು. ಅದರಂತೆ ಗ್ರಾಮಸ್ಥರು ಬುಧವಾರ ಕತ್ತಲ ರಾತ್ರಿ ಆಚರಿಸಿ ಗುರುವಾರ ಪಂಜಾಗಳ ವಿಸರ್ಜನೆ ಹಮ್ಮಿಕೊಂಡಿದ್ದರು. ಸಂಪ್ರದಾಯದ ಪ್ರಕಾರ ಮೊಹರಂ ಕೊನೆಯ ದಿನದಂದು ಎರಡು ಗ್ರಾಮಗಳ ಮಧ್ಯವಿರುವ ಹಿರೇಹಳ್ಳದಲ್ಲಿ ವಿಸರ್ಜನೆ ಮಾಡುತ್ತಾ ಬರಲಾಗುತ್ತಿದೆ. ಈ ಮಧ್ಯ ಅರಹುಣಸಿ ಗ್ರಾಮದಲ್ಲಿನ ಅಲೈದೇವರು ಹಿರೇಮಣ್ಣೂರ ಗ್ರಾಮಕ್ಕೆ ತೆರಳಿ ಅಲ್ಲಿನ ಅಲೈದೇವರನ್ನು ಭೇಟಿ ಮಾಡಿ(ಅಲೈಬಲೈ) ಅಲ್ಲಿ ಕೆಲ ಸಮಯ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ವಾಪಸ್ ಗ್ರಾಮಕ್ಕೆ ಬರುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ.ಅದರಂತೆ ಅರಹುಣಸಿ ಅಲೈದೇವರು ಹಿರೇಮಣ್ಣೂರ ಗ್ರಾಮದಲ್ಲಿನ ಮಸೀದಿ ಒಳಕ್ಕೆ ತೆರಳುತ್ತಿದಂತೆ ಅಲ್ಲಿದ್ದ ಕೆಲವರು, ಆ ಅಲೈ ದೇವರು ನಮ್ಮ ಗ್ರಾಮದ್ದು, ಈ ವರ್ಷ ಕಟ್ಟಿಸಿದ್ದ ಹೊಸ ಮಸೀದಿಯಲ್ಲಿ ತಾನಾಗಿಯೇ ಬಂದಿದ್ದನ್ನು ವಾಪಸ್ ಕೊಡುವುದಿಲ್ಲ ಎನ್ನುತ್ತಾ ಅಲೈ ದೇವರನ್ನು ಹೊತ್ತವರು, ಹಿಡಿದವರನ್ನು ನೂಕಿ ಅಲೈ ದೇವರನ್ನು ಕಿತ್ತುಕೊಂಡಿದ್ದಾರೆ. ಇದರಿಂದ ಎರಡು ಗ್ರಾಮದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು.
ಹಿರೇಮಣ್ಣೂರ ಗ್ರಾಮಕ್ಕೆ ನುಗ್ಗಲು ಯತ್ನ: ಅಲೈ ದೇವರನ್ನು ಬಲವಂತದಿಂದ ಕಿತ್ತುಕೊಂಡ ಸುದ್ದಿ ತಿಳಿಯುತ್ತಿದಂತೆ ಕೆರಳಿದ ಅರಹುಣಸಿ ಗ್ರಾಮಸ್ಥರು ಒಂದಡೆ ಸಭೆ ಸೇರಿ ಹಿರೇಮಣ್ಣೂರ ಗ್ರಾಮಕ್ಕೆ ನುಗ್ಗಿ ನಮ್ಮ ಗ್ರಾಮದ ಅಲೈ ದೇವರನ್ನು ತಂದೇ ತರುವದಾಗಿ ನಿರ್ಧರಿಸಿ ಹಿರೇಮಣ್ಣೂರ ಗ್ರಾಮದೊಳಗೆ ನುಗ್ಗಲು ಯತ್ನಿಸಿದರು. ಆಗ ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಪ್ರಕಾಶ ಬಣಕಾರ ಮಧ್ಯಪ್ರವೇಶಿಸಿ ಅರಹುಣಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿ ತೆರಳದಂತೆ ತಡೆದರು. ಈ ವೇಳೆ ಅರಹುಣಸಿ ಗ್ರಾಮಸ್ಥರು ಪೊಲೀಸರ ಜೀಪ ತಡೆದು, ನಮ್ಮ ಗ್ರಾಮದ ದೇವರನ್ನು ನಮಗೆ ಕೊಡಿಸಿ, ಇಲ್ಲವಾದಲ್ಲಿ ನಮ್ಮನ್ನು ಹಿರೇಮಣ್ಣೂರ ಗ್ರಾಮಕ್ಕೆ ಹೋಗಲು ಬಿಡಿ ಎಂದು ಪಟ್ಟುಹಿಡಿದು ಪ್ರತಿಭಟಿಸಿದರು.
ಅರಹುಣಸಿಗೆ ವಾಪಸ್: ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಪ್ರಕಾಶ ಬಣಕಾರ ಸುಮಾರ 8 ಗಂಟೆಗಳ ಕಾಲ ಎರಡೂ ಗ್ರಾಮಕ್ಕೆ ತೆರಳಿ, ಗ್ರಾಮಸ್ಥರ ಮನವೊಲಿಕೆಗೆ ನಾಲ್ಕೈದು ಬಾರಿ ಸಭೆ ನಡೆಸಿದರು. ಗುರುವಾರ ಸಂಜೆ 8 ಗಂಟೆಯಿಂದ ಶುಕ್ರವಾರ ನಸುಕಿನ ಜಾವ 4 ರವರೆಗೆ ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಪ್ರಕಾಶ ಬಣಕಾರ ಅರಹುಣಸಿ ಮತ್ತು ಹಿರೇಮಣ್ಣೂರ ಗ್ರಾಮಸ್ಥರ ಮನವೊಲಿಕೆ ಮಾಡುವಲ್ಲಿ ಅವಿರತವಾಗಿ ಪ್ರಯತ್ನಿಸಿ ಕೊನೆಗೂ ಅರಹುಣಸಿ ಗ್ರಾಮಸ್ಥರಿಗೆ ಅಲೈ ದೇವರನ್ನು ವಾಪಸ್ ಕೊಡಿಸುವಲ್ಲಿ ಯಶಸ್ವಿಯಾದರು.
ಶಾಂತಿ ಸಮಿತಿ ಸಭೆ ಸಹ ಪೊಲೀಸರು ನಡೆಸಿದ್ದು, ಈ ಹಿಂದೆ ಎರಡು ಗ್ರಾಮಸ್ಥರು ಯಾವ ರೀತಿ ಸಾಮರಸ್ಯದಿಂದ ನಡೆದುಕೊಂಡು ಬಂದಿದ್ದೇವೆಯೋ, ಅದರಂತೆ ಮುಂದೆಯೂ ನಡೆದುಕೊಂಡು ಹೋಗುವದಾಗಿ 2 ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದಾರೆ.