ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ
ಇಲ್ಲಿನ ಗೋಕುಲ ಗ್ರಾಮದ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವೀರೇಶಗೌಡ ಪಾಟೀಲ ಹಾಗೂ ಹನುಮಂತ ಹೊಸಮನಿ ಎಂಬ ವಿದ್ಯಾರ್ಥಿಗಳು ಈ ಸಾಧನ ಕಂಡುಹಿಡಿಯುವ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯ ಮಾಡಿದ್ದಾರೆ.
ವಿಜ್ಞಾನ ಶಿಕ್ಷಕ ಎಸ್.ಬಿ. ಭಾವಿಕಟ್ಟಿ ಹಾಗೂ ಶಿವಪ್ರಸಾದ ಮೇಲಿನಮನಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿ ಯಶಸ್ವಿಗೊಳಿಸಿದ್ದು, ಸತತ 6 ತಿಂಗಳ ಪರಿಶ್ರಮದಿಂದ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಈ ಸಾಧನ ತಯಾರಿಸಿದ್ದಾರೆ.ಹೆದ್ದಾರಿಗಳಲ್ಲಿ ದಿನನಿತ್ಯ ರಸ್ತೆ ಅಪಘಾತಕ್ಕೆ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕೆಲವು ಜಾನುವಾರು ರಸ್ತೆಯ ಮಧ್ಯದಲ್ಲಿಯೇ ಸಂಚರಿಸುತ್ತಿರುತ್ತವೆ. ಸವಾರರು ವೇಗವಾಗಿ ಬಂದು ಜಾನುವಾರು ಇರುವುದನ್ನು ಅರಿಯದೇ ಬಂದು ಅಪಘಾತಕ್ಕೆ ಗುರಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಗೋಕುಲದ ವಿದ್ಯಾರ್ಥಿಗಳು ಆವಿಷ್ಕರಿಸಿರುವ ಪಿಐಆರ್ ಸಾಧನ ಇಂತಹ ಅಪಘಾತಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ: ಈಚೆಗೆ ಕಲಬುರಗಿಯ ಸೇಡಂನಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರಲ್ಲಿ ಈ ವಿದ್ಯಾರ್ಥಿಗಳು "ಹೆದ್ದಾರಿಯಲ್ಲಿ ಬಲಿಯಾಗುತ್ತಿರುವ ಪ್ರಾಣಿಗಳ ಸಾವು ತಡೆಯುವಲ್ಲಿ ತಂತ್ರಜ್ಞಾನದ ಬಳಕೆ " ಎಂಬ ಸಂಶೋಧನಾ ಪ್ರಬಂಧ ಮಂಡಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಯುವ ವಿಜ್ಞಾನಿಗಳು ಎಂಬ ಪ್ರಶಸ್ತಿ ಪಡೆದಿದ್ದಾರೆ. ಕಳೆದ 15 ವರ್ಷಗಳ ನಂತರ ಮೊದಲ ಬಾರಿಗೆ ಧಾರವಾಡ ಜಿಲ್ಲೆಯ ಮಕ್ಕಳು ರಾಷ್ಟ್ರೀಯ ಸಮಾವೇಶಕ್ಕೆ ಆಯ್ಕೆಯಾಗಿರುವುದು ವಿಶೇಷ.
ಹೇಗೆ ಕಾರ್ಯನಿರ್ವಹಿಸುತ್ತದೆ?: ಈಗಾಗಲೇ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಗೋಕುಲಕ್ಕೆ ಹೊಂದಿಕೊಂಡಿರುವ ಎನ್‌ಎಚ್-48 ಹೆದ್ದಾರಿಯಲ್ಲಿ ಈ ಸಾಧನವನ್ನು ಅಳವಡಿಸಿ ಹಲವು ಸವಾರರಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡಿ, ರಸ್ತೆಯ ಪಕ್ಕದಲ್ಲಿ ಕೆಂಪುದೀಪ ಅಳವಡಿಸಿದ ಕಂಬವನ್ನು ನಿಲ್ಲಿಸಿ ಅಲ್ಲಿ ಈ ಪಿಐಆರ್ ಸಾಧನ ಅಳವಡಿಸಲಾಗಿತ್ತು. 500 ಮೀಟರ್ ದೂರದಲ್ಲಿ ರಸ್ತೆಯ ಮೇಲೆ ಜಾನುವಾರುಗಳು ಸಂಚರಿಸುತ್ತಿದ್ದರೆ ಈ ಸಾಧನ ಪ್ರಾಣಿಗಳ ದೇಹದ ಉಷ್ಣತೆ ಗ್ರಹಿಸುತ್ತದೆ. ವಾಹನಗಳು ಬರುತ್ತಿದ್ದಂತೆ ಕೆಂಪುದೀಪದ ಮೂಲಕ ಸವಾರರಿಗೆ ನಿಧಾನವಾಗಿ ಚಲಿಸುವಂತೆ ಸೂಚನೆ ನೀಡುತ್ತದೆ.