ಮಾಗಡಿ: ವಿಧಾನಪರಿಷತ್ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೇ ಆತ್ಮಸಾಕ್ಷಿಗೆ ಮತ ಹಾಕಿ ಎಂದು ಕೇಳಿಕೊಂಡಿದ್ದರು, ಅದರಂತೆ ಎಲ್ಲ ಶಾಸಕರು ಅವರವರ ಆತ್ಮಸಾಕ್ಷಿಗೆ ತಕ್ಕಂತೆ ಮತ ಚಲಾಯಿಸಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಆತ್ಮಸಾಕ್ಷಿಗೆ ಮತ ಹಾಕಿದ ಮೇಲೆ ಅದು ಹೇಗೆ, ಯಾರಿಗೆ ಎಂದು ಪ್ರಶ್ನೆ ಮಾಡುವ ಅಗತ್ಯವಿಲ್ಲ. ಅಲ್ಲದೆ ಫಲಿತಾಂಶ ಬಂದಿದ್ದು ಅದು ಮುಗಿದ ಕಥೆ ಎಂದು ಉತ್ತರಿಸಿದರು.

ಒಕ್ಕಲಿಗ ನಾಯಕತ್ವದ ಅಪಪ್ರಚಾರಕ್ಕೆ ಟಾಂಗ್:

ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪ್ರಭಾವದ ನಡುವೆ ಒಕ್ಕಲಿಗ ಸಮುದಾಯದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ತುಳಿಯಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಮೇಲೆ ನಮ್ಮ ಸಮುದಾಯದ ಬೆಂಬಲ ಮತ್ತು ನಾಯಕತ್ವದ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ. ಯಾವುದೇ ಒಬ್ಬ ನಾಯಕ ಬೆಳೆದಾಗ ಅವರ ಹಿಂದೆ ಅಭಿಮಾನ ಇರುವುದು ಸಹಜ. ಇದರಲ್ಲಿ ಯಾರೂ ಹೊಟ್ಟೆಕಿಚ್ಚು, ಅಸೂಯೆ ಪಡಬಾರದು ಮತ್ತು ತಂತ್ರಗಾರಿಕೆ ಮಾಡಬಾರದು ಎಂದು ಪ್ರತಿಕ್ರಿಯಿಸಿದರು.

ಎಲ್ಲರೂ ಗಾಜಿನ ಮನೆಯಲ್ಲಿದ್ದಾರೆ, ಕಲ್ಲು ಹೊಡೆದರೆ ಎಲ್ಲರ ಗಾಜು ಪುಡಿಪುಡಿಯಾಗುತ್ತದೆ. ಹಾಗಾಗಿ ಗಾಜಿನ ಮನೆಯಲ್ಲಿದ್ದುಕೊಂಡು ಯಾರೂ ತಂತ್ರಗಾರಿಕೆ ಮಾಡಬಾರದು. ಈ ಹಿಂದೆ ಅವರಿಗೆ ಅವಕಾಶ ಸಿಕ್ಕಾಗ ಅವರು ಮಾಡಿದ್ದಾರೆ. ಈಗ ಇವರಿಗೆ ಸಿಕ್ಕಾಗ ಇವರು ಮಾಡುತ್ತಾರೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.


ಬಿಡದಿ ಭೂಸ್ವಾಧೀನದ ವಿರುದ್ಧ ಜೆಡಿಎಸ್ ಪಾದಯಾತ್ರೆ ಹಾಗೂ ಪ್ರತಿಭಟನೆ‌ ಕೈಗೊಂಡಿರುವ ಪಾದಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ, ನಮ್ಮ ದೇಶದಲ್ಲಿ ಹೋರಾಟ ಮಾಡುವುದು ಮತ್ತು ರಾಜಕೀಯವಾಗಿ ಹಕ್ಕು ಚಲಾಯಿಸುವುದು ಎಲ್ಲರಿಗೂ ಇರುವ ಸ್ವಾತಂತ್ರ್ಯ. ಅವರು ಹೋರಾಟ ಮಾಡಿಕೊಳ್ಳಲಿ, ನಾವೇನೂ ಬೇಡ ಎನ್ನುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಬಿಡದಿಯಲ್ಲಿ ಶೇ.೮೦ರಷ್ಟು ರೈತರು ತಾವಾಗಿಯೇ ಬಂದು ಚೆಕ್ ನೀಡುವಂತೆ ಪತ್ರ ಬರೆದುಕೊಟ್ಟಿದ್ದಾರೆ. ಅವರಿಗೆ ಇಂದಿನಿಂದಲೇ ಚೆಕ್ ವಿತರಣೆ ಆರಂಭಿಸಲಾಗಿದೆ. ಇನ್ನುಳಿದ ಶೇ.೨೦ರಷ್ಟು ರೈತರು ಬಂದು ಚೆಕ್ ಪಡೆದುಕೊಳ್ಳಬಹುದು. ಬರದೇ ಇದ್ದರೆ ಆ ಹಣವನ್ನು ಕಾನೂನುಬದ್ಧವಾಗಿ ಕೋರ್ಟ್‌ಗೆ ಕಟ್ಟಲಾಗುವುದು ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.

ವಿರೋಧ ಪಕ್ಷಗಳ ''''''''ದಮ್ಮು-ತಾಕತ್ತು'''''''' ಎಂಬ ಸವಾಲುಗಳ ಕುರಿತು ಮಾತನಾಡಿದ ಬಾಲಕೃಷ್ಣ, ನಮಗೆ ಯಾವುದೇ ದಮ್ಮು ಅಥವಾ ತಾಕತ್ತಿನ ಪ್ರದರ್ಶನ ಬೇಕಾಗಿಲ್ಲ. ಜನ ನಮಗೆ ವಿನಯವಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಅದನ್ನು ನಾವು ಮಾಡುತ್ತೇವೆ. ತಾಕತ್ತು ಇರುವವರು ಅದನ್ನು ತೋರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.