ಶಾಸ್ತ್ರೀಯ ಯಕ್ಷಗಾನ ಪ್ರದರ್ಶನ ಸ್ತುತ್ಯರ್ಹ ಬೆಳವಣಿಗೆ: ಡಾ.ತಲ್ಲೂರು

KannadaprabhaNewsNetwork |  
Published : Jul 30, 2024, 12:30 AM IST
ತಲ್ಲೂರು29 | Kannada Prabha

ಸಾರಾಂಶ

ಕಟಪಾಡಿಯ ವನಸುಮ ಟ್ರಸ್ಟ್ ಸಹಭಾಗಿತ್ವದಲ್ಲಿ ಖ್ಯಾತ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಹುಟ್ಟುಹಾಕಿರುವ ಶಾಸ್ತ್ರೀಯ ಯಕ್ಷ ಮೇಳ ಉಡುಪಿ ವತಿಯಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಋತುಪರ್ಣ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಂದು ಆಧುನಿಕತೆಯನ್ನು ಮೇಳೈಸಿಕೊಂಡು ವಿಜೃಂಭಿಸುತ್ತಿರುವ ಯಕ್ಷಗಾನ ಪ್ರದರ್ಶನದ ಅಬ್ಬರದ ನಡುವೆ ಶಾಸ್ತ್ರೀಯ ರೀತಿಯಲ್ಲಿ ಯಕ್ಷಗಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವ ವಿದ್ವಾಂಸ ಡಾ.ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಶ್ಲಾಘನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಕಟಪಾಡಿಯ ವನಸುಮ ಟ್ರಸ್ಟ್ ಸಹಭಾಗಿತ್ವದಲ್ಲಿ ಖ್ಯಾತ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಹುಟ್ಟುಹಾಕಿರುವ ಶಾಸ್ತ್ರೀಯ ಯಕ್ಷ ಮೇಳ ಉಡುಪಿ ವತಿಯಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಭಾನುವಾರ ನಡೆದ ಋತುಪರ್ಣ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಹಿಂದೆ ಹೇಗಿತ್ತು ಎಂಬುದರ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವಿಲ್ಲ. ಇಂದು ಆಧುನಿಕತೆಯ ಕಾಲಘಟ್ಟದಲ್ಲಿ ಯಕ್ಷಗಾನ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಕಲಾವಿದರಿಗೆ ಉತ್ತಮ ಸಂಪಾದನೆಯ ದಾರಿ ನೀಡಿದೆ. ಹಿಂದಿನ ಯಕ್ಷಗಾನವನ್ನು ಕಂಡವರು, ಇಂದಿನ ಬದಲಾವಣೆಗಳನ್ನು ಕಂಡು ವ್ಯಥೆ ಪಟ್ಟಿರುವುದನ್ನು ಕಂಡಿದ್ದೇನೆ ಎಂದರು.

ಈ ಸಂದರ್ಭ ಯಕ್ಷಗಾನದ ಶಾಸ್ತ್ರೀಯ ಮುಖ ಅಳಿದು ಹೋಗಬಾರದು ಎನ್ನುವ ತುಡಿತದೊಂದಿಗೆ ಅದನ್ನು ಕಾರ್ಯರೂಪಕ್ಕೆ ತಂದಿರುವ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಅಭಿನಂದನೀಯ. ಅವರೊಂದಿಗೆ ಪ್ರಸಿದ್ಧ ರಂಗನಿರ್ದೇಶಕ ಬಾಸುಮ ಕೊಡಗು ಅವರ ಚಿಂತನೆಗಳು ಮೇಳೈಸಿರುವುದು, ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರ ಕಲಾ ಪ್ರೋತ್ಸಾಹ ಇದೆಲ್ಲವನ್ನು ಕಂಡಾಗ ಕರಾವಳಿಯಲ್ಲಿ ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎಂಬುದು ವೇದ್ಯವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ರಂಗ ಪ್ರಯೋಗಗಳು ವಿಶಿಷ್ಟವಾಗಿರುವುದನ್ನು ಕಂಡಿದ್ದೇನೆ. ಶಾಸ್ತ್ರೀಯ ಯಕ್ಷಮೇಳವನ್ನು ಹುಟ್ಟುಹಾಕಿ ಆ ಮೂಲಕ ಯುವ ಪೀಳಿಗೆಗೆ ಶಾಸ್ತೀಯ ಯಕ್ಷಗಾನವನ್ನು ಪರಿಚಯ ಮಾಡಲು ಹೊರಟ ಅವರ ಪ್ರಯತ್ನ ಶ್ಲಾಘನೀಯ ಎಂದರು.ವನಸುಮ ಟ್ರಸ್ಟ್‌ ಮುಖ್ಯಸ್ಥ, ರಂಗ ನಿರ್ದೇಶಕ ಬಾಸುಮ ಕೊಡಗು ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದ ರೂವಾರಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ, ಕಾರ್ಯದರ್ಶಿ ವಿನಯ ಆಚಾರ್ಯ ಮುಂಡ್ಕೂರು, ಗಣೇಶ್ ರಾವ್ ಎಲ್ಲೂರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಬಳಿಕ ಪ್ರದರ್ಶನಗೊಂಡ ಋತುಪರ್ಣ ಯಕ್ಷಗಾನ ಪ್ರದರ್ಶನದಲ್ಲಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಋತುಪರ್ಣನಾಗಿ ಪಾತ್ರ ವಹಿಸಿದರು. ಬಾಹುಕನಾಗಿ ಪ್ರತೀಶ್ ಕುಮಾರ್ ಬ್ರಹ್ಮಾವರ, ಶನಿ ಪಾತ್ರದಲ್ಲಿ ಶ್ರೀನಿವಾಸ ತಂತ್ರಿ ಪಾದೂರು ಮಿಂಚಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶಶಿಕಿರಣ ಮಣಿಪಾಲ, ಮದ್ದಳೆ ಕೆ.ಜೆ.ಸುಧೀಂದ್ರ ಹಾಗೂ ಚೆಂಡೆಯಲ್ಲಿ ಕೆ.ಜೆ.ಕೃಷ್ಣ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ