ಕನ್ನಡಪ್ರಭ ವಾರ್ತೆ ಬೇಲೂರು
ಒಂದು ಪ್ರಾಂತ್ಯ ಸಾಹಿತ್ಯಾತ್ಮಕವಾಗಿ ಪ್ರಬಲವಾಗಿ ಬೆಳೆದಿದೆ ಎಂಬುದು ಆ ಪ್ರಾಂತ್ಯದ ಶ್ರೀಮಂತಿಕೆಯನ್ನು ಸಾಕ್ಷೀಕರಿಸುತ್ತದೆ. ಹಾಗೆ ಆಗಬೇಕಾದರೆ ಸಾಹಿತಿಗಳನ್ನು ಪ್ರೋತ್ಸಾಹಿಸುವ ಪ್ರವೃತ್ತಿ ಮತ್ತು ಸಹೃದಯತೆ ಬಲಗೊಳ್ಳಬೇಕಿರುವುದು ಅಗತ್ಯ ಎಂದು ಸಾಹಿತಿ ಚಲಂ ಹಾಡ್ಲಹಳ್ಳಿ ಹೇಳಿದರು.ಪಟ್ಟಣದ ಚನ್ನಕೇಶವ ಸಭಾಂಗಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ. ಬೇಲೂರು ರಘುನಂದನ್ ಅಭಿನಂದನಾ ಸಮಿತಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೇಲೂರು ಮತ್ತಷ್ಟು ಧೃಡಗೊಳ್ಳಬೇಕಿದೆ. ಸಾಹಿತ್ಯದ ಕಡೆಗಿನ ನಿರಾಸಕ್ತಿ ಸಮಾಜದ ಸ್ವಾಸ್ಥ್ಯವನ್ನು ಪುನರ್ ಸ್ಥಾಪಿಸುವಿಕೆಯಲ್ಲಿ ತೊಡಕ್ಕುಂಟು ಮಾಡುತ್ತದೆ ಎಂಬ ಕಿವಿಮಾತಿನೊಟ್ಟಿಗೆ ಸಾಂಸ್ಕೃತಿಕ, ರಾಜಕೀಯದಾಚೆ ಸಾಹಿತ್ಯ ಮತ್ತು ಸಂಸ್ಕೃತಿ ಕಟ್ಟುವ ಕೆಲಸವನ್ನು ಬೇಲೂರು ಸಮರ್ಥವಾಗಿ ನಿರ್ವಹಿಸಲು ಕಂಕಣಬದ್ಧರಾಗುವಂತೆ ಕರೆ ನೀಡಿದರು.ಬೇಲೂರು ರಘುನಂದನ್ ರವರು ವಾಸ್ತವಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸುವ ಕವಿ. ಸಮಾಜದ ನಿರೀಕ್ಷೆಗಳ ಜ್ವಲಂತ ಸಾಕ್ಷಿಗಳಾಗಿ ನಾಟಕ ಹೆಣೆಯುವ ಪ್ರೌಢ ಸಾಹಿತಿ ಮತ್ತು ತನ್ನ ತಾಯಿನೆಲಕ್ಕೆ ತನ್ಮೂಲಕ ಸಲ್ಲುವ ಕೀರ್ತಿಯನ್ನು ಶ್ರದ್ಧಾ ಪೂರ್ವಕವಾಗಿ ನೀಡಲು ಹಪಹಪಿಸುತ್ತಿರುವ ಭಾವನಾಜೀವಿ ಎಂಬುದನ್ನು ಅವರ ಸಹೃದಯತೆಯ ಹಲವು ಮಜಲುಗಳನ್ನು ಅನಾವರಣಗೊಳಿಸುವ ಮುಖೇನ ಸಾಕ್ಷೀಕರಿಸಿದ್ದಾರೆ ಎಂದರು.
ಬೇಲೂರಿನ ಶಾಸಕರಾದ ಎಚ್. ಕೆ. ಸುರೇಶ್ ರವರು ಉದ್ಘಾಟಿಸಿ ಮಾತನಾಡಿ, ಬೇಲೂರಿನ ಸಾಹಿತ್ಯ ಪರಂಪರೆಗೆ ರಘುನಂದನ್ ರವರು ಕಿರೀಟಪ್ರಾಯರಾಗಿ ಬೆಳೆಯುತ್ತಿರುವುದು ಬೇಲೂರಿನ ಜನತೆಗೆ ಹರ್ಷ ತಂದಿದೆ. ಅವರ ಸಾಹಿತ್ಯ ಸಾಧನೆ ಮತ್ತಷ್ಟು ಮೆರುಗುವಂತಾಗಲಿ ಎಂದು ಶುಭ ಹಾರೈಸಿದರು.ಸಾಹಿತಿ, ಸಮಾಜಮುಖಿ ಚಿಂತಕರು, ೯ನೇ ಬೇಲೂರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಆಗಿದ್ದ ಇಂದಿರಮ್ಮನವರು ಮಾತನಾಡಿ, ಬೇಲೂರಿನ ನಮ್ಮ ರಘು ದೇಶವೇ ತಿರುಗಿನೋಡುವ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ವಿಚಾರ. ತನ್ನ ಪ್ರತಿಭೆಯ ಮೇಲೆ ತನಗಿರುವ ಅಚಲ ನಂಬಿಕೆ, ಸತತ ಅಧ್ಯಯನ, ಗುರಿಯತ್ತ ನಡೆಸಿದ ಹಠಭರಿತ ಪರಿಶ್ರಮ, ಅಗಾಧವಾದ ಜೀವನ ಚೈತನ್ಯ ಮತ್ತು ಸಾಧಿಸುವ ಛಲ ಇಂದು ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ನಾವು ಕಂಡ ರಘು ಇಂದು ದೇಶಾದ್ಯಂತ ರಘುನಂದನ್ ಆಗುವ ಜೊತೆಗೆ ತನ್ನೊಂದಿಗೆ ಬೇಲೂರಿನ ಹಿರಿಮೆಯನ್ನು ಬೆಳೆಸುತ್ತಿರುವುದು ಪ್ರಶಂಸನೀಯವೆಂದು ತಿಳಿಸಿದರು.
ಸಾಹಿತ್ಯ ಪರಿಷತ್ತು ಬೇಲೂರು ಘಟಕದ ಅಧ್ಯಕ್ಷ ಮಾ. ನ. ಮಂಜೇಗೌಡರು ಮಾತನಾಡಿ, ರಘುನಂದನ್ ರವರಿಗೆ ಶುಭ ಕೋರಿದರು.ಡಾ. ಬೇಲೂರು ರಘುನಂದನ್ ಅಭಿನಂದನಾ ಸಮಿತಿಯ ಅಧ್ಯಕ್ಷ, ಮಾಜಿ ಪುರಸಭೆ ಅಧ್ಯಕ್ಷ, ಶ್ರೀ ಸಿ.ಎನ್ ದಾನಿಯವರು ಮಾತನಾಡಿ, ತಮ್ಮ ಶಿಕ್ಷಕರಾಗಿ ಕಂಡಿದ್ದ ರಘುನಂದನ್ ರವರು ಇಂದಿನ ಶ್ರೇಷ್ಠ ಕವಿ, ಸಾಹಿತಿ, ನಾಟಕಕಾರ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ರಂಗಸಾಹಿತ್ಯದ ರಚನಕಾರ ಮತ್ತು ಗಾಯಕನಾಗಿಯೂ ತಮ್ಮ ಅಖಂಡ ಪ್ರತಿಭೆಯನ್ನು ದೇಶಾದ್ಯಂತ ಪಸರಿಸುವಾಗ ಅವರ ಶಿಷ್ಯರಾದ ನಮಗೆ ಧನ್ಯಭಾವ ಮೂಡುತ್ತಿದೆ. ಇವರಿಂದ ಮತ್ತಷ್ಟು ಸಾಹಿತ್ಯ ರಚಿತವಾಗಲಿ, ಅವು ವಿಶ್ವ ಮಾನ್ಯ ಕೀರ್ತಿಗೆ ಭಾಜನವಾಗಲಿ ಎಂದು ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ನಾಟಕಕಾರ, ಕವಿ ಡಾ ಬೇಲೂರು ರಘುನಂದನ್, ನಾವು ಎಷ್ಟೇ ಬೆಳೆದರೂ ನಮ್ಮ ಊರಿನ, ನೀರಿನ ಋಣ ತೀರಿಸಲೇ ಬೇಕು. ಆ ಕಾರಣಕ್ಕಾಗಿ ಬೇಲೂರಿನಲ್ಲಿ ಹೆಚ್ಚೆಚ್ಚು ಕೆಲಸ ಮಾಡುವ ಮನಸ್ಸು ಮಾಡಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ ಬೇಲೂರು ಕಸಾಪದ ಮಾಜಿ ಅದ್ಯಕ್ಷ ಶ್ರೀ ರಾಜೇಗೌಡ, ಸಾಹಿತಿಗಳಾದ ಶ್ರೀ ಹಾಡ್ಲಹಳ್ಳಿ ನಾಗರಾಜ್ , ಸಾಹಿತಿಗಳಾದ ಶ್ರೀಮತಿ ದಯಾಗಂಗನಘಟ್ಟ, ಹಿರಿಯರಾದ ಮಾ.ಶಿವಮೂರ್ತಿಯವರು ಉಪಸ್ಥಿತಿ ಇದ್ದರು.
ಯುವಸಾಹಿತಿ ಪಲ್ಲವಿ ಬೇಲೂರು ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಅಧ್ಯಾಪಕ ಲಕ್ಷ್ಮಣ್ ಪ್ರಾರ್ಥನೆ ಮಾಡಿದರು.