ಮಳೆಗೆ ಹಾನಿಯಾದ ಮನೆ, ಬೆಳೆಗೆ ಸೂಕ್ತ ಪರಿಹಾರ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Jul 30, 2024 12:30 AM

ಸಾರಾಂಶ

ಬೆಳೆ ಹಾನಿಯಾದಂತಹ ಜಮೀನಗಳ ಸರ್ವೇ ಮಾಡಿ ಸರ್ಕಾರಕ್ಕೆ ನಿಖರವಾದ ವರದಿ ಸಲ್ಲಿಸಬೇಕು. ಸಕಾಲಕ್ಕೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಸಚಿವರ ಸೂಚನೆ

ಕನ್ನಡಪ್ರಭ ವಾರ್ತೆ ಬೀದರ್‌

ಅರಣ್ಯ, ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಾಲೂಕಿನ ಖಾಶೆಂಪೂರ, ಕಾಡವಾದ ಹಾಗೂ ಚಟನಳ್ಳಿ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಮನೆ ಹಾಗೂ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭಾಗಶಃ ಹಾನಿಯಾದ ಮನೆಗಳಿಗೆ ₹6,500 ಪರಿಹಾರ ಧನ ಹಾಗೂ ಮಂಜೂರಾತಿ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ನೀಡಿ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅವರು ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಬಹಳಷ್ಟು ಜನರ ಮನೆಗಳಿಗೆ ಹಾನಿ ಉಂಟಾಗಿದ್ದು, ಭಾಗಶಃ ಹಾನಿಯಾದ ಮನೆಗಳಿಗೆ ಸರ್ಕಾರದಿಂದ ತಕ್ಷಣವೇ ₹6500 ಹಾಗೂ ಅರ್ಧ ಹಾನಿಯಾದ ಮನೆಗಳಿಗೆ ₹50000 ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ.

ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾದ ಮನೆಗಳಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಾನುಸಾರ ₹1,25 ಲಕ್ಷ ಪರಿಹಾರದ ಜೊತೆಗೆ ಒಂದು ಪಕ್ಕಾ ಮನೆ ನೀಡಬೇಕೆಂದು ಈಗಾಗಲೇ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಈ ಆದೇಶವು ಕೆಲವು ದಿನಗಳಲ್ಲಿ ಜಾರಿಯಾಗಲಿದೆ ಎಂದು ಹೇಳಿದರು.

ಬೆಳೆ ಹಾನಿಯಾದ ಖಾಶೆಂಪೂರ ಹಾಗೂ ಕಾಡವಾದ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ ಸಚಿವರು, ಬೆಳೆ ಹಾನಿಯಾದಂತಹ ಜಮೀನಗಳ ಸರ್ವೇ ಮಾಡಿ ಸರ್ಕಾರಕ್ಕೆ ನಿಖರವಾದ ವರದಿ ಸಲ್ಲಿಸಬೇಕು. ಸಕಾಲಕ್ಕೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್, ನಗರಸಭೆ ಅಧ್ಯಕ್ಷರಾದ ಮೋಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬೀದರ ಸಹಾಯಕ ಆಯುಕ್ತರಾದ ಲವೀಶ್ ಒರಡಿಯಾ, ಮುಖಂಡರಾದ ಅಮೃತರಾವ ಚಿಮಕೋಡೆ, ಬೀದರ ತಹಶಿಲ್ದಾರ ದಿಲಶಾದ ಮೆಹತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article