ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದಾದ್ಯಂತ ಗ್ರಾಮ ಮಟ್ಟದಿಂದ ಹಿಡಿದು, ಗ್ರಾಪಂ ಹಾಗೂ ಪಟ್ಟಣ ಮತ್ತು ನಗರದ ವರೆಗೂ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಮಾದರಿ ಸ್ವಚ್ಛತಾ ಕಾರ್ಯ ನಡೆಯಬೇಕು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಈ ಸ್ವಚ್ಛತಾ ಕಾರ್ಯವನ್ನು ಮೊದಲಿಗೆ ನಮ್ಮ ಮನೆಯಿಂದಲೇ ಆರಂಭಿಸೋಣ. ಮೊದಲು ನಮ್ಮ ಮನೆ, ನಮ್ಮ ಮನೆಯ ಪರಿಸರ, ನಮ್ಮ ಓಣಿ, ಬಡಾವಣೆ, ತದನಂತರ ನಮ್ಮ ಊರು... ಹೀಗೆ ಸ್ವಚ್ಛತಾ ಕಾರ್ಯವು ನಡೆಯಲಿ. ಅಧಿಕಾರಿಗಳು ತಮ್ಮ ಇಲಾಖೆಯ ಕಚೇರಿ ಕಟ್ಟಡ, ಪರಿಸರ, ಆವರಣವನ್ನು ಶುಚಿಯಾಗಿಡಬೇಕು. ಪಟ್ಟಣ ಹಾಗೂ ಗ್ರಾಮಾಂತರ ಮಟ್ಟದಲ್ಲಿ ನಡೆಯುವ ಸ್ವಚ್ಛತಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದರು.
ಮಾ. 30ರಂದು ಬೆಳಗ್ಗೆ 6 ಗಂಟೆಗೆ ಸ್ವಚ್ಛತಾ ಅಭಿಯಾನ ಆರಂಭಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.ಆರ್ಥಿಕ ನೆರವು: ಸ್ವಚ್ಛತಾ ಕಾರ್ಯಕ್ಕಾಗಿ ಬೇಕಾದ ಸಾಮಗ್ರಿಗಳಿಗಾಗಿ ₹1 ಲಕ್ಷದ ಒಂದು ಸಾವಿರ ನೀಡುವುದಾಗಿ ಆರ್.ವಿ. ದೇಶಪಾಂಡೆ ಘೋಷಿಸಿದರು. ಶಾಸಕರೊಂದಿಗೆ ಕೆಲವು ಮುಖಂಡರು ಆರ್ಥಿಕ ನೆರವು ಘೋಷಿಸಿದರು,
ನಿರ್ವಹಣೆ: ಸ್ವಚ್ಛತಾ ಕಾರ್ಯದ ನಿರ್ವಹಣೆಯ ಜವಾಬ್ದಾರಿಯನ್ನು ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಅವರಿಗೆ ವಹಿಸಲಾಯಿತು. ಉಳಿದಂತೆ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು ಎಂದು, ಗ್ರಾಪಂ ಮಟ್ಟದಲ್ಲಿ ಪಿಡಿಒಗಳು ಸ್ವಚ್ಛತಾ ಕಾರ್ಯದ ನಿರ್ವಹಣೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.