ಬೆಂಗಳೂರಿನ 142ರ ಪೈಕಿ 6 ಶೌಚಾಲಯ 4% ಶೌಚಾಲಯದಲ್ಲಿ ಮಾತ್ರ ಸ್ವಚ್ಛತೆ

KannadaprabhaNewsNetwork |  
Published : Jul 23, 2026, 03:45 AM IST
Report

ಸಾರಾಂಶ

ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರಿನ 142 ಸಾರ್ವಜನಿಕ ಶೌಚಾಲಯದಲ್ಲಿ 37 ಮುಚ್ಚಲ್ಪಟ್ಟಿವೆ. ಶೇ.4 ರಷ್ಟು ಶೌಚಾಲಯಗಳಲ್ಲಿ ಮಾತ್ರ ಸ್ವಚ್ಛತೆ ಕಾಣಬಹುದು. ಶೇ.77 ರಷ್ಟು ಶೌಚಾಲಯಗಳನ್ನು ಕನ್ನಡೇತರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅಂಶ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.

 ಬೆಂಗಳೂರು :  ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರಿನ 142 ಸಾರ್ವಜನಿಕ ಶೌಚಾಲಯದಲ್ಲಿ 37 ಮುಚ್ಚಲ್ಪಟ್ಟಿವೆ. ಶೇ.4 ರಷ್ಟು ಶೌಚಾಲಯಗಳಲ್ಲಿ ಮಾತ್ರ ಸ್ವಚ್ಛತೆ ಕಾಣಬಹುದು. ಶೇ.77 ರಷ್ಟು ಶೌಚಾಲಯಗಳನ್ನು ಕನ್ನಡೇತರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅಂಶ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.

ನಗರದ ಸಾರ್ವಜನಿಕ ಶೌಚಾಲಯಗಳ ಕುರಿತು ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ(ಬಿ-ಪ್ಯಾಕ್‌) ಸಂಘಟನೆ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ 142 ಸಾರ್ವಜನಿಕ ಶೌಚಾಲಯಗಳ ಕುರಿತು ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಕಂಡು ಬಂದಿದೆ. ಇದೇ ವೇಳೆ ಜನಸಂಖ್ಯೆಗೆ ಅನುಗುಣವಾಗಿ ನಗರಕ್ಕೆ ಇನ್ನೂ ಒಂದು ಸಾವಿರಕ್ಕೂ ಅಧಿಕ ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ 2026 ರ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದ ಬಿ ಪ್ಯಾಕ್‌ ಮುಖ್ಯಸ್ಥ ಎಚ್‌.ಎಸ್‌.ರಾಘವೇಂದ್ರ, 142 ಸಾರ್ವಜನಿಕ ಶೌಚಾಲಯ ಪರಿಶೀಲಿಸಿದ್ದು 37 (ಶೇ.26) ಸಂಪೂರ್ಣವಾಗಿ ಮುಚ್ಚಿವೆ. ಕೇವಲ 6 ಶೌಚಾಲಯ (ಶೇ.4.2) ಮಾತ್ರ ಅತ್ಯಂತ ಸ್ವಚ್ಛವಾಗಿವೆ. ಕೇವಲ 23 ಸಾರ್ವಜನಿಕ ಶೌಚಾಲಯಗಳಲ್ಲಿ ಕನ್ನಡ ಬಲ್ಲವರಿದ್ದಾರೆ. 82 ಶೌಚಾಲಯ ನಿರಂತರ ದುರ್ವಾಸನೆಯಿಂದ ಕೂಡಿದ್ದು, ಜನರ ಬಳಕೆಗೆ ಯೋಗ್ಯವಿಲ್ಲ ಎಂದು ವಿವರಿಸಿದರು.

80 ಶೌಚಾಲಯದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ

80 ಶೌಚಾಲಯದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ, 9 ರಲ್ಲಿ ಮಾತ್ರ ವೀಲ್‌ ಚೇರ್‌ ರ‍್ಯಾಂಪ್ ಇದ್ದು ಸುಮಾರು ಶೇ.94 ರಷ್ಟು ಶೌಚಾಲಯಗಳು ವಿಕಲಚೇತನರ ಬಳಕೆಗೆ ಅನುಕೂಲವಾಗಿಲ್ಲ. ಶೇ.40 ರಲ್ಲಿ ಮಾತ್ರ ನಿರಂತರ ನೀರಿನ ಸೌಲಭ್ಯವಿದೆ. ಯಾವುದೇ ಶೌಚಾಲಯದಲ್ಲೂ ಸಾಬೂನು ಅಥವಾ ಕಸದ ಬುಟ್ಟಿಗಳಿಲ್ಲ. ಶೇ.15 ರಷ್ಟು ಶೌಚಾಲಯಗಳಲ್ಲಿ ಮಾತ್ರ ಮಹಿಳಾ ಸಿಬ್ಬಂದಿ ಇದ್ದಾರೆ. ಗುತ್ತಿಗೆದಾರರ ವಿವರ ಹಾಗೂ ಬಳಕೆ ಶುಲ್ಕದ ಮಾಹಿತಿ ಹೆಚ್ಚಿನ ಶೌಚಾಲಯಗಳಲ್ಲಿ ಪ್ರದರ್ಶಿಸಿಲ್ಲ. ಮಂಗಳಮುಖಿಯರಿಗೆ ವಿಶೇಷವಾಗಿ ಯಾವುದೇ ಶೌಚಾಲಯಗಳಿಲ್ಲ. 2 ಶೌಚಾಲಯಗಳಲ್ಲಿ ಸ್ನಾನದ ಕೊಠಡಿಗಳನ್ನು ನಿರ್ವಾಹಕರು ಅಡುಗೆ ಮಾಡಲು ಬಳಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಕ್ಕೆ ಹಲವು ಶಿಫಾರಸು

ಸಮೀಕ್ಷೆಯ ಆಧಾರದಲ್ಲಿ ಸರ್ಕಾರಕ್ಕೆ ಹಲವು ಶಿಫಾರಸು ಮಾಡಲಾಗಿದೆ. ಕಾರ್ಯನಿರ್ವಹಿಸದ 37 ಶೌಚಾಲಯಗಳನ್ನು ತಿಂಗಳೊಳಗೆ ದುರಸ್ತಿ ಮಾಡಲು ವಿಶೇಷ ಅಭಿಯಾನ ಆರಂಭಿಸಬೇಕು. ಎಲ್ಲ ಶೌಚಾಲಯಗಳ ಯೋಜನೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಜಿಬಿಎ ಅಡಿ ಏಕೀಕೃತ ನಿರ್ವಹಣಾ ಘಟಕ ಸ್ಥಾಪಿಸಬೇಕು. ನಗರಕ್ಕೆ ಸಾವಿರಕ್ಕೂ ಅಧಿಕ ಸಾರ್ವಜನಿಕ ಶೌಚಾಲಯಗಳ ಸ್ಥಾಪನೆಯ ಅಗತ್ಯವಿದೆ ಎಂಬುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ ಎಂದು ಬಿ ಪ್ಯಾಕ್‌ ಮುಖ್ಯಸ್ಥ ಎಚ್‌.ಎಸ್‌.ರಾಘವೇಂದ್ರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗೂಗಲ್ ಕಂಪನಿಯ ಜತೆ ವಿಟಿಯು ಒಪ್ಪಂದ
ಮಾಧ್ಯಮಕ್ಕೆ ಸಾಮಾಜಿಕ ಕಳಕಳಿ ಅಗತ್ಯ : ಆಯಿಷಾ