ಹಳಿಯಾಳ: ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ದೇವರು ವಾಸಿಸುತ್ತಾನೆ ಎಂದು ಹಿರಿಯರು ಹೇಳುವ ಅನುಭವದ ನುಡಿಸತ್ಯವಾಗಿದೆ. ಸ್ವಚ್ಛತೆ ಇರುವಲ್ಲಿ ಕೆಟ್ಟ ವಿಚಾರಗಳು, ಕೆಟ್ಟ ಕೃತ್ಯಗಳು ಸುಳಿಯುವುದಿಲ್ಲ. ಸ್ವಚ್ಛತೆ ಇರುವಲ್ಲಿ ಆರೋಗ್ಯ ಇರುತ್ತದೆ. ನೆಮ್ಮದಿ, ಸಮೃದ್ಧಿ ಮನೆಮಾಡುತ್ತದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಸ್ವಚ್ಛತೆ ಇದು ಒಂದು ದಿನದ ಅಥವಾ ಒಂದು ವರ್ಷದ ಕಾರ್ಯಕ್ರಮವಲ್ಲ, ಇದು ನಿರಂತರವಾಗಿ ನಡೆಬೇಕಾಗಿದ್ದ ಜೀವನ ಪ್ರಕ್ರಿಯೆಯಾಗಿದೆ. ಸ್ವಚ್ಛತೆಯು ನಮ್ಮ ಹಕ್ಕು ಮಾತ್ರವಲ್ಲ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸೆ. 26ರಿಂದ ಅ. 2ರ ವರೆಗೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿನ ಮೂರು ತಾಲೂಕುಗಳಲ್ಲಿ ಸ್ವಚ್ಛತಾ ಆಂದೋಲನವನ್ನು ನಡೆಸಲು ತಿಳಿಸಿದ್ದೇನೆ. ಪ್ರತಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮಮಟ್ಟದಲ್ಲಿಯೂ ಸ್ವಚ್ಛತಾ ಆಂದೋಲನ ಆರಂಭಗೊಂಡಿದೆ ಎಂದರು.ಮೋತಿಕೆರೆಯ ಬಳಿ ಪುರಸಭೆ ಮತ್ತು ತಾಲೂಕಾಡಳಿತ ಸಹಯೋಗದಲ್ಲಿ ನಡೆದ ಸ್ವಚ್ಛತಾ ಆದೋಲನಕ್ಕೆ ಹಳಿಯಾಳ ರೋಟರಿ ಕ್ಲಬ್ ಸಂಘಟನೆಯು ಸಹಕರಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿತು.