ಬರಕ್ಕೆ ತುತ್ತಾದ ರೈತರಿಗೆ ಎಕರೆಗೆ 25 ಸಾವಿರ ಪರಿಹಾರ ನೀಡಿ

KannadaprabhaNewsNetwork |  
Published : Sep 27, 2026, 02:30 AM IST
ಹರಪನಹಳ್ಳಿ ತಾಲೂಕಿನ ಕಮ್ಮತ್ತಹಳ್ಳಿ ವಿರಕ್ತಮಠದಲ್ಲಿ ಲಿ.ಚನ್ನಬಸವ ಶಿವಯೋಗಿಗಳವರ  ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನ ಅಂಗವಾಗಿ ನಡೆದ ಕೃಷಿ ಹಾಗೂ ಹೈನುಗಾರಿಕಾ ಸಮಾವೇಶದಲ್ಲಿ ಡಾ.ಗುರುಬಸವ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ದೇಶದ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಾಗ ಪ್ರಗತಿ ಸಾಧ್ಯ.ಆದರೆ, ದೇಶದ ಬೆನ್ನಲುಬು ಎನ್ನುವ ಸರ್ಕಾರ ದುಬಾರಿ ಬೀಜ, ಗೊಬ್ಬರ ವಿತರಣೆ ಮಾಡಿ ಬೆನ್ನೆಲುಬು ಮುರಿಯುತ್ತಿವೆ

ಹರಪನಹಳ್ಳಿ: ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರಿಗೆ ಕನಿಷ್ಟ ₹25 ಸಾವಿರ ಪರಿಹಾರ ನೀಡಿ ರೈತರ ಪರ ಸರ್ಕಾರ ಎಂದು ನಿರೂಪಿಸಿಬೇಕು ಎಂದು ಕಮ್ಮತ್ತಹಳ್ಳಿ-ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದರು.

ಅವರು ತಾಲೂಕಿನ ಕಮ್ಮತ್ತಹಳ್ಳಿ ವಿರಕ್ತಮಠದ ಆವರಣದಲ್ಲಿ ಲಿ. ಚನ್ನಬಸವ ಶಿವಯೋಗಿಗಳವರ 20ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನ ಅಂಗವಾಗಿ ನಡೆದ ಕೃಷಿ ಹಾಗೂ ಹೈನುಗಾರಿಕಾ ಸಮಾವೇಶದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ದೇಶದ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಾಗ ಪ್ರಗತಿ ಸಾಧ್ಯ.ಆದರೆ, ದೇಶದ ಬೆನ್ನಲುಬು ಎನ್ನುವ ಸರ್ಕಾರ ದುಬಾರಿ ಬೀಜ, ಗೊಬ್ಬರ ವಿತರಣೆ ಮಾಡಿ ಬೆನ್ನೆಲುಬು ಮುರಿಯುತ್ತಿವೆ ಎಂದು ನುಡಿದರು.

ದೇಶದ ಜನ, ರೈತರು ಜಾಗೃತರಾಗುವ ಅವಶ್ಯಕತೆ ಇದೆ.ಮತದಾನದ ಹಕ್ಕನ್ನು ದಾನವಾಗಿ ನೀಡುವ ಪಣತೊಟ್ಟು, ಭ್ರಷ್ಟಾಚಾರ ಎಸಗುವ ಜನಪ್ರತಿನಿಧಿಗಳನ್ನು ಪ್ರಶ್ನಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಇಂದಿನ ದಿನಮಾನಗಳಲ್ಲಿ ಕೃಷಿ ಹಾಗೂ ಹೈನುಗಾರಿಕೆ ಅಗತ್ಯವಾಗಿದೆ. ಕೇವಲ ಹಾಲನ್ನು ಮಾರುವ ಬದಲು ಹಾಲು ಉತ್ಪಾದಕ ಬಳಸಿ ಆರ್ಥಿಕವಾಗಿ ಸಧೃಢರಾಗಬೇಕು. ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿ ಮಲತಾಯಿ ಧೋರಣೆ ಎದುರಿಸುತ್ತಿರುವುದು ವಿಷಾದನೀಯ. ಬಸ್,ಶಾಲೆ,ವೈದ್ಯಕೀಯ ಸೇವೆ ಸಕಾಲದಲ್ಲಿ ಸಿಗದಿರುವುದು ದುರಂತವಾಗಿದೆ ಎಂದರು.

ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವ ತತ್ವ ಪಾರಂಪರಿಕ ಚಟುವಟಿಕೆ ಮೂಲಕ ಪಾಂಡೋಮಟ್ಟಿ-ಕಮ್ಮತ್ತಹಳ್ಳಿ ಶ್ರೀ ಮಠ ಸಾರುತ್ತಿದೆ.ಆಧುನಿಕತೆಯ ಕೃಷಿ ಭರಾಟೆಯಲ್ಲಿ ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದರು.

ಸಿಂದಗಿ ಪ್ರಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಈ ಸಮಾವೇಶ ರೈತರ ಆತ್ಮವಿಶ್ವಾಸ ವೃದ್ಧಿಸುತ್ತಿದೆ. ರೈತರು ಕಾಯಕ ನಿಷ್ಠೆ ಹೊಂದಬೇಕು.ವಿಚಲತಗೊಳ್ಳದೇ ಶಿವ ಶರಣರ ಕಾಯಕದಲ್ಲಿ ನಿಷ್ಠೆ ಹೊಂದಬೇಕು ಎಂದರು.

ವಿಜಯನಗರ ಜಿಲ್ಲಾ ಕೃಷಿ ಉಪನಿರ್ದೆಶಕ ವಾಮದೇವ ಕೊಳ್ಳಿ ಮಾತನಾಡಿ, ವಿಜಯನಗರ ಜಿಲ್ಲೆ ತೀವ್ರ ಬರಗಾಲ ತತ್ತರಿಸುವ ಹಿನ್ನೆಲೆ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕೇಂದ್ರ ಬರ ವೀಕ್ಷಣೆ ತಂಡ ಜಿಲ್ಲೆಗೆ ಆಗಮಿಸಲಿದೆ. ವೀಕ್ಷಣೆಯಲ್ಲಿ ಬೆಳೆ, ಕುಡಿಯುವ ನೀರು, ಗ್ರಾಪಂ ಮಟ್ಟದಲ್ಲಿ ದುಡಿಯುವ ಕೆಲಸಗಳ ಕುರಿತು ಮಾಹಿತಿ ಪಡೆಯಲಿದೆ. ತೀವ್ರ ಬರ ಎದುರಿಸುತ್ತಿರುವ ಜಿಲ್ಲೆಯಲ್ಲಿ ರೈತರಿಗೆ ವಿಮೆಯ ಮಧ್ಯಂತರ ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಸಹ ಸ್ಪಂದಿಸಿದ್ದು, ಪರಿಹಾರ ವಿತರಣೆ ಆಗಲಿದೆ ಎಂದರು.

ನಿವೃತ್ತ ಪಶುಪಾಲನ ಉಪನಿರ್ದೇಶಕ ಡಾ. ಚಂದ್ರಶೇಖರ ಎಸ್.ಸುಂಕದ್ ಮಾತನಾಡಿದರು.

ವಿಜಯನಗರ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೆ. ರೇವಣಸಿದ್ದಪ್ಪ, ಪಶು ವೈದ್ಯಕೀಯ ಉಪ ನಿರ್ದೇಶಕ ಡಾ. ಶರಣಗೌಡ ಪಾಟೀಲ್, ಪಶು ಆರೋಗ್ಯಾಧಿಕಾರಿ ಡಾ. ರವಿಕಿರಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!