ಹರಪನಹಳ್ಳಿ: ಶೋಷಣೆಯ ಕೇಂದ್ರವಾಗಿದ್ದ ದೇವಸ್ಥಾನ, ಪೂಜೆ ಪುನಸ್ಕಾರಗಳಿಂದ ಲಿಂಗಾಯತರಾಗಲು ಸಾಧ್ಯವಿಲ್ಲ. ಸ್ಥಾವರ, ಗುಡಿ-ಗುಂಡಾರ ತ್ಯಜಿಸಿ ಬಸವತತ್ವದ ಅನುಸಾರ ಕಾಯಕ ನಿಷ್ಠೆಯಿಂದ ಮಾತ್ರ ಅದು ಸಾಧ್ಯ ಎಂದು ಸಾಣೇಹಳ್ಳಿ ಮಠದ ಪಟ್ಟಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಲಿಂಗಾಯತ ಧರ್ಮದ ಆಚಾರ ವಿಚಾರ ಕಡಿಮೆಯಾಗಿ,ಅನುಯಾಯಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಸದ್ಗುಣ ಮೈಗೂಡಿಸಿಕೊಂಡು ಸಾತ್ವಿಕ ಜೀವನ ನಡೆಸುವನು ದೇವನಾದರೆ, ದುರ್ಗುಣದಿಂದ ದೆವ್ವನಾಗುತ್ತಾನೆ. ವಿಚಿತ್ರ ಭಾವುಟ, ಕುಣಿತದಿಂದ ಲಿಂಗಾಯತರು ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ಗಣ ಅಧಿಪತಿ ಬಸವಣ್ಣ ಆಗಿದ್ದಾರೆ. ಅದನ್ನು ಹೇಳುವ ಧೈರ್ಯ ಬೇಕು. ದ್ವಂದ ಮನೋವಭಾವದಿಂದ ಹೊರಬಂದು ಬಸವತತ್ವಕ್ಕೆ ಬದ್ಧತೆ ತೋರಬೇಕು ಎಂದರು.ಏಕ ಬೆಳೆಯಿಂದ ಆರ್ಥಿಕ ಹಿನ್ನಡೆ ಅನುಭವಿಸುವುದಕ್ಕಿಂತ ದ್ವಿದಳ ಧಾನ್ಯ ಬೆಳೆ ಕಡೆ ಗಮನ ಹರಿಸಬೇಕು. ದಾನಧರ್ಮ ನೀಡುತ್ತಿದ್ದ ರೈತರು ಕೊಳ್ಳುವಿಕೆಯಲ್ಲಿ ತೊಡಗಿರುವುದು ರೈತ ದುಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದರು.
ಪಾಂಡೋಮಟ್ಟಿ-ಕಮ್ಮತ್ತಹಳ್ಳಿ ಡಾ.ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಬಸವ ತತ್ವದ ಆಚಾರ ವಿಚಾರದ ಜ್ಞಾನದೀಪ ನಾಡಿನ ಉದ್ದಗಲಕ್ಕೂ ಸಾರಿದ ಕೀರ್ತಿ ಶ್ರೀ ಲಿಂ.ಚನ್ನಬಸವ ಶಿವಯೋಗಿಗಳಿಗೆ ಸಲ್ಲುತ್ತದೆ. ಇಂದಿನ ಯುವಪೀಳಿಗೆಗೆ ಸಂಸ್ಕಾರದ ಕೊರತೆ ಇದೆ. ಯುವ ಶಕ್ತಿಯ ಸದ್ಗುಣ ಆದರ್ಶವಾಗಿ ತಗೊಂಡಾಗ ಯುವ ಸಮೂಹ ಸಬಲೀಕರಣ ಆಗಲಿದೆ. ಶರಣರ ಆಲೋಚನಾ ಕ್ರಮ ಮತ್ತು ವಿಧಾನಗಳ ಸದ್ಗುಣ ಅನುಸರಿಸುವ ಮೂಲಕ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಹಿಂದೆ ಕೌಟುಂಬಿಕ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಆದರೆ ಇತ್ತೀಚೆಗೆ ಸುಜ್ಞಾನಿಗಳಾದ ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಮಕ್ಕಳ ಕುರಿತು ಜಾಗೃತರಾಗಬೇಕು. ನಾಡಿನ ಮಠಗಳು ಸಂಸ್ಕಾರ ಕಲಿಸುವ ಕೇಂದ್ರಗಳಾಗಿವೆ. ಮನುಷ್ಯನನ್ನು ಬಸವತತ್ವಗಳ ಮೂಲಕ ಸುಜ್ಞಾನಿಗಳನ್ನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾರಗೊಂಡನಹಳ್ಳಿ ವಿರಕ್ತಮಠದ ಅಭಿನವ ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಬಿಡಿಸಿಸಿ ನಿರ್ದೇಶಕ ವೈ.ಡಿ.ಅಣ್ಣಪ್ಪ, ಮುಖಂಡ ಅರುಂಡಿ ನಾಗರಾಜ್, ಎಸ್.ಕೆ ಮಂಜುನಾಥ್, ಪಾಟೀಲ್ ಕೆಂಚನಗೌಡ, ಮುರುಗೇಶ್, ತಿಪ್ಪಣ್ಣ, ಶ್ರೀನಿವಾಸ, ಸಿದ್ದಪ್ಪ, ನಿರಂಜನ್, ಶಿಲ್ಪ ಕರಿಬಸಪ್ಪ ಬಸವ ಭಜನಾ ಬಳಗ ಹಾಗೂ ಗೆಳೆಯರ ಬಳಗದ ಪದಾಧಿಕಾರಿಗಳು ಹಾಜರಿದ್ದರು.