ನಾಳೆಯಿಂದ ಕಲ್ಯಾಣಿಗಳ ಸ್ವಚ್ಛತೆ ವಿಶೇಷ ಆಂದೋಲನ: ಸಿಇಒ ಡಾ. ನವೀನ್ ಭಟ್‌

KannadaprabhaNewsNetwork |  
Published : Mar 22, 2026, 01:15 AM IST
ಸಿಕೆಬಿ-4  ಕಲ್ಯಾಣಿ ಸ್ವಚ್ಚತೆ (ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಜಲ ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಧ್ಯೇಯವಾಗಿದೆ. ಅದರಲ್ಲೂ ಯಾವುದೇ ನದಿ ನಾಲೆಗಳಿಲ್ಲದ ಬಯಲು ಸೀಮೆ ಎನಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಲ ಮೂಲಗಳ ಸಂರಕ್ಷಣೆ ಅತ್ಯಂತ ಪ್ರಾಮುಖ್ಯವೆನಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾರ್ಚ್ 23ರಿಂದ ಏಪ್ರಿಲ್ ತಿಂಗಳ 3ರ ವರೆಗಿನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಪುರಾತನ ಕಾಲದ ಐತಿಹಾಸಿಕ ಕೆರೆ, ಕುಂಟೆ, ಕಲ್ಯಾಣಿಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ವೈ.ನವೀನ್ ಭಟ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನೀರು’ ಪ್ರತಿ ಜೀವ ಸಂಕುಲಕ್ಕೂ ಮೂಲ ಆಧಾರ. ನೀರು ಇಲ್ಲದಿದ್ದರೆ ಮನುಷ್ಯ ಒಳಗೊಂಡಂತೆ ಸಲಕ ಜೀವ ರಾಶಿಗಳ ಬದುಕು ದುಸ್ತರವಾಗಲಿದೆ. ಈ ದಿಸೆಯಲ್ಲಿ ಜಲ ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಧ್ಯೇಯವಾಗಿದೆ. ಅದರಲ್ಲೂ ಯಾವುದೇ ನದಿ ನಾಲೆಗಳಿಲ್ಲದ ಬಯಲು ಸೀಮೆ ಎನಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಲ ಮೂಲಗಳ ಸಂರಕ್ಷಣೆ ಅತ್ಯಂತ ಪ್ರಾಮುಖ್ಯವೆನಿಸಿದೆ. ಈ ನಿಟ್ಟಿನಲ್ಲಿ ಇಲ್ಲಿನ ಜಲಮೂಲಗಳ ಸಂರಕ್ಷಣೆಯಲ್ಲಿ ಕೆರೆ, ಕುಂಟೆ, ಕಲ್ಯಾಣಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಗ್ರಾಮೀಣ ಜನರಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಹಾಗೂ ಜಲ ಮೂಲಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಲ್ಯಾಣಿಗಳನ್ನು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಸ್ವಾಭಾವಿಕವಾಗಿ ಮಳೆಗಾಲ ಜೂನ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಜಿಲ್ಲೆಯಲ್ಲಿನ ಎಲ್ಲಾ ಜಲಮೂಲಗಳನ್ನು ಸಿದ್ಧತೆ ಮಾಡಿ, ನೀರು ಶೇಖರಣೆ ಮಾಡುವ ಮೂಲಕ ನೀರು ಇಂಗುವಂತೆ ಮಾಡಬೇಕಿದೆ. ಈ ದಿಸೆಯಲ್ಲಿ ಮಾ.23ರಿಂದ ಪ್ರಾರಂಭಗೊಂಡು ಮುಂದಿನ ತಿಂಗಳ 3ರವರೆಗೆ ಜಿಲ್ಲೆಯಾ ದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 180ಕ್ಕೂ ಹೆಚ್ಚು ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವ ಸಂಘಟನೆಗಳು, ಎನ್‌ಎಸ್‌ಎಸ್, ಎನ್‌ಸಿಸಿ ಸೇರಿ ಸಾಮಾಜಿಕ ಕಳಕಳಿ ಹೊಂದಿರುವ ಎಲ್ಲಾ ಸ್ವಯಂಸೇವಾ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಜಲ ಮೂಲಗಳ ಸಂರಕ್ಷಣೆ ಮಾಡಿ ಅಂತರ್ಜಲ ಹೆಚ್ಚಳ ಮಾಡುವಂತ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವ ಈ ಮಹತ್ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಜಿಲ್ಲೆಯಲ್ಲಿ ಜಲ ಮೂಲಗಳ ಸಂರಕ್ಷಣೆಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮದ ವಿವರ:

ಮಾ.23ರಂದು ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ, ಗುಂಡ್ಲುಗುರ್ಕಿ ಗ್ರಾಮದ ಗುಂಡುತೋಪು ಬಳಿ ಇರುವ ಕಲ್ಯಾಣಿಯಲ್ಲಿ ಬೆಳಗ್ಗೆ 7 ಗಂಟೆಗೆ ಸ್ವಚ್ಚತೆಗೆ ಚಾಲನೆ ನೀಡಲಾಗುವುದು. ಬಾಗೇಪಲ್ಲಿ ತಾಲೂಕು ಗೂಳೂರು ಗಂಗಮ್ಮ ದೇವಸ್ಥಾನದ ಹತ್ತಿರದ ಕಲ್ಯಾಣಿ, ಚಿಂತಾಮಣಿ ತಾಲೂಕು ಕಾಗತಿ ಗ್ರಾಮದ ಕಾಗತಿ ಕಲ್ಯಾಣಿ, ಗೌರಿಬಿದನೂರು ತಾಲೂಕು ವಾಟದ ಹೊಸಹಳ್ಳಿ ಗ್ರಾಮದ ರಾಮಲಿಗೇಶ್ವರ ದೇವಸ್ಥಾನದ ಹತ್ತಿರದ ಕಲ್ಯಾಣಿ, ಗುಡಿಬಂಡೆ ತಾಲೂಕು ಎಲ್ಲೊಡು ಬೆಟ್ಟದ ತಪ್ಪಲು ಕಲ್ಯಾಣಿ, ಶಿಡ್ಲಘಟ್ಟ ದೊಡ್ಡತೇಕಹಳ್ಳಿ ಗ್ರಾಮದ ಕಲ್ಯಾಣಿ, ಮಂಚೇನಹಳ್ಳಿ ತಾಲೂಕು ಜರಬಂಡಹಳ್ಳಿ ಸ್ಮಶಾನದ ಹತ್ತಿರದ ಕಲ್ಯಾಣಿ, ಚೇಳೂರು ತಾಲೂಕು ಚಾಕವೇಲು, ದಿಗವ ಪೈಲವಾರಪಲ್ಲಿ ಕಲ್ಯಾಣಿಯಲ್ಲಿ ಏಕಕಾಲಕ್ಕೆ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅವಶ್ಯ: ಶಾಸಕ ಪ್ರದೀಪ್ ಈಶ್ವರ್
ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುವೆ