ಬಿಆರ್‌ಟಿಎಸ್‌ ಪ್ರತ್ಯೇಕ ಪಥ ತೆರವುಗೊಳಿಸಿ: ಜನಾಗ್ರಹ

KannadaprabhaNewsNetwork | Published : Feb 23, 2024 1:53 AM

ಸಾರಾಂಶ

ಹುಬ್ಬಳ್ಳಿ- ಧಾರವಾಡ ಮಹಾನಗರದ ಮಧ್ಯೆ ಬಿಆರ್‌ಟಿಎಸ್‌ಗೆ ಇರುವ ಪ್ರತ್ಯೇಕ ಪಥವನ್ನು ತೆರವುಗೊಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಪಾಲಿಕೆ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದ ಮಧ್ಯೆ ತ್ವರಿತಗತಿಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಬಿಆರ್‌ಟಿಎಸ್‌ನ ಪ್ರತ್ಯೇಕ ಪಥ ತೆರವುಗೊಳಿಸಬೇಕೆಂಬ ಒತ್ತಡ ಜಾಸ್ತಿಯಾಗುತ್ತಿದೆ. ಇದಕ್ಕಾಗಿ ಪಾಲಿಕೆ ಬಜೆಟ್‌ನಲ್ಲಿ ಕರೆಕ್ಷನ್‌ನಲ್ಲಿ ₹2 ಕೋಟಿ ಮೀಸಲಿಟ್ಟು ಬ್ಯಾರಿಕೇಡ್‌ ತೆರವುಗೊಳಿಸಿ ಎಂದು ಪಾಲಿಕೆ ಸದಸ್ಯರು ಒತ್ತಾಯಿಸುತ್ತಿದ್ದು, ಒಂದು ವೇಳೆ ಪಾಲಿಕೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆಗೆ ಮಾಡುವುದಾಗಿ ಪಾಲಿಕೆ ಸದಸ್ಯರು ಎಚ್ಚರಿಸಿದ್ದಾರೆ. ಇದರಿಂದ ಬಿಆರ್‌ಟಿಎಸ್‌ ಪ್ರಾರಂಭವಾಗಿ ಮೂರ್ನಾಲ್ಕು ವರ್ಷಗಳಲ್ಲಿ ಸಣ್ಣದಾಗಿ ಬಂದ್‌ ಆಗುವ ಸಾಧ್ಯತೆ ಕಂಡು ಬರುತ್ತಿದೆ.

ದೇಶದ ಹನ್ನೊಂದು ನಗರಗಳಲ್ಲಿ ಬಿಆರ್‌ಟಿಎಸ್‌ ವಿಫಲವಾಗಿದೆ. ಆದರೂ ಇದನ್ನು ಹುಬ್ಬಳ್ಳಿ-ಧಾರವಾಡಕ್ಕೆ ತರಲಾಯಿತು. ಇದಕ್ಕೆ ವಿರೋಧಿಸಿದ್ದುಂಟು. ಆದರೂ ಇದು ಹುಬ್ಬಳ್ಳಿ-ಧಾರವಾಡದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದೆ. ಹೀಗಾಗಿ ದೇಶದಲ್ಲೇ ಅತ್ಯುತ್ತಮ ಸಾಮೂಹಿಕ ಸಾರಿಗೆ ಎಂದು ಪ್ರಶಸ್ತಿ ಕೂಡ ಪಡೆದಿದೆ. ಆದರೆ ಇದರಿಂದ ಅನುಕೂಲಕ್ಕಿಂತ ಅನನುಕೂಲ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಸಾಗುತ್ತಿದೆ. ಆದಕಾರಣ ಇದರ ಸಮಸ್ಯೆ ಬಗೆಹರಿಸಿ ಎಂಬುದು ನಾಗರಿಕರ ಒತ್ತಾಯ

ಬಸ್‌ ಇರಲಿ-ಪ್ರತ್ಯೇಕ ಪಥ ಬೇಡ:

ಹಾಗಂತ ಬಿಆರ್‌ಟಿಎಸ್‌ ಬಸ್‌ ಬೇಡವೇ ಬೇಡ ಎಂಬ ಬೇಡಿಕೆಯೇನೂ ಇಲ್ಲಿ ಕೇಳಿ ಬರುತ್ತಿಲ್ಲ. ಬದಲಿಗೆ ಶೇ. 30ರಷ್ಟು ಓಡಾಡುವ ಬಿಆರ್‌ಟಿಎಸ್‌ಗೆ ಪ್ರತ್ಯೇಕ ಪಥ ಮಾಡಲಾಗಿದೆ. ಇದು ಬೇಡ ಸಂಚಾರವೆಲ್ಲ ಮುಕ್ತವಾಗಿರಲಿ ಎಂಬುದು ಜನರ ಬೇಡಿಕೆ.

ವಾದವೇನು?:

ಹುಬ್ಬಳ್ಳಿ-ಧಾರವಾಡ ಮಧ್ಯೆ 65-70 ಬಿಆರ್‌ಟಿಎಸ್‌ ಬಸ್‌ ಸಂಚರಿಸುತ್ತವೆ. ಪ್ರತಿ 10-15 ನಿಮಿಷಕ್ಕೊಂದರಂತೆ ಸಂಚರಿಸುತ್ತವೆ. ಕೆಲ ಸಲ ಈ ಸಮಯ ಹೆಚ್ಚಾಗುತ್ತದೆ. ಇನ್ನು ಪ್ರತಿನಿತ್ಯ ಕನಿಷ್ಠವೆಂದರೂ ಹುಬ್ಬಳ್ಳಿ-ಧಾರವಾಡ ಮಧ್ಯೆ 3 ಲಕ್ಷಕ್ಕೂ ಅಧಿಕ ಜನ ಸಂಚರಿಸುತ್ತಾರೆ. ಆದರೆ ಬಿಆರ್‌ಟಿಎಸ್‌ ಬಸ್‌ಗಳಲ್ಲಿ 60- 65 ಸಾವಿರ ಜನ ಸಂಚರಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅದರೆ ಶೇ. 20ರಷ್ಟು ಜನ ಬಿಆರ್‌ಟಿಎಸ್‌ ಬಸ್‌ ಅವಲಂಬಿಸಿದ್ದಾರೆ ಎಂದು ಬಿಆರ್‌ಟಿಎಸ್‌ ಸಂಸ್ಥೆಯ ಮೂಲಗಳು ತಿಳಿಸುತ್ತವೆ. ಇನ್ನುಳಿದಂತೆ ಉಳಿದವರಲ್ಲಿ ಬಹುತೇಕರು ತಮ್ಮ ಸ್ವಂತ ವಾಹನಗಳಲ್ಲೇ ಸಂಚರಿಸುತ್ತಾರೆ. ಇಲ್ಲವೇ ಖಾಸಗಿ ಬಸ್‌ ಅವಲಂಬಿಸಿರುತ್ತಾರೆ.

ಶೇ. 70ಕ್ಕೂ ಹೆಚ್ಚು ವಾಹನಗಳು ಬಿಆರ್‌ಟಿಎಸ್‌ನಿಂದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಳ್ಳುವಂತಾಗಿದೆ. ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಮಿಶ್ರಪಥದಲ್ಲಿದೆ.

ಈಗ ಏನು ಮಾಡಬೇಕು?:

ಈಗ ಹೇಗಿದ್ದರೂ ಹೊಸೂರಿನಿಂದ ಹುಬ್ಬಳ್ಳಿ ಸಿಬಿಟಿ ವರೆಗೆ ಬಿಆರ್‌ಟಿಎಸ್‌ ಬಸ್‌ಗಳೆಲ್ಲ ಮಿಶ್ರಪಥದಲ್ಲೇ ಸಂಚರಿಸುತ್ತವೆ. ಅದೇ ರೀತಿ ಹುಬ್ಬಳ್ಳಿಯ ಬಿವಿಬಿಯಿಂದ ಹೊಸೂರ ವರೆಗೆ ಹಾಗೂ ಧಾರವಾಡದ ಗಾಂಧಿನಗರದಿಂದ ಆಲೂರು ವೆಂಕಟರಾವ್‌ ಸರ್ಕಲ್‌ (ಜ್ಯುಬಿಲಿ ಸರ್ಕಲ್‌)ವರೆಗೂ ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಿ. ಅಲ್ಲೂ ಬಿಆರ್‌ಟಿಎಸ್‌ ಬಸ್‌ಗಳೆಲ್ಲ ಎಲ್ಲ ವಾಹನಗಳೊಂದಿಗೆ ಸಂಚರಿಸಲಿ. ಉಳಿದಂತೆ ಇಲ್ಲಿನ ಬಿವಿಬಿಯಿಂದ ಗಾಂಧಿನಗರ ವರೆಗೆ ಮಾತ್ರ ಬಿಆರ್‌ಟಿಎಸ್‌ಗೆ ಪ್ರತ್ಯೇಕ ಮಾರ್ಗವಿರಲಿ ಎಂಬುದು ಜನರ ಬೇಡಿಕೆ.

ಪಾಲಿಕೆ ಸದಸ್ಯರ ಸಾಥ್‌:

ಇದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಸಾಥ್‌ ಕೂಡ ಸಿಕ್ಕಿದೆ. ಅದಕ್ಕಾಗಿ ಪಾಲಿಕೆ ಬಜೆಟ್‌ನ ಕರೆಕ್ಷನ್‌ನಲ್ಲಿ ಬಿಆರ್‌ಟಿಎಸ್‌ ಪ್ರತ್ಯೇಕ ಪಥದಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ ತೆರವುಗೊಳಿಸಲು ₹2 ಕೋಟಿ ಮೀಸಲಿಡಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದೆ. ಈ ಹಣದಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿನ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಿ. ಬಸ್‌ ಶೆಲ್ಟರ್‌ಗಳು ಹಾಗೆ ಇರಲಿ. ಅಲ್ಲೇ ಬಿಆರ್‌ಟಿಎಸ್‌ ಬಸ್‌ಗಳು ನಿಲ್ಲಲಿ ಎಂದು ಒತ್ತಾಯಿಸಿದ್ದಾರೆ.

ಬಿಆರ್‌ಟಿಎಸ್‌ಗೆ ರಸ್ತೆ ನೀಡಿರುವುದು ಪಾಲಿಕೆ. ಬಿಆರ್‌ಟಿಎಸ್‌ ಬಸ್‌ಗಳ ಸಂಚಾರದಿಂದ ಸಾರ್ವಜನಿಕರಿಗೆ ಅನುಕೂಲ ಎಷ್ಟಾಗಿದೆಯೋ ಅದಕ್ಕಿಂತ ಹೆಚ್ಚು ತೊಂದರೆಯಾಗುತ್ತಿದೆ. ಆದಕಾರಣ ಟ್ರಾಫಿಕ್‌ ಜಾಮ್‌ ತಪ್ಪಿಸಲು ಈ ಕ್ರಮ ಕೈಗೊಳ್ಳಲೇಬೇಕು. ಒಂದು ವೇಳೆ ಮಹಾನಗರ ಪಾಲಿಕೆ ಇದಕ್ಕೆ ಸ್ಪಂದಿಸದಿದ್ದಲ್ಲಿ ಜನರೊಂದಿಗೆ ಸೇರಿಕೊಂಡು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಲಿಕೆ ಸದಸ್ಯರು ನೀಡಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಇದ್ದಂತಹ ಬಿಆರ್‌ಟಿಎಸ್‌ ಕಾರಿಡಾರ್‌ ಮುಕ್ತ ಸಂಚಾರಕ್ಕೆ ಅನುವು ನೀಡಿದ್ದು ಇಲ್ಲೂ ಅದೇ ಮಾದರಿಯಲ್ಲಿ ಕೆಲವೆಡೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟು ಬರಬರುತ್ತಾ ಇಡೀ ಮಹಾನಗರದಲ್ಲೇ ಬಿಆರ್‌ಟಿಎಸ್‌ ಕಾರಿಡಾರ್‌ ಇಲ್ಲದಂತಾಗಿ ಮುಕ್ತ ಸಂಚಾರವಾಗಲಿದೆಯೇ ಎಂಬ ಪ್ರಶ್ನೆ ಕೂಡ ಪ್ರಜ್ಞಾವಂತರಲ್ಲಿ ಉಂಟಾಗಿದೆ.

ಏನೇ ಆದರೂ ಬಿಆರ್‌ಟಿಎಸ್‌ ಕಾರಿಡಾರ್‌ನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ಬಗ್ಗೆ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.

ಶೇ. 20ಕ್ಕಿಂತ ಕಡಿಮೆ ಜನರು ಬಿಆರ್‌ಟಿಎಸ್‌ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಹೀಗಾಗಿ ಟ್ರಾಫಿಕ್‌ ಜಾಮ್‌ ಕಡಿಮೆ ಮಾಡಲು ನಗರದಲ್ಲಿ ಮುಕ್ತ ಸಂಚಾರ ಮಾಡಬೇಕು. ಇದಕ್ಕಾಗಿ ಬಜೆಟ್‌ನ ಕರೆಕ್ಷನ್‌ನಲ್ಲಿ ಹಣ ಮೀಸಲಿಡಬೇಕು ಎಂದು ಕೇಳಿಕೊಂಡಿದ್ದೇವೆ. ಒಂದು ವೇಳೆ ಸ್ಪಂದಿಸದಿದ್ದಲ್ಲಿ ಜನರೊಂದಿಗೆ ಸೇರಿಕೊಂಡು ಹೋರಾಟ ನಡೆಸಲಾಗುವುದು ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಹೇಳಿದ್ದಾರೆ.

Share this article