ಒತ್ತುವರಿ ತೆರವುಗೊಳಿಸಿ ಭೂಸ್ವಾಧೀನ ದಾಖಲೆಗಳ ಸರಿಪಡಿಸಿ

KannadaprabhaNewsNetwork |  
Published : Oct 30, 2026, 02:00 AM IST
ಕ್ಯಾಪ್ಷನ29ಕೆಡಿವಿಜಿ33 ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಲ್ಕುದುರೆ ಗ್ರಾಮಸ್ಥರು ಅನಧಿಕೃತ ಒತ್ತುವರಿ ತೆರವುಗೊಳಿಸಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು. | Kannada Prabha

ಸಾರಾಂಶ

ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಸರ್ವೆ ನಂ.56ರ ಕೆರೆ ಮುಳುಗು ಪ್ರದೇಶದಲ್ಲಿ ಆಗಿರುವ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಲ್ಕುದುರೆ ಗ್ರಾಮಸ್ಥರು ದಾವಣಗೆರೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

- ಚನ್ನಗಿರಿ ತಾ. ನಲ್ಕುದುರೆ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ । ಮನವಿಗಳಿಗೆ ಸ್ಪಂದಿಸದ ಅಧಿಕಾರಿಗಳು: ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಸರ್ವೆ ನಂ.56ರ ಕೆರೆ ಮುಳುಗು ಪ್ರದೇಶದಲ್ಲಿ ಆಗಿರುವ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಲ್ಕುದುರೆ ಗ್ರಾಮಸ್ಥರು ದಾವಣಗೆರೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಡಿಸಿ ಕಚೇರಿ ಮುಂಭಾಗ ನಲ್ಕುದುರೆ ಗ್ರಾಮದ ಎಸ್.ವಿ. ಚನ್ನಬಸಪ್ಪ ನೇತೃತ್ವದಲ್ಲಿ ಗುರುವಾರ ಧರಣಿ ನಡೆಸಿದ ಗ್ರಾಮಸ್ಥರು, ನಲ್ಕುದುರೆ ಗ್ರಾಮದ ಸರ್ವೆ ನಂ.56ರ ಕೆರೆಯು ದಾಖಲೆಗಳ ಪ್ರಕಾರ ಒಟ್ಟು 62 ಎಕರೆ 27 ಗುಂಟೆ ವಿಸ್ತೀರ್ಣ ಹೊಂದಿದೆ. ಈ ಕೆರೆಗೆ ಸಂಬಂಧಿಸಿದ ನೀರು ಮುಳುಗು ಪ್ರದೇಶದ ಭೂಮಿಯನ್ನು 1973ರ ಅಕ್ಟೋಬರ್ 23ರ ಆರ್‌ಡಿ 54 ಎಕ್ಯೂಎಸ್ 73 ಆದೇಶ ಹಾಗೂ 1977-78ರ ಆರ್‌ಐ ಎಲ್‌ಎಕ್ಯೂಎಸ್‌ಆರ್ ನಂ. 227/ 1977-78ರ ಭೂಸ್ವಾಧೀನ ಪ್ರಕ್ರಿಯೆಯಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಈ ಭೂಸ್ವಾಧೀನಕ್ಕೆ ಸಂಬಂಧಿಸಿದ ಜನರಲ್ ಅವಾರ್ಡ್ (ಜನರಲ್ ಅವಾರ್ಡ್) ನಕಲು ಹಾಗೂ 1979-80ರಲ್ಲಿ ರೈತರಿಗೆ ಪರಿಹಾರ ನೀಡಿರುವ ದಾಖಲೆಗಳು ಲಭ್ಯವಿವೆ. ಆದರೆ, ಭೂಸ್ವಾಧೀನಗೊಂಡಿರುವ ನೀರು ಮುಳುಗು ಪ್ರದೇಶವು ಪ್ರಸ್ತುತ ಕೆರೆ ಪಹಣಿ ಹಾಗೂ ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಸಮರ್ಪಕವಾಗಿ ಪ್ರತಿಬಿಂಬಿತವಾಗಿಲ್ಲ. ಇದರಿಂದ ಕೆರೆಯ ವಿಸ್ತೀರ್ಣ ಮತ್ತು ಅದರ ಗಡಿಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದೆ. ಸದರಿ ಪ್ರದೇಶದಲ್ಲಿ ಅನಧಿಕೃತ ಒತ್ತುವರಿ ನಡೆದಿರುವ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ. ಈ ಕೂಡಲೇ ದಾಖಲೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಕೆರೆಯ ಜಾಗ ಹಾಗೂ ನೀರು ಮುಳುಗು ಪ್ರದೇಶದ ಒತ್ತುವರಿ ತೆರವುಗೊಳಿಸುವಂತೆ ಈ ಹಿಂದೆ ಸಂಬಂಧಪಟ್ಟ ಕಂದಾಯ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ದಾಖಲೆಗಳಿಗೆ ಅನುಗುಣವಾಗಿ ಆಕಾರ್ ಬಂದ್ ದುರಸ್ತಿ ಹಾಗೂ ಕಂದಾಯ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು. ಸರ್ವೆಯಲ್ಲಿ ಅನಧಿಕೃತ ಒತ್ತುವರಿ ದೃಢಪಟ್ಟರೆ, ಕಾನೂನು ಪ್ರಕ್ರಿಯೆ ಅನುಸರಿಸಿ ಅದನ್ನು ತೆರವುಗೊಳಿಸಬೇಕು. ಕೆರೆಯ ಮೂಲ ವಿಸ್ತೀರ್ಣ, ನೀರು ಹರಿಯುವ ಮಾರ್ಗ ಹಾಗೂ ನೀರು ಮುಳುಗು ಪ್ರದೇಶವನ್ನು ಸಂರಕ್ಷಿಸಲು ಶಾಶ್ವತ ಗಡಿ ಗುರುತುಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಭೂಸ್ವಾಧೀನಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು, ಜನರಲ್ ಅವಾರ್ಡ್ ಹಾಗೂ ಪರಿಹಾರ ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು. ಕಂದಾಯ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ಹಾಗೂ ಸರ್ವೆ ನಡೆಸಿ, ಕೆರೆಯ ಮೂಲ ಗಡಿ ಮತ್ತು ಭೂಸ್ವಾಧೀನಗೊಂಡ ನೀರು ಮುಳುಗು ಪ್ರದೇಶವನ್ನು ನಿಖರವಾಗಿ ಗುರುತಿಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆ ಮತ್ತು ಸರ್ಕಾರಿ ಆಸ್ತಿಯನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಜಿಲ್ಲಾಧಿಕಾರಿ ಅವರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ಪರಿಶೀಲನೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಧರಣಿಯಲ್ಲಿ ಎನ್.ವಿ.ಚನ್ನಬಸಪ್ಪ, ವಿ.ಎಚ್.ಮಂಜುನಾಥ, ಎ.ಕೆ.ಮಧು, ಎಂ.ಆರ್.ಕೃಷ್ಣಮೂರ್ತಿ, ವಿ.ಆರ್.ಭೀಮಪ್ಪ, ಎ.ಕೆ. ರಂಗಸ್ವಾಮಿ, ಪಿ.ವಿ.ಕೃಷ್ಣಮೂರ್ತಿ, ಎಚ್.ರವಿ, ಎನ್.ಪಿ.ಭೋಜರಾಜ, ಎನ್.ಪಿ. ಲೋಹಿತ್, ಕೆ.ಎಚ್.ಶೇಖರಪ್ಪ, ಎಂ.ಪಿ.ಭೀಮಪ್ಪ, ಎ.ಕೆ.ರಾಜಪ್ಪ, ಎ.ಕೆ.ಮಂಜುನಾಥ್, ಎ.ಎಸ್.ಶಂಕರಮೂರ್ತಿ ಸೇರಿದಂತೆ ಇತರರು ಇದ್ದರು.

- - -

-29ಕೆಡಿವಿಜಿ33:

ನಲ್ಕುದುರೆ ಗ್ರಾಮಸ್ಥರು ಕೆರೆ ಮುಳುಗು ಪ್ರದೇಶದ ಅನಧಿಕೃತ ಒತ್ತುವರಿ ತೆರವುಗೊಳಿಸಿ, ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ದಾವಣಗೆರೆ ಡಿಸಿ ಕಚೇರಿ ಮುಂಭಾಗ ಗುರುವಾರ ಧರಣಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು