ಶಿಕಾರಿಪುರ: ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಪ್ರಗತಿ ನಗರ ಸುತ್ತಮುತ್ತ ವಿಪರೀತ ಕೋಳಿ ಮಾಂಸದಂಗಡಿಯಿಂದಾಗಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಸಾರ್ವಜನಿಕರು, ದನ ಕರುಗಳ ಮೇಲೆ ಹಲವು ಬಾರಿ ಮಾರಣಾಂತಿಕ ದಾಳಿ ನಡೆಸುತ್ತಿರುವುದರಿಂದ ಕೂಡಲೇ ಅಂಗಡಿಗಳನ್ನು ತೆರವುಗೊಳಿಸಿ ಜನಸಾಮಾನ್ಯರಿಗೆ ನೆಮ್ಮದಿಯ ವಾತಾವರಣ ನಿರ್ಮಿಸಿಕೊಡುವಂತೆ ಗುರುವಾರ ನಡೆದ ಪುರಸಭೆಯ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ ಘಟನೆ ನಡೆಯಿತು.
ಕೋಳಿ ಮಾಂಸದಂಗಡಿಯ ತ್ಯಾಜ್ಯವನ್ನು ಭಕ್ಷಿಸಿ, ದಷ್ಟಪುಷ್ಟವಾಗಿರುವ ಬೀದಿ ನಾಯಿಗಳು ಸಮೀಪದ ಬಡಾವಣೆಗಳಲ್ಲಿನ ಕೊಟ್ಟಿಗೆಗೆ ನುಗ್ಗಿ ದನಕರುಗಳ ಮೇಲೆ ದಾಳಿ ನಡೆಸುತ್ತಿದ್ದು, ಇದರೊಂದಿಗೆ ಸಣ್ಣ ಮಕ್ಕಳು, ಜನತೆ ಸಹ ದಾಳಿಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯರು ಹಲವು ಬಾರಿ ದೂರು ಸಲ್ಲಿಸಿದ್ದಾರೆ. ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ಅನಾಹುತ ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದಾಗ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.ಮುಖ್ಯಾಧಿಕಾರಿ ಭರತ್ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿನ ಅಂದಾಜು 500 ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಪಶು ವೈದ್ಯ ಇಲಾಖೆ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ವೈದ್ಯರು ಏಕಾಏಕಿ ಅಸಾಧ್ಯವಾಗಿದ್ದು ಹಂತಹಂತವಾಗಿ ಶಸ್ತ್ರ ಚಿಕಿತ್ಸೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಸದಸ್ಯ ಸುರೇಶ್, ಮಹಮ್ಮದ್ ಸಾಧಿಕ್, ರೂಪಕಲಾ ಹೆಗ್ಡೆ ಮತ್ತಿತರರು ಪಟ್ಟಣದ ಹಲವೆಡೆ ಕುರಿ, ಕೋಳಿ ಮಾಂಸದಂಗಡಿಗಳು ವಿಪರೀತವಾಗಿದ್ದು ಹೊರವಲಯದಲ್ಲಿ ಪ್ರತ್ಯೇಕ ಸ್ಥಳ ನಿಗದಿಪಡಿಸಿ ಸ್ಥಳಾಂತರಿಸುವಂತೆ ನೀಡಿದ ಸಲಹೆಗೆ ಮುಖ್ಯಾಧಿಕಾರಿಗಳು ಈಗಾಗಲೇ ಕುರಿ ಮಾಂಸದಂಗಡಿಗಳಿಗೆ ಆಶ್ರಯ ಬಡಾವಣೆಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ್ದು, ಸ್ಥಳೀಯರ ತೀವ್ರ ವಿರೋಧದ ಜತೆಗೆ ಅಂಗಡಿ ಮಾಲೀಕರು ತೆರಳದೆ ಪಾಳು ಬಿದ್ದಿದೆ ಎಂದು ಸಮಜಾಯಿಷಿ ನೀಡಿದರು.ಸದಸ್ಯ ಸುರೇಶ್, ಪಟ್ಟಣದ ಮಧ್ಯಭಾಗದಲ್ಲಿರುವ ಶಿವಗಿರಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿನ ಜಾಗ ಕುರಿ, ಕೋಳಿ ಮಾಂಸದಂಗಡಿಗೆ ಸುಸಜ್ಜಿತ ಸ್ಥಳವಾಗಿದ್ದು, ಸರ್ವರ ಸಲಹೆ ಮಾರ್ಗದರ್ಶನ ಪಡೆದು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದಾಗ ಮುಖ್ಯಾಧಿಕಾರಿಗಳು ಕೂಡಲೇ ಗಮನ ಹರಿಸುವುದಾಗಿ ಬರವಸೆ ನೀಡಿದರು.
ಹೊಸ ಸಂತೆ ಮೈದಾನದಲ್ಲಿ ಪ್ರತಿ ಶನಿವಾರದ ಸಂತೆಯಲ್ಲಿ ಕುರಿಗಳ ವ್ಯಾಪಾರದಿಂದ ಶಿವಮೊಗ್ಗ ಮುಖ್ಯ ರಸ್ತೆಯಲ್ಲಿ ಒಡಾಡುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಯಾಗುತ್ತಿದ್ದು, ಕುರಿ ವ್ಯಾಪಾರಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸುವಂತೆ ಹಾಗೂ ಹಲವೆಡೆ ಖಾಲಿ ನಿವೇಶನ ಸ್ವಚ್ಛತೆಯಿಲ್ಲದೆ ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದೆ. ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡುವಂತೆ ಸದಸ್ಯೆ ರೂಪಕಲಾ ಹೆಗ್ಡೆ ಸಭೆಯ ಗಮನ ಸೆಳೆದರು.ಈ ವೇಳೆ ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪ ಮಂಜುನಾಥ್ ಸದಸ್ಯೆ ಉಮಾವತಿ, ಶಕುಂತಲಮ್ಮ, ಕಮಲಮ್ಮ ಸಮುದಾಯ ಸಂಘಟನಾ ಅಧಿಕಾರಿ ಸುರೇಶ್, ಪ್ರಬಂಧಕ ರಾಜಕುಮಾರ್, ಪರಶುರಾಮಪ್ಪ, ಸೈಯದ್ ನವಾಜ್ ಮತ್ತಿತರರಿದ್ದರು.