ಕಂಪ್ಲಿ: ದೇವಸಮುದ್ರ ಗ್ರಾಮದ ಮುಖ್ಯ ರಸ್ತೆಯಿಂದ ನೆಲ್ಲುಡಿ ಮಾಗಾಣಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡಲೇ ಅಗಲೀಕರಿಸಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ದೇವಸಮುದ್ರ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು.
ರಸ್ತೆ ಕಿರಿದಾಗಿರುವುದರಿಂದ ಎರಡು ವಾಹನಗಳು ಎದುರು ಬದುರಾದಾಗ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅದರಲ್ಲೂ ಭತ್ತ ಕೊಯ್ಲು ಅವಧಿಯಲ್ಲಿ ರೈತರು ಕೃಷಿ ಉತ್ಪನ್ನ ಸಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಹಾಗೂ ಲಾರಿ ಬಳಸುವುದರಿಂದ ರಸ್ತೆ ಸಂಚಾರದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಕೆಲವೊಮ್ಮೆ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಸಂಚಾರ ವ್ಯತ್ಯಯವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ದೂರಿದರು.
ರಸ್ತೆಯ ಎರಡೂ ಬದಿಯಲ್ಲಿರುವ ಒತ್ತುವರಿ ತೆರವುಗೊಳಿಸಿ ಅಗಲೀಕರಣ ಮಾಡಿದರೆ ಮಾಗಾಣಿ ಪ್ರದೇಶದ ಸಾವಿರಾರು ಎಕರೆ ಕೃಷಿಭೂಮಿಯ ರೈತರಿಗೆ ಅನುಕೂಲವಾಗಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರ ಹೊಲಗಳಿಗೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಜತೆಗೆ ಗ್ರಾಮಸ್ಥರ ದೈನಂದಿನ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ದೇವಸಮುದ್ರ ಗ್ರಾಮದ ಮುಖ್ಯರಸ್ತೆಯಿಂದ ಹೈಟೆಕ್ ಶೌಚಾಲಯದವರೆಗೆ ಸಿಸಿ ರಸ್ತೆ ಅಭಿವೃದ್ಧಿಪಡಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನೆಲೆ ಪ್ರಸ್ತುತ ರಸ್ತೆ ಅಭಿವೃದ್ಧಿ ಕಾಮಗಾರಿಯ ಜತೆಗೆ ಅಗತ್ಯವಿರುವ ಕಡೆ ರಸ್ತೆ ಅಗಲೀಕರಣ ಕೈಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಒತ್ತುವರಿ ತೆರವುಗೊಳಿಸಿ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ರೈತರಾದ ಎಚ್.ಗುಂಡಪ್ಪ, ಪರಮೇಶ್ವರ, ಪಿ. ನೀಲಕಂಠಪ್ಪ, ಹೊನ್ನೂರಪ್ಪ, ವಿ.ವೆಂಕಟೇಶ, ಕೆ. ದೊಡ್ಡ ಬಸಪ್ಪ, ಪಂಪಾಪತಿ, ಸಣಾಪುರ ರುದ್ರಪ್ಪ, ಬಸವನಗೌಡ ಸೇರಿದಂತೆ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಇದ್ದರು.