ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಮಸಣಾಪುರ ಗ್ರಾಮದ ನಾಯಕ ಮತ್ತು ಉಪ್ಪಾರ ಸಮುದಾಯದವರು ತಲತಲಾಂತರದಿಂದ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದು, ಖಾಸಗಿ ವ್ಯಕ್ತಿಯೊಬ್ಬರು ಆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಎರಡು ಸಮುದಾಯಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಮುಖಂಡ ಶ್ರೀನಿವಾಸ ಆರೋಪಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮದ ಸಮೀಪದಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಸರ್ವೆ ನಂ 19/6 ರಲ್ಲಿ 27 ಗುಂಟೆ ಜಮೀನು ಇದ್ದು, ಇದನ್ನು ಎರಡು ಸಮುದಾಯದವರು ಸ್ಮಶಾನ ಮಾಡಿಕೊಂಡು ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ನಾಯಕ ಸಮುದಾಯ ಲೇ.ದೊಡ್ಡನಾಯಕರ ಪತ್ನಿ ವೀರಮ್ಮ ಮಕ್ಕಳಾದ ಡಿ.ಪ್ರೇಮ, ಡಿ.ವಿಜಯ, ಡಿ .ಸ್ವಾಮಿ ಅಕ್ರಮವಾಗಿ ಜಾಗ ಒತ್ತುವರಿ ಮಾಡಿಕೊಂಡು ತಂತಿಬೇಲಿ ಹಾಕಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದರು. ಈ ಬಗ್ಗೆ ತಹಸೀಲ್ದಾರ್, ಯಳಂದೂರು ಪೊಲೀಸ್ ಠಾಣೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ತಹಸೀಲ್ದಾರ್ ನೇತೃತ್ವದಲ್ಲಿ ಸರ್ವೆ ಇಲಾಖೆ ಅಧಿಕಾರಿ ಜಾಗ ಗುರುತಿಸಿ ಕಲ್ಲು ನೆಟ್ಟಿ ಒತ್ತುವರಿದಾರರಿಗೆ ಸೂಚನೆ ನೀಡಿ ಹೋಗಿದ್ದರು. ಆದರೆ ಒತ್ತುವರಿದಾರರು ಗುರುತಿನ ಕಲ್ಲು ಕಿತ್ತು ಮತ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ಸ್ಮಶಾನಕ್ಕಾಗಿ ಹೋರಾಟ ಮಾಡುವ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದರು. ಗ್ರಾಪಂ ಸದಸ್ಯ ವಿ.ಮಹದೇಶ ಮಾತನಾಡಿ, ನಾನು ಗ್ರಾಪಂ ಸದಸ್ಯನಾಗಿ ಎರಡು ಸಮುದಾಯ ಸ್ಮಶಾನಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಇದನ್ನು ಸಹಿಸದ ಲೇ.ದೊಡ್ಡನಾಯಕರ ಪತ್ನಿ ಹಾಗೂ ಮಕ್ಕಳು ನನ್ನ ವಿರುದ್ಧ ದೂರು ನೀಡುವ ಜೊತೆಗೆ ಗ್ರಾಮದಲ್ಲಿ ಸಾಮರಸ್ಯ ಹಾಳು ಮಾಡುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ನನ್ನ ವಿರುದ್ಧ ಇತರೆ ಜನಾಂಗವನ್ಬು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ತಹಸೀಲ್ದಾರ್, ಜಿಲ್ಲಾಡಳಿತ ಸೂಕ್ತ ಕೈಗೊಳ್ಳಬೇಕು. ಅಲ್ಲದೆ ಗ್ರಾಮದ ಎರಡು ಸಮುದಾಯಗಳ ಮುಖಂಡರ ವಿರುದ್ಧ ದೂರು ನೀಡಿ ಕಿರುಕುಳ ನೀಡುತ್ತಿದ್ದಾರೆ. ಒತ್ತುವರಿ ತೆರವುಗೊಳಿಸಿ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. ಮುಖಂಡರಾದ ಶಂಕರನಾಯಕ, ಬಿಳಿಗಿರಿರಂಗನಾಯಕ, ವೆಂಕಟರಂಗಸ್ವಾಮಿನಾಯಕ, ಕೃಷ್ಣಶೆಟ್ಟಿ, ರುದ್ರನಾಯಕ ಹಾಜರಿದ್ದರು.