ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆಯಲು ಇನ್ನು ಕೆಲವು ದಿನಗಳು ಬಾಕಿ ಇದ್ದು, ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಾಗಿ ಹಾಸನ ಜಿಲ್ಲೆಗೆ ಬರುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದ್ದ ಫ್ಲೆಕ್ಸ್, ಬ್ಯಾನರ್, ಪೆಟ್ಟಿಗೆ ಅಂಗಡಿಗಳನ್ನು ಬುಧವಾರ ಬೆಳಿಗ್ಗೆ ಜೆಸಿಬಿ ಹಾಗೂ ನಗರಸಭೆ ಸಿಬ್ಬಂದಿಯ ಸಹಕಾರದಲ್ಲಿ ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳ ತಂಡ ತೆರವು ಕಾರ್ಯಾಚರಣೆ ನಡೆಸಿತು.ನಗರದ ಬಿ.ಎಂ ರಸ್ತೆ ಉದ್ದಗಲಕ್ಕೂ ಯಾರ್ಯಾರು ರಸ್ತೆ ಪಕ್ಕದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಪೆಟ್ಟಿಗೆ ಅಂಗಡಿಗಳು, ಅಂಗಡಿ ಮಾಲೀಕರಿಂದ ಶೆಡ್ ಹಾಕಿರುವುದನ್ನು ಯಾವ ಮುಲಾಜಿಲ್ಲದೇ ಜೆಸಿಬಿಯೊಂದಿಗೆ ನಗರಸಭೆ ಪೌರಕಾರ್ಮಿಕರು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಗರದ ಹೃದಯ ಭಾಗವಾದ ಎನ್.ಆರ್. ವೃತ್ತದ ಬಳಿ ಕೆಲ ಅಂಗಡಿ ಮಾಲೀಕರು ತಮ್ಮ ಅಂಗಡಿ ಜಾಗಕ್ಕಿಂತ ಮುಂದೆ ಫುಟ್ಪಾತ್‌ಗೆ ಬಿಸಿಲು ಬಾರದಂತೆ ಹಾಕಲಾಗಿದ್ದ ಶೆಡ್ ಅನ್ನು ತೆರವು ಮಾಡಿದರು. ಇನ್ನು ಫ್ಲೆಕ್ಸ್ ಅನ್ನು ಕೂಡ ತೆರವುಗೊಳಿಸಲಾಯಿತು. ರಸ್ತೆ ಬದಿ ಫುಟ್ಬಾತ್‌ಗೆ ಹೊಂದಿಕೊಂಡಂತಿದ್ದ ಚಿಕ್ಕಪುಟ್ಟ ಮರಗಳ ರೆಂಬೆ ತೆರವು ಮಾಡಿದರು. ಕೆಲವರು ವಿರೋಧ ಮಾಡಿದರೂ ನಗರಸಭೆ ಆಯುಕ್ತರಾದ ನರಸಿಂಹಮೂರ್ತಿ ಯಾವುದಕ್ಕೂ ಲೆಕ್ಕಿಸದೇ ತೆರವುಗೊಳಿಸಿದರು.
ಇದೇ ವೇಳೆ ನಗರಸಭೆ ಆಯುಕ್ತರಾದ ನರಸಿಂಹಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬ ಮತ್ತು ಸಿದ್ದೇಶ್ವರ ದೇವಸ್ಥಾನದ ಜಾತ್ರೆ ಇರುವುದರಿಂದ ಹಾಸನ ನಗರದಲ್ಲಿ ಎಲ್ಲೆಲ್ಲಿ ಅನಧಿಕೃತವಾಗಿ ರಸ್ತೆ ಪಕ್ಕದಲ್ಲಿ ಫ್ಲೆಕ್ಸ್, ಬ್ಯಾನರ್, ಪೆಟ್ಟಿಗೆ ಅಂಗಡಿಗಳು ಇರುವ ಕಡೆ ವ್ಯಾಪಾರಸ್ಥರು ಪ್ಲಾಸ್ಟಿಕ್, ಪೇಪರ್ ಸೇರಿದಂತೆ ಇತರೆ ತ್ಯಾಜ್ಯವನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಅವರಿಗೆಲ್ಲಾ ಅರಿವು ಮೂಡಿಸುತ್ತಿದ್ದು, ಯಾರ್ಯಾರು ಮುಖ್ಯ ರಸ್ತೆಯಲ್ಲಿ ಅಂಗಡಿ ಹಾಕಿಕೊಂಡಿದ್ದಾರೆ ಅವರು ಇಲ್ಲಿಂದ ಬೇರೆ ಕಡೆ ಅಂಗಡಿ ಹಾಕಿಕೊಳ್ಳಲಿ ಎಂದು ಸೂಚಿಸಲಾಗಿದೆ ಎಂದರು. ನಾವು ಇವರಿಗೆ ಯಾವ ಅನುಮತಿ ಕೊಟ್ಟಿರುವುದಿಲ್ಲ. ಆದರೇ ಮಾನವೀಯತೆ ದೃಷ್ಠಿಯಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಳ್ಳಲು ಬಿಡಲಾಗಿದೆ. ಆದರೆ ಈಗ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಜನರು ವಿವಿಧ ಕಡೆಗಳಿಂದ ಇಲ್ಲಿಗೆ ಹೆಚ್ಚಾಗಿ ಬರುವುದರಿಂದ ಮುಖ್ಯ ರಸ್ತೆಗಳಲ್ಲಿ ಅನಧಿಕೃತವಾಗಿ ಇಡಲಾಗಿರುವ ಎಲ್ಲವನ್ನು ತೆರವು ಮಾಡಲಾಗುತ್ತಿದೆ ಎಂದು ಹೇಳಿದರು.ತೆರವು ಕಾರ್ಯಾಚರಣೆಯಲ್ಲಿ ನಗರಸಭೆ ಮುಖ್ಯ ಎಂಜಿನಿಯರ್ ವೆಂಕಟೇಶ್, ದೀಪಕ್, ಆರೋಗ್ಯ ನಿರೀಕ್ಷಕರಾದ ಆದೀಶ್, ಚನ್ನೇಗೌಡ, ಪ್ರಸಾದ್, ಚೇತನ್, ಮೇಲ್ವಿಚಾರಕರಾದ ಪರಶುರಾಮು ಇತರರು ಉಪಸ್ಥಿತರಿದ್ದರು.