ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಒಂದು ಕಾಲದಲ್ಲಿ ಐತಿಹಾಸಿಕ ಚರಿತ್ರೆಯನ್ನೇ ಬರೆದಿರುವ ಬಿಜಾಪುರದ ಹೆಸರು ವಿಜಯಪುರವಾಗಿ ಬದಲಾಗಿದೆ. ಆದರೆ, ಇಂದಿಗೂ ಕೂಡ ಅದೇ ಹಳೆಯ ಇಕ್ಕಟ್ಟಾದ ರಸ್ತೆಗಳು, ಗಿಜಗುಡುವ ವಾಹನಗಳ ಸಂಚಾರ ದಟ್ಟಣೆಯಿಂದ ಹೊರಬಂದಿರಲಿಲ್ಲ. ಆದರೆ, ಆದಿಲ್ ಶಾಹಿಗಳ ನಾಡು, ಪಂಚ ನದಿಗಳ ಬೀಡು ಇದೀಗ ಹೊಸತನದ ರೂಪವನ್ನು ಕಂಡುಕೊಳ್ಳುತ್ತಿದೆ. ಜಿಲ್ಲೆಯ ಹೆಸರು ಬದಲಾಗುವುದರೊಂದಿಗೆ ಹೊಸತನದ ರೂಪುರೇಷೆ ಪಡೆಯುತ್ತಿದ್ದು, ನಗರದ ಚಿತ್ರಣವೂ ಬದಲಾಗುತ್ತಿದೆ.ಕಳೆದ ಹಲವಾರು ವರ್ಷಗಳಿಂದ ರಸ್ತೆಗಳ ಮೇಲೆ ಕಟ್ಟಡಗಳನ್ನು ಅತಿಕ್ರಮಣವಾಗಿ ನಿರ್ಮಿಸಿದ್ದವರಿಗೆ ಇದೀಗ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸಿದ್ದು, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ನಗರದ ಸುಭಾಷ್ ಚಂದ್ರಬೋಸ್ ವೃತ್ತ (ಇಟಗಿ ಕ್ರಾಸ್) ದಿಂದ ಬಿ.ಎಂ.ಪಾಟೀಲ ವೃತ್ತದವರೆಗೆ ಸುಮಾರು 4 ಕಿಲೊಮೀಟರ್ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. ಈ ರಸ್ತೆಯಲ್ಲಿದ್ದ ಒಟ್ಟು 147 ಆಸ್ತಿಗಳಿಗೆ ಮೊದಲೇ ನೊಟೀಸ್ ಕೊಟ್ಟು, ಅವುಗಳನ್ನು ತೆರವುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶದ ಮೇರೆಗೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ನೇತೃತ್ವದಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ 147 ಆಸ್ತಿಗಳಲ್ಲಿನ ಮನೆಗಳು, ಅಂಗಡಿಗಳು ಹಾಗೂ ಗೂಡಂಗಡಿಗಳನ್ನು ಅಧಿಕಾರಿಗಳು ತೆರವುಗೊಳಿದ್ದಾರೆ.
ಐತಿಹಾಸಿಕ ತಾಜ ಬಾವಡಿ ಸುತ್ತಲೂ ತೆರವು:
ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಾಗೂ ಪುರಾತನ ತಾಜಬಾವಡಿ (ದೊಡ್ಡದಾದ ಬಾವಿ)ಗೆ ಹೊಂದಿಕೊಂಡು ಅನೇಕರು ಅಕ್ರಮ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಐತಿಹಾಸಿಕ ಸ್ಮಾರಕವನ್ನು ಉಳಿಸುವ ಸಲುವಾಗಿ ಜಿಲ್ಲಾಡಳಿತದ ಅಧಿಕಾರಿ ವರ್ಗ, ಪೊಲೀಸ್ ಇಲಾಖೆ, ನಗರ ಶಾಸಕ ಯತ್ನಾಳ, ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಣ ತೊಟ್ಟಿದ್ದಾರೆ. ಹೀಗಾಗಿ ಬಾವಿಗೆ ಹೊಂದಿಕೊಂಡಿದ್ದ 19 ಮನೆಗಳು ಹಾಗೂ ಕಟ್ಟಡಗಳನ್ನು ಡೆಮಾಲಿಷ್ ಮಾಡಿ ತೆರವುಗೊಳಿಸಲಾಗಿದೆ. ಈ ಸ್ಥಳದಲ್ಲಿದ್ದ ಖಾಸಗಿ ಜಾಗದಲ್ಲಿ ಮನೆಗಳನ್ನು ತೆರವುಗೊಳಿಸಿ, ಬಾವಿ ಸುತ್ತಲಿನ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲದೆ ತಾಜಬಾವಡಿ ಆವರಣವನ್ನೂ ಕ್ಲೀನ್ ಮಾಡಲಾಗಿದೆ. ಇಲ್ಲಿನ ಬಡ ನಿವಾಸಿಗಳಿಗೆ ವಾಸಕ್ಕೆ ತೊಂದರೇ ಆಗಬಾರದು ಎಂದು ಸ್ಲಂ ಬೋರ್ಡ್‌ನಿಂದ ಅವರಿಗೆ ಮನೆಗಳನ್ನು ಸಹ ಕೊಡಲಾಗಿದೆ.ಆಜಾದ್ ರಸ್ತೆ ಅಗಲೀಕರಣ:ಕೆಲವು ದಿನಗಳ ಹಿಂದೆ ನಗರದ ಮಹಾತ್ಮಾಗಾಂಧಿ ವೃತ್ತದ ಬಳಿಯ ಆಜಾದ್ ರಸ್ತೆಯಲ್ಲಿನ 10ಕ್ಕೂ ಅಧಿಕ ದೊಡ್ಡದೊಡ್ಡ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಈ ವೇಳೆ ಕೆಲ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದರೂ ನಗರದ ಅಭಿವೃದ್ಧಿ ದೃಷ್ಟಿಯಿಂದ ಪೊಲೀಸರ ಸಹಾಯದೊಂದಿಗೆ ಅವೆಲ್ಲವೂಗಳನ್ನು ತೆರವುಗೊಳಿಸಿ ಇದೀಗ ಸಂಚಾರಕ್ಕೆ ಮುಕ್ತ ಮಾಡಿ ಕೊಡಲಾಗಿದೆ. ಈ ಮೊದಲು ಸಣ್ಣದಾದ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಕಷ್ಟವಾಗಿದ್ದು, ಇದೀಗ ವಾಹನ ಸಂಚಾರಕ್ಕೆ ಅನುಕೂಲವಾಗಿದೆ.ಅಗಲೀಕರಣವಾದ ಹಲವು ರಸ್ತೆಗಳು:
ಕಳೆದ ಒಂದು ತಿಂಗಳಲ್ಲಿ ಇಷ್ಟೊಂದು ಬದಲಾವಣೆಗಳು, ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದೆ. ಇನ್ನು ಇದಕ್ಕೂ ಮೊದಲು ಅಟಲ್‌ಬಿಹಾರಿ ವಾಜಪೇಯಿ ರಸ್ತೆ, ಆದರ್ಶನಗರ ರಸ್ತೆ, ಸ್ಟೇಷನ್ ರಸ್ತೆ, ಸೈನಿಕ ಶಾಲೆಯ ಮುಂದುಗಡೆ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡಿ, ಸಿಂಗಲ್ ರೋಡ್‌ಗಳಿದ್ದ ಜಾಗದಲ್ಲಿ ಈಗಾಗಲೇ ಡಬಲ್ ರೋಡ್ ನಿರ್ಮಿಸಲಾಗಿದ್ದು, ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸುವ ಕೆಲಸ ನಡೆದಿದೆ.ಈ ಹಿಂದೆ ಬೇರೆಯವರು ಶಾಸಕರಿದ್ದಾಗ ಯಾವುದೂ ರಸ್ತೆಗಳನ್ನು ಅಗಲೀಕರಣ ಮಾಡುವ ಧೈರ್ಯ ಮಾಡಿರಲಿಲ್ಲ. ನಾನು ಬಂದಮೇಲೆ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಮುಂದಾಗಿದ್ದೇನೆ. ಈ ಹಿನ್ನೆಲೆ ಮೊದಲ ಹಂತದಲ್ಲಿ ಮುಖ್ಯ ರಸ್ತೆಗಳ ಅಗಲೀಕರಣ, ಚರಂಡಿ ವ್ಯವಸ್ಥೆ, ಡಾಂಬರೀಕರಣ, ಲೈಟಿಂಗ್ ಮಾಡಲಾಗಿದೆ. ಇದೀಗ ಒಳ ರಸ್ತೆಗಳನ್ನು ಸಹ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಡಿ ರಾಜ್ಯದಲ್ಲೇ ವಿಜಯಪುರ ನಗರವನ್ನು ಮಾದರಿ ಮಾಡುವ ಮಹದಾಸೆ ನನ್ನದಾಗಿದೆ.-ಬಸನಗೌಡ ಪಾಟೀಲ್ ಯತ್ನಾಳ,
ವಿಜಯಪುರ ನಗರ ಶಾಸಕರು.ನಗರದ ಸೌಂದರ್ಯೀಕರಣಕ್ಕಾಗಿ ಹಾಗೂ ಜನರ ಸಂಚಾರಕ್ಕೆ ಇಕ್ಕಟ್ಟಾದ ರಸ್ತೆಗಳನ್ನು ಅಗಲೀಕರಣ ಮಾಡುವ ಉದ್ದೇಶದಿಂದ ಹಲವು ರಸ್ತೆಗಳಲ್ಲಿದ್ದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಜನರು ಸ್ವಯಂಪ್ರೇರಿತವಾಗಿ ಮನೆಗಳು ಹಾಗೂ ಅಂಗಡಿಗಳಲ್ಲಿದ್ದ ಸಾಮಾನು, ಸರಂಜಾಮುಗಳನ್ನು ತೆಗೆದುಕೊಂಡು, ಸಹಕಾರ ನೀಡುವ ಮೂಲಕ ವಿಜಯಪುರದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಜತೆಗೆ ತಾಜಬಾವಡಿಯನ್ನು ಸಂರಕ್ಷಿಸುವ ಉದ್ದೇಶದಿಂದ ಸುತ್ತಲೂ ಇದ್ದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಅವರಿಗೆ ಬೇರೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.-ವಿಜಯಕುಮಾರ ಮೆಕ್ಕಳಕಿ, ಆಯುಕ್ತರು ಮಹಾನಗರ ಪಾಲಿಕೆ.