ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮಧ್ಯೆ ಅಪರಿಚಿತರು ಕಾನೂನು ಬಾಹಿರವಾಗಿ ಏಕಾಏಕಿ ನಿರ್ಮಿಸಿದ್ದ ವೃತ್ತಗಳನ್ನು ಶಾಂತಿ ಸಭೆಯ ಮೂಲಕ ತೆರವುಗೊಳಿಸಲಾಗಿದೆ. ಶಿರಾಡೋಣ ರಾಜ್ಯ ಹೆದ್ದಾರಿ-41ರ ಮಧ್ಯೆ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಶನಿವಾರ ರಾತ್ರೋರಾತ್ರಿ ಸುಮಾರು 9ಕ್ಕೂ ಹೆಚ್ಚು ಅನಧಿಕೃತ ವೃತ್ತಗಳನ್ನು ನಿರ್ಮಾಣ ಮಾಡಲಾಗಿತ್ತು. ಇದು ಗ್ರಾಮದಲ್ಲಿ ಸಾಮರಸ್ಯ ಹದಗೆಡಲು ಕೂಡ ಕಾರಣವಾಗಿತ್ತು. ಈ ಬಗ್ಗೆ ಕನ್ನಡಪ್ರಭ "ರಾಜ್ಯ ಹೆದ್ದಾರಿಯಲ್ಲಿ ಏಕಾಏಕಿ 9 ವೃತ್ತಗಳ ಸೃಷ್ಟಿ " ತಲೆಬರಹದಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.ಈ ವರದಿಯಿಂದ ಎಚ್ಚೆತ್ತ ತಾಲೂಕು ಆಡಳಿತದ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಗ್ರಾಮ ಪಂಚಾಯತಿಯ ಸಭಾಭವನದಲ್ಲಿ ತಹಸೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಪೊಲೀಸರ ನೇತೃತ್ವದಲ್ಲಿ ಶಾಂತಿಸಭೆ ನಡೆಸಿದ್ದಾರೆ. ಈ ವೇಳೆ ಗ್ರಾಮದ ಸಾಮರಸ್ಯದ ಜೀವನಕ್ಕೆ ಧಕ್ಕೆಯಾಗದಂತೆ ಜೊತೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಗೊಂದಲದ ವಾತಾವರಣ ನಿರ್ಮಾಣವಾಗದಂತೆ ಗ್ರಾಮದ ಮುಖಂಡರು ಹಾಗೂ ಯುವಕರ ಜತೆ ಚರ್ಚಿಸಿದ್ದು, ಮನವೊಲಿಕೆ ಮಾಡಿದರು. ಅಲ್ಲದೇ, ಈಗಾಗಲೇ ನಿರ್ಮಿಸಿದ್ದ ಎಲ್ಲ ಸಮಾಜದ ಮಹನೀಯರ ಹೆಸರಿನ ವೃತ್ತಗಳ ತೆರವಿಗೆ ಹಿರಿಯರ ಒಪ್ಪಿಗೆ ಪಡೆದುಕೊಂಡರು. ನಂತರ ಜೆಸಿಬಿ ಬಳಸಿ ಎಲ್ಲ 9 ವೃತ್ತಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿಯೇ ತೆರವು ಮಾಡಲಾಯಿತು.
ಸ್ಥಳಕ್ಕೆ ಅಧಿಕಾರಿಗಳ ಭೇಟಿ:ಸೋಮವಾರ ಗ್ರಾಮಕ್ಕೆ ತಹಸೀಲ್ದಾರ್ ಪ್ರಕಾಶ ಸಿಂದಗಿ, ಪಿಡಬ್ಲ್ಯೂಡಿ ಎಇಇ ಅರುಣಕುಮಾರ ವಡಗೇರಿ, ಮಹಿಳಾ ಪಿಎಸ್ಐ ಸಿ.ಎಂ.ಚೌರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಗೊಂಡಪ್ಪಗೌಡ ಪಾಟೀಲ ಹಾಗೂ ಗ್ರಾಪಂ ಪಿಡಿಒ ಶಿವಾನಂದ ಮೂಲಿಮನಿ ಭೇಟಿ ನೀಡಿ ಸರ್ವ ಸದಸ್ಯರ, ಸಮುದಾಯದ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ತಿಳಿವಳಿಕೆ ನೀಡಿದರು. ಅಲ್ಲದೆ ಗ್ರಾಮದಲ್ಲಿ ಅಶಾಂತಿ ಉಂಟಾಗದಂತೆ ಎಚ್ಚರಿಕೆ ನೀಡಿದರು.
ತೆರವಿಗೆ ಸೂಚನೆ:ಚಿಕ್ಕರೂಗಿ ಗ್ರಾಮದ ದೇವರಹಿಪ್ಪರಗಿ-ಇಂಡಿ ರಾ.ಹೆದ್ದಾರಿ -41 ರಸ್ತೆಯ ಮಧ್ಯದಲ್ಲಿ ಕಾನೂನು ಬಾಹಿರವಾಗಿ ಮತ್ತು ಶಾಂತಿಗೆ ಭಂಗ ತರುವ ರೀತಿಯಲ್ಲಿ ವೃತ್ತಗಳು ನಿರ್ಮಾಣ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶಾಂತಿ ಸಭೆ ನಡೆಸಿದ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ವೃತ್ತಗಳ ತೆರವಿಗೆ ಸೂಚನೆ ನೀಡಿದರು.-------------ಕೋಟ್.....
ತಹಸೀಲ್ದಾರ್ ಅವರ ನೇತೃತ್ವದಲ್ಲಿ ಲೋಕೋಪಯೋಗಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಮುದಾಯದ ಮುಖಂಡರ ಜೊತೆ ನಡೆದ ಶಾಂತಿಸಭೆ ಫಲಪ್ರದವಾಗಿದೆ. ಅವರ ಆದೇಶದಂತೆ ಹಾಗೂ ಗ್ರಾಮಸ್ಥರ ಸಹಕಾರದಿಂದ ರಸ್ತೆ ಮಧ್ಯೆ ತಲೆಯೆತ್ತಿದ್ದ ಅನಧಿಕೃತ ವೃತ್ತಗಳನ್ನು ಸೋಮವಾರವೇ ತೆರವುಗೊಳಿಸಲಾಯಿತು.- ಶಿವಾನಂದ ಮೂಲಿಮನಿ, ಚಿಕ್ಕರೂಗಿ ಗ್ರಾಪಂ ಪಿಡಿಒ