ಗಜೇಂದ್ರಗಡ: ಪಟ್ಟಣದ ಸುಗಮ ಸಂಚಾರಕ್ಕಾಗಿ ಬೀದಿ ಬದಿ ವ್ಯಾಪಾರಕ್ಕೆ ನಿರ್ಬಂಧ ಹೇರಿದ್ದ ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಮಂಗಳವಾರ ರೋಣ, ಕುಷ್ಟಗಿ ಹಾಗೂ ಬಸ್ ನಿಲ್ದಾಣದ ರಸ್ತೆಯ ಫುಟಪಾತ್ ಮೇಲಿನ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು.
ಪಟ್ಟಣವು ವಾಣಿಜ್ಯ ಕೇಂದ್ರವಾಗಿರುವುದರಿಂದ ನೆರೆಯ ಕುಷ್ಟಗಿ, ಯಲಬುರ್ಗಾ ಹಾಗೂ ಹುನಗುಂದ ತಾಲೂಕಿನ ೩೦ಕ್ಕೂ ಅಧಿಕ ಗ್ರಾಮಗಳ ಜನತೆ ಪಟ್ಟಣದಲ್ಲಿ ವ್ಯಾಪಾರ ವಹಿವಾಟಿಗೆ ಆಗಮಿಸುತ್ತಾರೆ. ಹೀಗಾಗಿ ವಾಹನ ದಟ್ಟಣೆ ಜತೆಗೆ ಜನದಟ್ಟಣೆ ಹೆಚ್ಚಾಗಿ ಇಲ್ಲಿನ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಕುಷ್ಟಗಿ ಹಾಗೂ ರೋಣ ಮತ್ತು ಗದಗ ರಸ್ತೆಯಲ್ಲಿನ ಫುಟ್‌ಪಾತ್ ಅತಿಕ್ರಮಣದಿಂದ ಸುಗಮ ಸಂಚಾರಕ್ಕೆ ಕಂಟಕ ಎದುರಾಗಿತ್ತು. ಪರಿಣಾಮ ಸಣ್ಣಪುಟ್ಟ ಅಪಘಾತ ಮತ್ತು ಅವಘಡಗಳು ಸಂಭವಿಸುವುದು ಸಾಮಾನ್ಯ ಎಂಬಂತಾಗಿತ್ತು. ಹೀಗಾಗಿ ತಹಸೀಲ್ದಾರ್ ಕಚೇರಿಯ ಕೂಗಳತೆಯ ದೂರದಲ್ಲಿನ ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣವಾಗಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎನ್ನುವ ದೂರುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದವು.
ಪಟ್ಟಣದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಇತ್ತೀಚೆಗೆ ಕಿರಾಣಿ ಅಂಗಡಿಗಳು ಹಾಗೂ ಹೊಟೇಲ್‌ಗಳಲ್ಲಿ ಟೇಸ್ಟಿಂಗ್ ಪೌಡರ್, ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುವ ಅಂಗಡಿಗಳ ಮೇಲೆ ನಡೆಸಿದ್ದರು. ಆಗ ಫುಟ್‌ಪಾತ್ ಅತಿಕ್ರಮಣ ಕುರಿತು ತಹಸೀಲ್ದಾರ್ ಗಮನಕ್ಕೆ ತಂದಾಗ ಹಂತ, ಹಂತವಾಗಿ ಒಂದೊಂದೆ ಕೆಲಸ ಕೈಗೊಳ್ಳಲಾಗುವುದು ಎಂದಿದ್ದರು. ಈಗ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವಿಗೆ ಮುಂದಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಪಟ್ಟಣದಲ್ಲಿ ಪುರಸಭೆ ಹಾಗೂ ಪೊಲೀಸ್ ಇಲಾಖೆಯು ಪಟ್ಟಣದ ಪ್ರಮುಖ ನಾಲ್ಕು ರಸ್ತೆಗಳಲ್ಲಿನ ಗೂಡುಂಗಡಿ, ಒತ್ತುವ ಗಾಡಿ ಹಾಗೂ ಬೀದಿ ಬದಿ ವ್ಯಾಪಾರಕ್ಕೆ ನಿರ್ಬಂಧ ಹೇರಿದೆ. ಆದರೆ ಪಟ್ಟಣದ ಇದೇ ನಾಲ್ಕು ರಸ್ತೆಗಳಲ್ಲಿ ದೊಡ್ಡ, ದೊಡ್ಡ ಅಂಗಡಿಗಳ ಮುಂಭಾಗದ ರಸ್ತೆ ಹಾಗೂ ಫುಟ್‌ಪಾತ್ ಮೇಲೆ ತಗಡು ಹಾಕಿಕೊಂಡು ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳ ಕೋಪ, ತಾಪ ಕೇವಲ ಸಣ್ಣ ವ್ಯಾಪಾರಸ್ಥರಿಗಷ್ಟೇನಾ ಅಥವಾ ಎಲ್ಲರಿಗೂ ಒಂದೇನಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
"ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗೆ ಜೋಡು ರಸ್ತೆ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವಿವಿಧ ವೃತ್ತಗಳ ರಸ್ತೆ ಬದಿಯಲ್ಲಿ ವ್ಯಾಪಾರ, ವಹಿವಾಟಿಗೆ ನಿರ್ಬಂಧ ಹೇರಿದ್ದಾರೆ. ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ ಆಡಳಿತ ಹಾಗೂ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿರುವುದಕ್ಕೆ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅಧಿಕಾರಿಗಳ ನಡೆ ಖಂಡಿಸಿ ಮಂಗಳವಾರ ಬೀದಿಬದಿ ವ್ಯಾಪಾರಿಗಳು ವ್ಯಾಪಾರವನ್ನು ಸ್ಥಗಿತ ಮಾಡುವ ಎಚ್ಚರಿಕೆ ನೀಡಿದ್ದರು. ಆದರೆ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಬಿದಿ ಬದಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಿದರು. ""ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿನ ರಸ್ತೆ ಬದಿಯಲ್ಲಿನ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರುವ ಕುರಿತು ಅಥವಾ ಅವರನ್ನು ಸ್ಥಳಾಂತರಿಸುವ ಕುರಿತು ಅಧಿಕಾರಿಗಳ ನಮ್ಮ ಗಮನಕ್ಕೆ ತಂದಿಲ್ಲ ಎಂದು ಪುರಸಭೆ ಹಂಗಾಮಿ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ, ಸ್ಥಾಯಿ ಸಮಿತಿ ಮಾಜಿ ಚೇರ್ಮನ ಕನಕಪ್ಪ ಅರಳಿಗಿಡದ, ಯು.ಆರ್. ಚನ್ನಮ್ಮನವರ ಸೇರಿದಂತೆ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.