ಕನ್ನಡಪ್ರಭ ವಾರ್ತೆ ಮಂಡ್ಯ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಕಾಲೋನಿಯಲ್ಲಿ ಸ್ಮಶಾನಕ್ಕೆ ಜಾಗವನ್ನು ಮೀಸಲಿರಿಸದಿದ್ದರೆ ಅಂತಹ ತಹಸೀಲ್ದಾರ್‌ಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗುತ್ತದೆ ಎಂದು ಎಸ್ಸಿ ಎಸ್ಟಿ ಸದನ ಸಮಿತಿ ಅಧ್ಯಕ್ಷ ಮತ್ತು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಸಿದರು.ಮಂಗಳವಾರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸ್ಮಶಾನಕ್ಕೆ ಜಾಗ ಗುರುತಿಸಬೇಕು, ಜಾಗವಿಲ್ಲದಿದ್ದರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸ್ಮಶಾನಕ್ಕೆ ಮೀಸಲಿಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಮಶಾನ ಅಭಿವೃದ್ಧಿಗೆ ಹಣವನ್ನು ಮೀಸಲಿಟ್ಟಿದೆ. ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪರಿಹಾರ ನೀಡಲಾಗುತ್ತದೆ. ಒಮ್ಮೆ ಸ್ಮಶಾನಕ್ಕೆ ಜಾಗ ಗುರುತಿಸಲು ತಹಸೀಲ್ದಾರ್‌ಗಳು ವಿಫಲರಾದರೆ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಸ್ಮಶಾನ ಜಾಗ ಸಾಕಷ್ಟು ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸುವ ಕೆಲಸವಾಗಬೇಕು. ಸ್ಮಶಾನ ಜಾಗ ಎಂದು ಹತ್ತಾರು ವರ್ಷಗಳ ಹಿಂದೆಯೇ ಘೋಷಣೆಯಾಗಿದ್ದರೂ ಜಾಗ ಬಿಡಿಸಿಕೊಳ್ಳುವುದಕ್ಕೆ ಇಂದಿಗೂ ಜನರು ಹೋರಾಟ ನಡೆಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.ಅರಣ್ಯವನ್ನು ಎಲ್ಲೂ ಬೆಳೆಸಿಲ್ಲ, ಬರೀ ಬೋಗಸ್ ರಿಪೋರ್ಟ್..!ಸಂರಕ್ಷಿತ ಅರಣ್ಯ, ಮೀಸಲು ಅರಣ್ಯ, ಸಾಮಾಜಿಕ ಅರಣ್ಯ ಈ ಮೂರೂ ವಿಭಾಗಗಳಿಂದಲೂ ಅರಣ್ಯ ಬೆಳವಣಿಗೆಯಾಗುತ್ತಿಲ್ಲ. ಅಂಕಿ-ಅಂಶಗಳಲ್ಲಿರುವುದೆಲ್ಲವೂ ಬರೀ ಬೋಗಸ್ ರಿಪೋರ್ಟ್ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇರವಾಗಿ ಹೇಳಿದರು.
ವರ್ಷಕ್ಕೆ ಎಷ್ಟು ಸಸಿ ನೆಟ್ಟಿದ್ದೀರಿ, ಎಲ್ಲೆಲ್ಲಿ ಅರಣ್ಯ ಬೆಳೆಸಿದ್ದೀರಿ ವಿವರ ನೀಡುವಂತೆ ಸಭೆಯಲ್ಲಿ ಪ್ರಶ್ನಿಸಿದಾಗ, ಇಲಾಖಾ ಸಿಬ್ಬಂದಿಯೊಬ್ಬರು ಈ ವರ್ಷ ಗಿಡ ನೆಡುವ ಗುರಿಯನ್ನು ಹೇಳಲು ಮುಂದಾದರು. ನೀವು ನರ್ಸರಿ ಮಾಡಿ ಗಿಡ ನೆಟ್ಟಿದ್ದರೆ ಜಿಲ್ಲೆಯ ಯಾವ ಭಾಗದಲ್ಲಾದರೂ ಒಂದಷ್ಟು ಅರಣ್ಯ ಪ್ರದೇಶ ತಲೆ ಎತ್ತಬೇಕಿತ್ತಲ್ಲವೇ. ಎಲ್ಲಿ ಅರಣ್ಯವನ್ನು ಸೃಷ್ಟಿಸಿದ್ದೀರಿ ಒಮ್ಮೆ ತೋರಿಸಿ ಎಂದು ಸವಾಲು ಹಾಕಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ಮೌನ ವಹಿಸಿದರು.