ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಿಂದುಳಿದ ವರ್ಗಗಳ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ, ಜೆಡಿಎಸ್ ಷಡ್ಯಂತ್ರದ ವಿರುದ್ಧ ಶ್ರಮಿಕ ವರ್ಗಗಳ ಒಕ್ಕೂಟ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರಮಿಕ ವರ್ಗಗಳ ಒಕ್ಕೂಟದ ಪ್ರತಿಭಟನಾನಿರತರು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಬಿಜೆಪಿ, ಜೆಡಿಎಸ್ ನಾಯಕರು, ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಒಕ್ಕೂಟದ ಮುಖಂಡ ಪು.ಶ್ರೀನಿವಾಸನಾಯಕ ಮಾತನಾಡಿ, ಸಿದ್ದರಾಮಯ್ಯ ಅವರು ಶ್ರಮಿಕ ವರ್ಗಗಳ ಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುವುದನ್ನು ಸಹಿಸದೇ ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ನಿರ್ಮಿಸಿ ಶ್ರಮಿಕ ವರ್ಗಗಳಿಗೆ ಸಿಗುವ ಸೌಲಭ್ಯಗಳನ್ನು ತಡೆಯುವ ಸಲುವಾಗಿ ಸಿದ್ದರಾಮಯ್ಯ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ. ಆದ್ದರಿಂದ ಶ್ರಮಿಕ ವರ್ಗಗಳಿಗೆ ಆಗುವ ಅನ್ಯಾಯ ಹಾಗೂ ಶ್ರಮಿಕ ವರ್ಗಗಳ ನಾಯಕರ ಮೇಲೆ ಆಗುವ ರಾಜಕೀಯ ಅಸ್ಥಿರತೆಯನ್ನು ವಿರೋಧಿಸುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಡೆದು ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಸಿಗುತ್ತಿವೆ. ಅದರಲ್ಲೂ ಈ ಯೋಜನೆಗಳು ಉಳ್ಳವರಿಗೆ ಹೆಚ್ಚು ಲಾಭವಾಗಿದೆ. ಬಿಜೆಪಿ, ಜೆಡಿಎಸ್ ಅವಧಿಯಲ್ಲೂ ಅನೇಕ ಹಗರಣಗಳು ನಡೆದಿದ್ದು ಯಾವುದೇ ಕ್ರಮವಾಗಿಲ್ಲ. ನಿಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ನಿವೇಶನ ನೀಡಲಾಗಿದೆ. ನಿಮ್ಮ ಪಕ್ಷದ ಶಾಸಕರು ಕೂಡ ನಿವೇಶನ ಪಡೆದಿದ್ದಾರೆ. ಅದರ ಬಗ್ಗೆ ಏಕೆ ಚಕಾರ ಎತ್ತದೆ ಮುಖ್ಯಮಂತ್ರಿ ಅವರನ್ನೇ ಟಾರ್ಗೆಟ್ ಮಾಡಿ ಅಧಿಕಾರದಿಂದ ಕೆಳಗಿಸಲು ಪಾದಯಾತ್ರೆ ಹಮ್ಮಿಕೊಂಡಿರುವುದು ಸರಿಯಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಜನಪರ ಯೋಜನೆಗಳನ್ನು ಕೊಡುವುದರ ಮೂಲಕ ರಾಜ್ಯದ ಜನತೆಗೆ ತುಂಬಾ ಅನುಕೂಲವಾಗಿದ್ದು, ರಾಜ್ಯದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇದನ್ನು ಸಹಿಸದ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ಕಾಂಗ್ರೆಸ್‌ನ ಜನಪರ ಯೋಜನೆಗಳು ಇದೇ ರೀತಿ ಮುಂದುವರೆದಲ್ಲಿ ನಾವು ಅಧಿಕಾರದಿಂದ ಶಾಶ್ವತವಾಗಿ ದೂರ ಉಳಿಯಬೇಕಾಗುತ್ತದೆ ಎಂಬ ಭಯದಿಂದ ಬಹುಮತ ಹೊಂದಿರುವ ಸರ್ಕಾರವನ್ನೇ ಸಂಬಂಧಪಡದ ವಿಚಾರದಲ್ಲಿ ಸಿಲುಕಿಸಿ ಮುಡಾ ಹಗರಣದ ಮೂಲಕ ಹಿಂದುಳಿದ ಜಾತಿಗೆ ಸೇರಿದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ.ರಾಜ್ಯಪಾಲರು ಕೂಡ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಗರಣಗಳ ಬಗ್ಗೆ ಗಮನಹರಿಸದೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಆಯ್ಕೆಯಾಗಿ ಬಹುಮತ ಇರುವ ಸರ್ಕಾರವನ್ನು ಅಸ್ಥಿರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ಷೋಕಾಸ್ ನೋಟೀಸ್ ನೀಡರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿರುತ್ತದೆ. ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಮಾಜಿ ಸದಸ್ಯರಾದ ಕಾವೇರಿ ಶಿವಕುಮಾರ್, ಎಲ್. ನಾಗರಾಜು ಕಮಲ್, ಕೊಪ್ಪಾಳಿ ಮಹದೇವನಾಯಕ, ಯೋಗೇಶ್, ಶಿವಕುಮಾರ್, ಮುಖಂಡರಾದ ಜನ್ನೂರು ಮಹದೇವು, ಪಿ.ಸಂಘಸೇನ, ಎನ್.ಶಿವಮಲ್ಲು, ಬಸವನಪುರ ರಾಜಶೇಖರ್, ಚಿನ್ನಸ್ವಾಮಿ, ಮಸಗಾಪುರ ಸ್ವಾಮಿ, ಅಫ್ಸರ್ ಅಹಮ್ಮದ್, ನಾಗೇಂದ್ರ ನಾಯಕ, ಚಿಕ್ಕಮಹದೇವ, ನಂಜೇಗೌಡ, ಬಸಪ್ಪನಪಾಳ್ಯ ನಟರಾಜು, ಗೌಡಹಳ್ಳಿ ರಾಜೇಶ್, ನಗರಸಭಾ ಸದಸ್ಯ ಚಿನ್ನಮ್ಮ, ಮಾಜಿ ಸದಸ್ಯ ಪದ್ಮ ಪುರುಷೋತ್ತಮ್, ಕೆರೆಹಳ್ಳಿ ರೇವಣ್ಣ, ಬಸವಣ್ಣ, ರವಿಶಂಕರಮೂರ್ತಿ, ಸೋಮಣ್ಣೇಗೌಡ, ತಾ.ಪಂ.ಮಾಜಿ ಸದಸ್ಯ ಶಿವಸ್ವಾಮಿ, ಸೊತ್ತನಹುಂಡಿ ಸೋಮಣ್ಣ, ಹುಚ್ಚಯ್ಯ, ನಲ್ಲೂರು ರಾಜಶೇಖರ, ಕೊಂಡೇಗೌಡ, ಸುಭಾಷ್ ಮಾಡ್ರಳ್ಳಿ, ಸೋಮುಶೇಖರ್, ಮೋಹನ್ ನಗು ಇತರರು ಭಾಗವಹಿಸಿದ್ದರು.