ಬರ ಕೇಂದ್ರ ಅಧ್ಯಯನ ತಂಡಕ್ಕೆ ನೈಜ ಸ್ಥಿತಿಗತಿ ಮನವರಿಕೆ ಮಾಡಿಸಿ

KannadaprabhaNewsNetwork |  
Published : Oct 04, 2026, 02:30 AM IST
ಫೋಟೋವಿವರ- (3ಎಚ್‌ಪಿಟಿ2) ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಬರ ಅಧ್ಯಯನ ತಂಡದ ಭೇಟಿಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿದರು | Kannada Prabha

ಸಾರಾಂಶ

ಕೂಲಿ ಕಾರ್ಮಿಕರಿಗೆ ಶ್ರಮಕ್ಕೆ ಅನುಗುಣವಾಗಿ ನೇರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗುವಂತೆ ಕ್ರಮವಹಿಸಬೇಕು.

ಹೊಸಪೇಟೆ: ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆ ಅ. 5ರಂದು ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಲಿದ್ದು, ಅಧಿಕಾರಿಗಳು ಕೇಂದ್ರ ತಂಡಕ್ಕೆ ಜಿಲ್ಲೆಯ ನೈಜ ಪರಿಸ್ಥಿತಿ ಯಾವುದೇ ಮುಚ್ಚುಮರೆಯಿಲ್ಲದೆ ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಬರ ಅಧ್ಯಯನ ತಂಡದ ಭೇಟಿಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ತಂಡವು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ, ಕೃಷಿ ಹಾಗೂ ಕುಡಿವ ನೀರಿನ ಸ್ಥಿತಿಗತಿ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸಲಿರುವುದರಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಜವಾಬ್ದಾರಿ ಅರಿತು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ತಂಡವು ಯಾವುದೇ ಇಲಾಖೆ ಅಥವಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕೇಳಿದರೂ ವಿಳಂಬವಿಲ್ಲದೆ ದಾಖಲೆ ಮತ್ತು ವಾಸ್ತವಾಂಶ ಆಧರಿಸಿದ ಸಮರ್ಪಕ ಮಾಹಿತಿ ಒದಗಿಸಬೇಕು. ಯಾವುದೇ ಕಾರಣಕ್ಕೂ ತಪ್ಪು,ಅಪೂರ್ಣ ಅಥವಾ ದಾರಿ ತಪ್ಪಿಸುವ ಮಾಹಿತಿ ನೀಡಬಾರದು ಎಂದು ತಾಕೀತು ಮಾಡಿದರು.

ಬರ ಪರಿಸ್ಥಿತಿಯ ನೈಜ ಚಿತ್ರಣ ಕೇಂದ್ರ ತಂಡಕ್ಕೆ ತಿಳಿಸುವುದು ಅತ್ಯಂತ ಮುಖ್ಯವಾಗಿದೆ. ಮಳೆ ಕೊರತೆ, ಬೆಳೆ ನಷ್ಟ, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ, ಜಲಮೂಲಗಳ ಸ್ಥಿತಿ, ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗದ ಅಗತ್ಯತೆ ಸೇರಿದಂತೆ ಬರದಿಂದ ಜನರು ಎದುರಿಸುತ್ತಿರುವ ಸಮಸ್ಯೆ ಕುರಿತು ಸ್ಥಳೀಯ ಮಟ್ಟದ ವಾಸ್ತವಾಂಶ ಅಧಿಕಾರಿಗಳು ಸಿದ್ಧವಾಗಿಟ್ಟುಕೊಳ್ಳಬೇಕು ಎಂದರು.

ಬರ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಬರ ನಿರ್ವಹಣೆಯ ಭಾಗವಾಗಿ ನಡೆಯುತ್ತಿರುವ ವಿಜಿ ರಾಮ್ ಜಿ ಕಾಮಗಾರಿ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆಯುತ್ತಿವೆಯೇ ಎಂಬುದರ ಕುರಿತು ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಕಾಮಗಾರಿಗಳ ಆಯ್ಕೆ, ಸ್ಥಳ, ಹಾಜರಾತಿ, ಕೂಲಿ ಕಾರ್ಮಿಕರ ಭಾಗವಹಿಸುವಿಕೆ, ಕೂಲಿ ಪಾವತಿ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಕೂಲಿ ಕಾರ್ಮಿಕರಿಗೆ ಶ್ರಮಕ್ಕೆ ಅನುಗುಣವಾಗಿ ನೇರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗುವಂತೆ ಕ್ರಮವಹಿಸಬೇಕು. ಯಾವುದೇ ಹಂತದಲ್ಲೂ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಕಾರ್ಮಿಕರ ಹೆಸರಿನಲ್ಲಿ ಬೇರೆಯವರು ಹಣ ಪಡೆಯುವುದು, ಕಾಮಗಾರಿಗಳಲ್ಲಿ ಅಕ್ರಮ ಅಥವಾ ಅವ್ಯವಹಾರಕ್ಕೆ ಅವಕಾಶ ನೀಡುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ತಂಡದ ಭೇಟಿ ಸಂದರ್ಭದಲ್ಲಿ ಯಾವುದೇ ಲೋಪದೋಷ ಅಥವಾ ಗೊಂದಲಗಳಿಗೆ ಅವಕಾಶವಾಗದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಅಗತ್ಯ ದಾಖಲೆಗಳು,ಅಂಕಿಅಂಶ ಮತ್ತು ಕ್ಷೇತ್ರಮಟ್ಟದ ಮಾಹಿತಿ ಸಿದ್ಧವಾಗಿಟ್ಟುಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಬರ ಪರಿಸ್ಥಿತಿ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಸ್ಪಷ್ಟ ಮಾಹಿತಿ ಹೊಂದಿರಬೇಕು ಎಂದರು.

ಕೇಂದ್ರ ತಂಡದ ಭೇಟಿ ಕೇವಲ ದಾಖಲೆಗಳ ಪರಿಶೀಲನೆಗೆ ಸೀಮಿತವಾಗದೆ, ಬರದಿಂದ ಜನರು ಹಾಗೂ ರೈತರು ಎದುರಿಸುತ್ತಿರುವ ನೈಜ ಸಮಸ್ಯೆ ಅರ್ಥಮಾಡಿಕೊಳ್ಳುವ ಅವಕಾಶವಾಗಬೇಕು. ಆದ್ದರಿಂದ ಅಧಿಕಾರಿಗಳು ಕಚೇರಿ ದಾಖಲೆಗಳ ಜತೆಗೆ ಕ್ಷೇತ್ರದಲ್ಲಿನ ವಾಸ್ತವ ಪರಿಸ್ಥಿತಿ ತಂಡದ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ವಿವೇಕಾನಂದ, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
ಮೇವು ಕೊರತೆ: ರೈತರಲ್ಲಿ ಆತಂಕ