ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಸ್ತುತ ವರ್ಷ ಹಿಂದೆಂದಿಗಿಂತ ಹೆಚ್ಚಿನ ಉಷ್ಣಾಂಶವಿದೆ. ವಾತಾವರಣದ ಬದಲಾವಣೆ ಪರಿಣಾಮ ಮಾನವನ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಹೇಳಿದರು.ಪಟ್ಟಣದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗೆ, ಸಾರ್ವಜನಿಕರಿಗಾಗಿ ಅಯೋಜಿಸಿದ್ದ ಬೇಸಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬೇಸಿಗೆ ಉಷ್ಣಾಂಶ ಹೆಚ್ಚಾಗಿರುವುದರಿಂದ ಬೆವರಿನ ಉತ್ಪಾದನೆ ಪ್ರಮಾಣ ಜಾಸ್ತಿಯಾಗುತ್ತದೆ. ಆಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ದೇಹ ಬಿಸಿಯಾಗುತ್ತದೆ. ಹಾಗಾಗಿ ಮೇಲಿಂದ ಮೇಲೆ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಿರಬೇಕು ಎಂದರು.ಬಿಸಿಲಿನಲ್ಲಿ ಸುತ್ತಾಡಬಾರದು. ಪೂರ್ವಾಹ್ನ 11 ಗಂಟೆಯಿಂದ ಸಂಜೆ 4 ವರೆಗೆ ಹೊರಗಡೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ, ಅನಿವಾರ್ಯವಿದ್ದಾಗ ತಲೆ, ಮೈ, ಕೈಯನ್ನು ಬಿಳಿಯ ವಸ್ತ್ರದಿಂದ ರಕ್ಷಿಸಿಕೊಳ್ಳಬೇಕು. ಛತ್ರಿ, ಟೋಪಿ, ಕನ್ನಡಕ ಉಪಯೋಗಿಸಬೇಕು ತಲೆನೋವು, ಆಮಶಂಕೆ, ಸುಸ್ತು, ಉಷ್ಣ ಗುಳ್ಳೆಯಂತಹ ಸಾಮಾನ್ಯ ಸಮಸ್ಯೆಗಳು ಉಂಟಾಗುತ್ತವೆ. ಆಗ ಅದರ ಬಗ್ಗೆ ಭಯಪಡದೆ ಸೂಕ್ತ ಔಷಧಿ ಪಡೆಯಬೇಕು ಎಂದರು.
ತಂಪು ಪಾನೀಯ ಬದಲಾಗಿ ಎಳೆ ನೀರು, ನಿಂಬೆ, ಮಜ್ಜಿಗೆ ಸೇರಿದಂತೆ ವಿವಿಧ ಹಣ್ಣಿನ ರಸ, ಶುದ್ಧ ಸ್ವಚ್ಛ ನೀರು, ಆಹಾರ ಸೇವಿಸಬೇಕು, ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ವಾಂತಿ, ಭೇದಿ, ಅತಿಸಾರಬೇಧಿ, ಕರುಳುಬೇನೆ, ವಿಷಮ ಶೀತ ಜ್ವರ, ಜಾಂಡಿಸ್ ಇತ್ಯಾದಿ ಸಾಂಕ್ರಾಮಿಕ ರೋಗಗಳು ಕಾಣಿಸಬಹುದು ಎಚ್ಚರಿಸಿದರು.ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ, ಹಾಗೂ ಆಹಾರದ ಸಂರಕ್ಷಣೆ, ಪರಿಸರ ನೈರ್ಮಲ್ಯ ನಿರ್ವಹಣೆ ಮಾಡಿಕೊಳ್ಳಬೇಕು. ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣು, ಹಂಪಲ ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದು ಪ್ರಯಾಣ ಮಾಡುವಾಗ ಕಡ್ಡಾಯವಾಗಿ ನೀರನ್ನು ಜೊತೆಯಲ್ಲೇ ಒಯ್ಯುವುದು ಇನ್ನು ಮುಂತಾದ ಮುಂಜಾಗ್ರತೆ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ವೇಳೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುರೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ ಚಂದನ್ ಹಾಗೂ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.