ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಕೆಪಿಎಂಇ ಕಾಯ್ದೆಯಡಿ ನೋಂದಣಿ ಆಗದ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳನ್ನು ನಕಲಿ ಎಂದು ಪರಿಗಣಿಸಿ ಕಾನೂನು ರೀತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತಾಯಿ ಮತ್ತು ಶಿಶು ಮರಣ ಪರಿಶೀಲನೆ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರಬೇಕು. ಸಾರ್ವಜನಿಕ ಮತ್ತು ಆರೋಗ್ಯ ಸೇವೆಯಲ್ಲಿ ನಿರತರಾದ ವೈದ್ಯರು ಕಡ್ಡಾಯವಾಗಿ ಕೆಪಿಎಂಇ ಅಡಿ ನೋಂದಾಯಿಸಿ ಸೇವೆಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಅಂತಹ ಆಸ್ಪತ್ರೆಗಳು, ಕ್ಲಿನಿಕ್ ಮತ್ತು ವೈದ್ಯರನ್ನು ನಕಲಿ ಎಂದು ಪರಿಗಣಿಸಬೇಕು ಎಂದರು.
ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ತಡೆಯಲು ತಂಡಗಳನ್ನು ರಚಿಸಿ ಕಾನೂನು ರೀತಿಯ ಕ್ರಮ ವಹಿಸಬೇಕು. ಯಾವುದೇ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಕುರಿತು ಮಾಹಿತಿ ನೀಡಿ ಯಶಸ್ವಿಗೊಂಡ ಗುಪ್ತ ಕಾರ್ಯಾಚರಣೆಯ ಮಾಹಿತಿದಾರರಿಗೆ ಒಂದು ಲಕ್ಷ ರು. ಬಹುಮಾನ ವಿತರಿಸಲು ಕ್ರಮ ವಹಿಸಬೇಕು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಬೇಕು. ಸಂಬಂಧಿಕರು ಅಥವಾ ದಲ್ಲಾಳಿಗಳು ಭ್ರೂಣ ಲಿಂಗ ಪತ್ತೆಗೆ ಒತ್ತಾಯಿಸಿದಲ್ಲಿ ಮೊದಲ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 50 ಸಾವಿರ ರು. ಗಳ ವರೆಗೆ ದಂಡ ವಿಧಿಸಬೇಕು. ನಂತರದ ಅಪರಾಧಕ್ಕೆ 5 ವರ್ಷಗಳ ವರೆಗೆ ಜೈಲು ಶಿಕ್ಷೆ ಜತೆಗೆ ಒಂದು ಲಕ್ಷ ರು.ಗಳವರೆಗೆ ದಂಡ ವಿಧಿಸಲಾಗುವುದು. ಪಿಸಿಪಿಎನ್‌ಡಿಟಿ ಕಾಯ್ದೆಯಡಿ ನಿಗದಿಪಡಿಸಿರುವ ಎಲ್ಲಾ ದಾಖಲಾತಿಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದರು.ಈ ವೇಳೆ ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್.ಆರ್. ಶಂಕರ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಜಿಲ್ಲಾ ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ಡಾ.ಭಾಸ್ಕರ್, ಡಾ.ರಾಧಿಕಾ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.