
ಪೊನ್ನಂಪೇಟೆ: ನಮಗೆ ಪರಿಸರ ಸಂರಕ್ಷಣೆಯ ದೇವಕಾಡು, ನಮ್ಮ ಉಡುಪು, ಭಾಷೆ ಎಲ್ಲವನ್ನು ಹಿರಿಯರು ನೀಡಿದ್ದು, ಇದನ್ನು ನಾವು ಉಳಿಸಿಕೊಂಡು ಬಂದಿದ್ದೇವೆ. ಆದರೆ ನಮ್ಮ ಜಾಗವನ್ನು ಕಳೆದುಕೊಳ್ಳುತ್ತಾ ಹೋಗುತ್ತಿದ್ದೇವೆ. ಇಂತಹ ಸಮಾರಂಭದಲ್ಲಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಇಂತಹ ಗಂಭೀರ ವಿಚಾರದ ಬಗ್ಗೆ ಯೋಚಿಸಬೇಕಾಗಿದೆ ಎಂದು ಕೊಡಗು ಮಾಡೆಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ. ಜಿ. ಕುಶಾಲಪ್ಪ ಹೇಳಿದರು.
ಜನಸಂಖ್ಯೆ ಕಡಿಮೆ ಇದ್ದರೂ ಜಾಗ ನಮ್ಮ ಕೈಯಲ್ಲಿತ್ತು. ಇಂದು ಇದನ್ನು ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆ, ಜಾಗ ಮಾರಾಟ ನಿಲ್ಲಬೇಕು. ಅದು ನಿಲ್ಲುತ್ತದೆ ಎಂಬ ಭರವಸೆ ಇದೆ. ಮಲ್ಮಜಾಗವನ್ನು ಮರಳಿ ಪಡೆಯಲು ಸಂಘಟಕರಾಗಿ ಜನಾಂಗ ನಿಂತಿರುವುದು ಹೊಸ ಭರವಸೆಯನ್ನು ಮೂಡಿಸಿದೆ ಎಂದು ಹೇಳಿದ ಅವರು, ನಮ್ಮ ಜಾಗ ಉಳಿಸಿಕೊಳ್ಳದಿದ್ದರೆ ನಮ್ಮ ಉಡುಪಿಗೂ(ಕುಪ್ಯಚೇಲೆ )ಹಾಗೂ ಭಾಷೆಗೂ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ, ನಮ್ಮ ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ, ಅವರು ನಮ್ಮ ನೆಲ ಉಳಿಸಿಕೊಳ್ಳಬೇಕು. ಕೊಡಗಿನ ಮಣ್ಣು ಪರಭಾರೆಯಾಗದಂತೆ, ಕೊಡವಾಮೆ ಹಾಗೂ ಈ ನೆಲದ ರಕ್ಷಣೆಗೆ ವಿಶೇಷವಾಗಿ ಕೊಡವ ಮಹಿಳೆಯರು ಪಣ ತೊಡಬೇಕು ಎಂದರು. ನಂತರ ಕಕ್ಕಡ ಪದ್‘ನೆಟ್ಟ್ ವಿಶೇಷ ಖಾದ್ಯ, ಸಾಮೂಹಿಕ ಉಟೋಪಚಾರ ಏರ್ಪಡಿಸಲಾಗಿತ್ತು. ಕೊಡವ ಹಿತ ರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ ಹಾಜರಿದ್ದರು.ಚೆಟ್ಟಂಗಡ ಲೇಖನ ಉತ್ತಪ್ಪ ಪ್ರಾರ್ಥಿಸಿದರು. ಚಿರಿಯಪಂಡ ರಾಜ ನಂಜಪ್ಪ ಸ್ವಾಗತಿಸಿ, ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿ, ವಂದಿಸಿದರು.ಎಂಗ ಕಲಾರಂಗ ಕಲಾವಿದರಿಂದ ‘ಕುರ್ಕಂಗ’ ನಾಟಕ ಪ್ರದರ್ಶನ, ಚೆಕ್ಕೇರ ವಾಣಿ ಸಂಜು ಅವರಿಂದ ಹಾಡು, ಚೆಟ್ಟಂಗಡ ಲೇಖನ ಉತ್ತಪ್ಪ ಅವರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಪಂಜಿನ ಮೆರವಣಿಗೆ: ಕೊಡವ ಹಿತರಕ್ಷಣಾ ಬಳಗ, ಕ್“ಗ್ಗಟ್ಟ್ ನಾಡ್, ಪೊನ್ನಂಪೇಟೆ ವತಿಯಿಂದ ಸೋಮವಾರ ಸಂಜೆ 15ನೇ ವರ್ಷದ ಕಕ್ಕಡ ಪದ್ “ನೆಟ್ಟ್ ಹಬ್ಬ ಆಚರಣೆ ಮತ್ತು ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಪುರುಷರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.ಪೊನ್ನಂಪೇಟೆ ಕೊಡವ ಸಮಾಜದಿಂದ ಸಂಜೆ ಆರಂಭವಾದ ಪಂಜಿನ ಮೆರವಣಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಸಾಗಿ ಪಟ್ಟಣದ ಬಸವೇಶ್ವರ ದೇವಸ್ಥಾನ ವೃತ್ತ ಮೂಲಕ ಬಸ್ ನಿಲ್ದಾಣದಲ್ಲಿ ನೂರಾರು ಜನರು ವಡ್ಡೋಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು, ನಂತರ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಸನ್ಮಾನ ಕಾರ್ಯಕ್ರಮ: ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಸ್ಥಾನ ಪಡೆದ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿ ಅಜ್ಜಿಕುಟ್ಟಿರ ಅಗಣಿತ ಮಾದಯ್ಯ ಮತ್ತು ರಾಧಾ ದಂಪತಿಯ ಪುತ್ರ ಜಷ್ ಕಾವೇರಪ್ಪ ಅವರ ಪರವಾಗಿ ಅವರ ತಂದೆಯವರನ್ನು, ಸಿ ಐ ಟಿ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಕಾಟಿಮಾಡ ದೇವಯ್ಯ ಮತ್ತು ಕಾವೇರಮ್ಮ ದಂಪತಿಯ ಪುತ್ರಿ ಬಾಷಿತ ದೇವಯ್ಯಳನ್ನು ಮತ್ತು ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ನೆಲ್ಲಮಾಡ ರಾಜತಿಮ್ಮಯ್ಯ- ಸೌಮ್ಯ ದಂಪತಿಯ ಪುತ್ರ ಸಿದ್ದಾಂತ್ ಕಾವೇರಪ್ಪ ಅವರ ಪರವಾಗಿ ಅವರ ತಂದೆ ಅವರನ್ನು ಈ ಸಂದರ್ಭ ಮುಖ್ಯ ಅತಿಥಿ ಡಾ.ಸಿ.ಜಿ. ಕುಶಾಲಪ್ಪ ಅವರು ಸನ್ಮಾನಿಸಿದರು.