ಸಿಎಂ, 3 ಜನ ಮಂತ್ರಿಗಳು ಪಾಕ್‌ ಹಿರೋಗಳು : ಜೋಶಿ ಆರೋಪ

KannadaprabhaNewsNetwork |  
Published : May 03, 2025, 12:15 AM ISTUpdated : May 03, 2025, 01:12 PM IST
Prahlad Joshi

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಮೂವರು ಮಂತ್ರಿಗಳು ಈಗ ಪಾಕ್‌ ಹೀರೋಗಳಾಗಿ ಬಿಟ್ಟಿದ್ದಾರೆ. ರಾಬರ್ಟ್‌ ವಾದ್ರಾ ಮತ್ತಿವರ ಹೇಳಿಕೆಗೆ ಪಾಕಿಸ್ತಾನಿಗಳು ಸಂಭ್ರಮಿಸುತ್ತಿದ್ದಾರೆ.

ಹುಬ್ಬಳ್ಳಿ: ಭಯೋತ್ಪಾದನೆ ವಿಷಯದಲ್ಲಿ ಕೆಲ ಕಾಂಗ್ರೆಸ್‌ ನಾಯಕರು ಪಾಕ್‌ನ ಹೀರೋಗಳಾಗಿದ್ದಾರೆ. ಕಾಶ್ಮೀರದ ಕೃತ್ಯ ಹಿಂದೂ ಟೆರರ್‌ ಎಂದು ಮತ್ತು ಮುಂಬೈ ದಾಳಿಯನ್ನು ಆರ್‌ಎಸ್‌ಎಸ್‌ ಮಾಡಿಸಿದ್ದು ಎನ್ನುತ್ತ, ಗಾಯಬ್‌ ಪೋಸ್ಟರ್‌ ಹಾಕುತ್ತ ಪಾಕಿಸ್ತಾನದ ಸಂಭ್ರಮಕ್ಕೆ ಹಾಲೆರೆದಿದ್ದಾರೆ. ಇದು ದೇಶ ದ್ರೋಹ ಅಲ್ಲವೇ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಒಂದು ಕಡೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮ ಬೆಂಬಲಿಸುತ್ತೇವೆ ಎನ್ನುತ್ತಾರೆ. ಮತ್ತೊಂದೆಡೆ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾತನ್ನೂ ಮೀರಿ ಇಲ್ಲಿನ ನಾಯಕರು ನಡೆದುಕೊಳುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಮೂವರು ಮಂತ್ರಿಗಳು ಈಗ ಪಾಕ್‌ ಹೀರೋಗಳಾಗಿ ಬಿಟ್ಟಿದ್ದಾರೆ. ರಾಬರ್ಟ್‌ ವಾದ್ರಾ ಮತ್ತಿವರ ಹೇಳಿಕೆಗೆ ಪಾಕಿಸ್ತಾನಿಗಳು ಸಂಭ್ರಮಿಸುತ್ತಿದ್ದಾರೆ. "ಕಾಶ್ಮೀರ ಭಯೋತ್ಪಾದನಾ ದಾಳಿ ತಾನು ಮಾಡಿಲ್ಲ " ಎನ್ನಲು ಪಾಕ್‌ಗೆ ಆಸ್ಪದ ನೀಡುತ್ತಿದ್ದಾರೆ. ಪಾಕಿಸ್ತಾನ್‌ ಜಿಂದಾಬಾದ್‌ ಎನ್ನಲು ನೂರಾರು ಕಾರಣಗಳಿವೆ ಎನ್ನುತ್ತಾರೆ. ನಾಚಿಕೆ ಆಗುವುದಿಲ್ಲವೇ? ಕಿಂಚಿತ್ತಾದರೂ ದೇಶಾಭಿಮಾನ ಬೇಡವೇ? ಎಂದು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ ನಾಯಕರೊಬ್ಬರು ಪಹಲ್ಗಾಮ್‌ ದಾಳಿ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ "ಗಾಯಬ್‌ " ಪೋಸ್ಟರ್‌ ಹಾಕಿ ಪಾಕ್‌ ಹೀರೋಗಳಾದರು. ನಂತರ ಟ್ವೀಟ್‌ನಿಂದ ಅದನ್ನು ತೆಗೆದರು. ನೀವು ಅಷ್ಟು ಸಾಚಾ ಆಗಿದ್ದಿದ್ದರೆ ಅದನ್ನೇಕೆ ತೆಗೆದಿರಿ? ಇದು ದೇಶದ್ರೋಹ ಅಲ್ಲವೇ? ಎಂದು ಕಿಡಿಕಾರಿದರು.

ಪಹಲ್ಗಾಮ್‌ ದಾಳಿ ಬಗ್ಗೆ ಭದ್ರತಾ ವೈಫಲ್ಯ, ಇಂಟೆಲಿಜೆನ್ಸ್‌ ಮಾಹಿತಿ ಇರಲಿಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ. ಗಾಯಬ್‌ ಪೋಸ್ಟರ್‌ ವಾರ್‌ ವಿರೋಧಿಸಿ ಐದಾರು ಮಹಿಳೆಯರು ಬೆಳಗಾವಿಯಲ್ಲಿ ಪ್ರತಿಭಟಿಸಲು ಬರುತ್ತಿದ್ದಾರೆ ಎಂಬ ಇಂಟೆಲಿಜೆನ್ಸ್‌ ಮಾಹಿತಿ ನಿಮಗಿತ್ತೇ? ಯುಪಿಎ ಅವಧಿಯಲ್ಲಿ ಮುಂಬೈ ದಾಳಿ ವೇಳೆ ನಿಮಗಿರಲಿಲ್ಲವೇ ಇಂಟೆಲಿಜೆನ್ಸ್‌ ಮಾಹಿತಿ? ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಶಃ ಇತಿಹಾಸ ಮರೆತಿದ್ದಾರೆ. ಇಂದಿರಾಗಾಂಧಿ ವಿರುದ್ಧವೇ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಈಗ ಅವರದ್ದೇ ಪಕ್ಷದಲ್ಲಿ ಸಿಎಂ ಆಗಿ ಅದ್ಯಾವ ಮಟ್ಟ ತಲುಪಿದ್ದೀರಿ ನೋಡಿಕೊಳ್ಳಿ ಎಂದ ಜೋಶಿ, ಮುಖ್ಯಮಂತ್ರಿಗಳು, ಡಿ.ಕೆ.ಶಿವಕುಮಾರ್‌ ಅವರೊಂದಿಗಿನ ಆಂತರಿಕ ಕಲಹದಿಂದ ತಾಳ್ಮೆ ಕಳೆದುಕೊಂಡಿದ್ದಾರೆ. ಅದರ ಪರಿಣಾಮವಾಗಿ ಹೋದಲ್ಲಿ ಬಂದಲ್ಲಿ ಅಧಿಕಾರಿಗಳ ಮೇಲೆ ಕೈ ಎತ್ತುವಂತಹ ದರ್ಪ ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಶಿಷ್ಯಂದಿರು ತಾವೇ ರಕ್ಷಣಾ ತಜ್ಞರ ರೀತಿ ಬಾಯಿಗೆ ಬಂದಂತೆ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ದೇಶದಲ್ಲಿ ಅಭದ್ರತೆ ಸೃಷ್ಟಿಸಬೇಕೆಂದು ಪಾಕ್‌ ಭಯೋತ್ಪಾದಕರು ಮೋಸದಿಂದ ಪಹಲ್ಗಾಮ್‌ ದಾಳಿ ನಡೆಸಿದ್ದಾರೆ. ಆದರೆ, ಭಾರತ ದುರ್ಬಲ ರಾಷ್ಟ್ರವಲ್ಲ. ಭಯೋತ್ಪಾದಕರಿಗೆ ಶಿಕ್ಷೆ ಕೊಟ್ಟೇ ಕೊಡುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''