ಪಟ್ಟಣ ಪಂಚಾಯಿತಿ ಸದಸ್ಯರಿಂದ ಎಂ.ಶ್ರೀನಿವಾಸ್‌ಗೆ ಮನವಿ
ಕನ್ನಡಪ್ರಭವಾರ್ತೆ ನರಸಿಂಹರಾಜಪುರಪಟ್ಟಣದ ನಿವಾಸಿಗಳ ಬಹುದಿನದ ಬೇಡಿಕೆಯಾದ ರಸ್ತೆ ವಿಸ್ತರಣೆಗೆ ಅಂದಾಜು 60 ಕೋಟಿ ರುಪಾಯಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ನಾನು ಮನವಿ ಸಲ್ಲಿಸಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು ಸುಂಕದಕಟ್ಟೆಯಿಂದ ಪಟ್ಟಣ ಪಂಚಾಯಿತಿವರೆಗೆ ಹಾಗೂ ಬಸ್ ನಿಲ್ದಾಣದಿಂದ ಪ್ರವಾಸಿಮಂದಿರದವರೆಗೆ ರಸ್ತೆ ವಿಸ್ತರಣೆ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಪಟ್ಟಣ ಅಭಿವೃದ್ಧಿಯಾಗಬೇಕಾದರೆ ರಸ್ತೆ ವಿಸ್ತರಣೆಯಾಗುವುದು ಅನಿವಾರ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಅವಧಿಯಲ್ಲಿ ನರಸಿಂಹರಾಜಪುರ ತಾಲೂಕಿನ ನೀರಾವರಿ ಯೋಜನೆ, ಹೊನ್ನೆಕೂಡಿಗೆ ಸೇತುವೆ ಸೇರಿ ಹಲವು ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ನರಸಿಂಹರಾಜಪುರದ ಬಗ್ಗೆ ಮುಖ್ಯಮಂತ್ರಿ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಪಟ್ಟಣದಲ್ಲಿ ರಸ್ತೆ ವಿಸ್ತರಣೆಯಾದರೆ ಸಿದ್ಧರಾಮಯ್ಯ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದರು.ನಾನು ಯಾವುದೇ ಸ್ವಾರ್ಥವಿಲ್ಲದೆ ಹುಟ್ಟೂರಿನ ಅಭಿಮಾನದಿಂದ ನರಸಿಂಹರಾಜಪುರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಪ್ರಸ್ತುತ ನನ್ನನ್ನು ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದು ನರಸಿಂಹರಾಜಪುರ ಸೇರಿ ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ಎಂ.ಶ್ರೀನಿವಾಸ್ ಅವರು ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಕಾಲದಲ್ಲೂ ನರಸಿಂಹರಾಜಪುರ ಅಭಿವೃದ್ದಿಗಾಗಿ ಶ್ರಮಿಸಿದ್ದರು. ರಸ್ತೆ ವಿಸ್ತರಣೆ ಪಟ್ಟಣದ ನಾಗರೀಕರ ಬಹುದಿನದ ಬೇಡಿಕೆಯಾಗಿದೆ. ರಸ್ತೆ ಚಿಕ್ಕದಾಗಿರುವುದರಿಂದ ಶಾಲಾ ಮಕ್ಕಳು, ಮಹಿಳೆಯರು, ವಯೋ ವೃದ್ದರ ಓಡಾಟಕ್ಕೆ ಸಮಸ್ಯೆಯಾಗಿದ್ದು ಸಾಕಷ್ಟು ಅಪಘಾತಗಳು ಸಂಭವಿಸಿವೆ. ಆದ್ದರಿಂದ ರಸ್ತೆ ವಿಸ್ತರಣೆಯಾದರೆ ಸಿದ್ದರಾಮಯ್ಯ ಹೆಸರು ಹಾಗೂ ತಮ್ಮ ಹೆಸರು ಸಹ ಪಟ್ಟಣದ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್. ಸದಾಶಿವ ಮಾತನಾಡಿ, ಪಟ್ಟಣದಲ್ಲಿ ರಸ್ತೆ ವಿಸ್ತರಣೆ ತುರ್ತಾಗಿ ಆಗಬೇಕಾಗಿರುವ ಕೆಲಸವಾಗಿದ್ದು ಇದಕ್ಕೆ ಎಂ.ಶ್ರೀನಿವಾಸ್ ಅವರ ಪ್ರಯತ್ನ ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜುಬೇದ, ಪಿ.ಜೆ. ಶೋಜಾ, ಮುನಾವರಪಾಷ, ಸೈಯದ್ ವಸೀಂ, ಆರ್. ಕುಮಾರಸ್ವಾಮಿ, ಉಮಾಕೇಶವ್, ಸುರಯ್ಯಬಾನು, ಮಾಜಿ ಸದಸ್ಯ ಸುನಿಲ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ಕಂದಾಯ ನಿರೀಕ್ಷಕ ವಿಜಯಕುಮಾರ್ ಇದ್ದರು.-------------
ನರಸಿಂಹರಾಜಪುರ ಪ್ರವಾಸಿ ಮಂದಿರದಲ್ಲಿ ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರಿಗೆ ಸೋಮವಾರ ಪಟ್ಟಣ ಪಂಚಾಯಿತಿ ಸದಸ್ಯರು ರಸ್ತೆ ವಿಸ್ತರಣೆಗೆ ಸರ್ಕಾರದಿಂದ ಅನುದಾನ ಕೋರಿ ಮನವಿ ಸಲ್ಲಿಸಿದರು.