ಕನ್ನಡಪ್ರಭ ವಾರ್ತೆ ಕಲಾದಗಿ
ಬೀಳಗಿ ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಮತದಾರ ಪ್ರಭುಗಳಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ. ಕಲಾದಗಿ ಜಿಪಂ ಕ್ಷೇತ್ರದಲ್ಲಿ ನಿರೀಕ್ಷಿದಷ್ಟು ಆಗಿಲ್ಲ ಅನ್ನುವುದು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆಯಾಗಿದೆ, ಯಾವುದೂ ಗ್ಯಾರಂಟಿಗಳು ಕೆಲಸ ಮಾಡಿಲ್ಲ. ಈ ಕಡೆ ಅಭಿವೃದ್ಧಿಯೂ ಇಲ್ಲ, ಗ್ಯಾರಂಟಿ ಯೋಜನೆ ಲಾಭ ಪಡೆದುಕೊಂಡವರು ವೋಟೂ ಹಾಕಲ್ಲ ಮತ್ಯಾಕೆ ಕೊಡಬೇಕು ?, ಏನು ಸಾಧ್ಯತೆ ಇದೆಯೋ ವಿಚಾರ ಮಾಡಬೇಕು. ರಾಜ್ಯದಲ್ಲಿನ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮರುಪರಿಶೀಲನೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಹೇಳಿದರು.ಸೋಮವಾರ ಬೆಳಗ್ಗೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆಲವು ನಾಯಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದು, ನಾವೂ ಎಂಟು ಹತ್ತು ಜನ ಶಾಸಕರು ಈ ಬಗ್ಗೆ ಚರ್ಚಿಸಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಯಾರಿಗೆ ಕೊಡಬೇಕು, ಎಷ್ಟು ಕೊಡಬೇಕು ಎಂಬುವುದರ ಬಗ್ಗೆ ಮರುಪರಿಶೀಲನೆ ಮಾಡಲು ಸಿಎಂಗೆ ಖುದ್ದು ಭೇಟಿಯಾಗಿ ಮನವಿ ಪತ್ರ ನೀಡಿ ಮನವಿ ಮಾಡಲಾಗುವುದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನಗರ ಪ್ರದೇಶ, ಆಸ್ಪತ್ರೆ, ಮಾರುಕಟ್ಟೆ, ವ್ಯವಹಾರಿಕ ಪ್ರದೇಶಗಳಿಗೆ, ಜಿಲ್ಲಾ ವ್ಯಾಪ್ತಿಗೆ ಸೀಮಿತ ಮಾಡಬೇಕೇ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿ ಮರುಪರಿಶೀಲಿಸಲು ಸಂಬಂಧಿಸಿ ಸಚಿವರಿಗೆ ಮನವಿ ಮಾಡಲಾಗುವುದು, ಹಿಂದಿನ ಸರ್ಕಾರದಲ್ಲಿ ಒಂದೂ ಹೊಸ ಬಸ್ ಖರೀದಿ ಮಾಡಿಲ್ಲ. ಆಗ ಸಮಸ್ಯೆ ಇದ್ದರೂ ಯಾರೂ ಯಾವ ವಿದ್ಯಾರ್ಥಿಯು ಧ್ವನಿ ಎತ್ತಿಲ್ಲ. ಈಗ ಬಸ್‌ಗಳ ಖರೀದಿ ಮಾಡಲಾಗುತ್ತಿದೆ, ವಿದ್ಯಾರ್ಥಿಗಳಿಗೆ ಏನು ತೊಂದರೆಯಾಗುತ್ತಿದೆಯೋ ಅದನ್ನು ಜುಲೈ ತಿಂಗಳು ಒಳಗಾಗಿ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದರು.