ಜಾತ್ರೋತ್ಸವಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸಿಎಂ

KannadaprabhaNewsNetwork |  
Published : Feb 10, 2026, 02:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ 8ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ವಾಲ್ಮೀಕಿ ಗುರುಪೀಠಕ್ಕೆ ಬಂದ ಸಿಎಂ ಅವರನ್ನು ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ದೇವೇಂದ್ರಪ್ಪ, ಶಾಂತನಗೌಡ, ಬಸವಂತಪ್ಪ, ರಘುಮೂರ್ತಿ ಅವರು ಸ್ವಾಗತಿಸಿದರು. ಈ ವೇಳೆ ದಾವಣಗೆರೆ ಜಿಲ್ಲಾ ಪೊಲೀಸರಿಂದ ಮುಖ್ಯಮಂತ್ರಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

-‌ ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ 2 ಸಚಿವ ಸ್ಥಾನ ನೀಡಿ: ದದ್ದಲ್‌

- - -

- ಬುಡಕಟ್ಟು ವಿವಿ ಸ್ಥಾಪನೆ ಬೇಡಿಕೆ ಪ್ರಸಕ್ತ ಬಜೆಟ್‌ನಲ್ಲೇ ಈಡೇರಿಸಬೇಕು: ಸತೀಶ ಜಾರಕಿಹೊಳಿ

- ಕಿತ್ತೂರು, ಹಂಪಿ ಉತ್ಸವ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ‘ದುರ್ಗೋತ್ಸವ’ ಆಯೋಜಿಸಲು ಒತ್ತಾಯ

- - -

ಹರಿಹರ: ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ 8ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ವಾಲ್ಮೀಕಿ ಗುರುಪೀಠಕ್ಕೆ ಬಂದ ಸಿಎಂ ಅವರನ್ನು ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ದೇವೇಂದ್ರಪ್ಪ, ಶಾಂತನಗೌಡ, ಬಸವಂತಪ್ಪ, ರಘುಮೂರ್ತಿ ಅವರು ಸ್ವಾಗತಿಸಿದರು. ಈ ವೇಳೆ ದಾವಣಗೆರೆ ಜಿಲ್ಲಾ ಪೊಲೀಸರಿಂದ ಮುಖ್ಯಮಂತ್ರಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ವಾಲ್ಮೀಕಿ ಜನಜಾಗೃತಿ ಜಾತ್ರಾ ಮಹೋತ್ಸವ ವೇದಿಕೆ ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದು, ಅವರೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಗಣ್ಯರು ವೇದಿಕೆ ಹಂಚಿಕೊಂಡರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಆಶೀರ್ವಚನ ನೀಡಿದರು.

ಸಚಿವ ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಎಚ್. ಆಂಜನೇಯ, ಸಿಎಂ ಪುತ್ರ ಡಾ. ಯತೀಂದ್ರ, ಶಾಸಕರಾದ ರಘುಮೂರ್ತಿ, ಡಿ.ಜಿ. ಶಾಂತನಗೌಡ, ಬಸವಂತಪ್ಪ, ದೇವೇಂದ್ರಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

2 ಸಚಿವ ಸ್ಥಾನಕ್ಕೆ ಮನವಿ:

ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಬಸವರಾಜ ದದ್ದಲ್ ಸ್ವಾಗತ ಭಾಷಣದಲ್ಲಿ ವಾಲ್ಮೀಕಿ ಸಮುದಾಯಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ 2 ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. “ಕಾರಣಾಂತರಗಳಿಂದ ಎರಡು ಸಚಿವ ಸ್ಥಾನಗಳು ಖಾಲಿಯಾಗಿವೆ. ತಾವು ಮುಖ್ಯಮಂತ್ರಿ ಆಗಿರುವಾಗಲೇ ಈ ಸ್ಥಾನಗಳನ್ನು ನಮ್ಮ ಸಮುದಾಯಕ್ಕೆ ನೀಡಬೇಕು. ಅದನ್ನೇ ನನ್ನ ಮನವಿಯಾಗಿ ಇಡುತ್ತಿದ್ದೇನೆ” ಎಂದು ಹೇಳಿದರು.

ಇದೇ ವೇಳೆ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ, ನಕಲಿ ಜಾತಿ ಪ್ರಮಾಣ ಪತ್ರ ತಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕುರಿತು ಮಾತನಾಡಿದ ಅವರು, “180 ಕೋಟಿ ಹಗರಣದ ಆರೋಪಗಳಿವೆ. ನಮ್ಮ ಸಮಾಜದ ಹಣ ಎಲ್ಲೇ ಹೋಗಿದ್ದರೂ ವಾಪಸ್ ಬರುತ್ತದೆ. ಒಂದು ಪೈಸಾ ಕೂಡ ವ್ಯರ್ಥವಾಗಲು ಬಿಡುವುದಿಲ್ಲ. ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು. ಎಲ್.ಜಿ. ಹಾವನೂರು ಟ್ರಸ್ಟ್‌ಗೆ ₹10 ಕೋಟಿ ಅನುದಾನ ನೀಡುವಂತೆಯೂ ಮನವಿ ಮಾಡಿದರು.

ಸತೀಶ್ ಜಾರಕಿಹೊಳಿ ಭಾಷಣ:

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, “ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಬಹುಕಾಲದ ಬೇಡಿಕೆ. ಪ್ರಸಕ್ತ ಬಜೆಟ್‌ನಲ್ಲೇ ಈಡೇರಿಸಬೇಕು ಎಂದು ಸಿಎಂ ಮೇಲೆ ಒತ್ತಾಯ ಮಾಡಲಾಗುತ್ತದೆ” ಎಂದರು. ಸರ್ಕಾರಿ ಶಾಲೆಗಳು ನಶಿಸುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಎಸ್‌ಸಿ–ಎಸ್‌ಟಿ–ಒಬಿಸಿ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳ ಬಲವರ್ಧನೆ ಅಗತ್ಯವಿದೆ. ಸರ್ಕಾರಿ ಆಸ್ಪತ್ರೆಗಳು ಹಾಗೂ ವಸತಿ ಶಾಲೆಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕೂ ಒತ್ತು ನೀಡಬೇಕೆಂದು ಹೇಳಿದರು.

ಎಸ್‌ಸಿ– ಎಸ್‌ಟಿ ಸಮುದಾಯಗಳಿಗೆ ಭೂಮಿ ಖರೀದಿ ಮಾಡಿ ಹಂಚಿಕೆ ಉದ್ದೇಶದಿಂದ ಸಚಿವ ಮಹದೇವಪ್ಪ ₹40 ಕೋಟಿ ಅನುದಾನ ನೀಡಿರುವುದನ್ನು ಉಲ್ಲೇಖಿಸಿದ ಅವರು, ಸಿಎಂ ಶೀಘ್ರ ಮಂಜೂರಾತಿ ನೀಡಿದರೆ ಸೈಟ್ ವಿತರಣೆಗೆ ಸಹಕಾರಿ ಆಗುತ್ತದೆ. ಜೊತೆಗೆ ಕಿತ್ತೂರು, ಹಂಪಿ ಉತ್ಸವ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ‘ದುರ್ಗೋತ್ಸವ’ ಆಯೋಜಿಸಬೇಕೆಂಬ ಬೇಡಿಕೆ ಮುಂದಿಟ್ಟರು.

ಭಾಷಣದ ವೇಳೆ ಹಾಗೂ ನಂತರ ನಿರೂಪಕರು ಮತ್ತು ಅಭಿಮಾನಿಗಳು “ಭವಿಷ್ಯದ ನಾಯಕ, ಮುಂದಿನ ಸಿಎಂ ಸತೀಶ್ ಜಾರಕಿಹೊಳಿ” ಎಂದು ಘೋಷಣೆ ಕೂಗಿದಾಗ, ಶಿಳ್ಳೆ–ಚಪ್ಪಾಳೆಗಳಿಂದ ಸಭಾಂಗಣ ಪ್ರತಿಧ್ವನಿಸಿತು.

- - -

(ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ.22ರಂದು ದುಬೈನಲ್ಲಿ ನಾವಿಕರಾಜ್ಯೋತ್ಸವ, ನಾಟಕೋತ್ಸವ- 2027ರ ಸೆ.3ಕ್ಕೆ ನಾವಿಕ ಸಮ್ಮೇಳನ: ಡಾ। ಅನ್ನಪೂರ್ಣ
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ: ಸಚಿವ ರಹೀಂಖಾನ್‌