ಸಿಎಸ್‌ ಬಿಇ ಸೀಟಿಗೆ ಮಿತಿ ಹೇರಲು ಸಮಿತಿ

KannadaprabhaNewsNetwork |  
Published : Feb 10, 2026, 02:00 AM IST
Education

ಸಾರಾಂಶ

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಕಂಪ್ಯೂಟರ್‌ ಸೈನ್ಸ್‌ ಹಾಗೂ ಸಂಬಂಧಿತ ವಿಭಾಗದ ಸೀಟುಗಳನ್ನು ಮನಸೋ ಇಚ್ಛೆ ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ಬರುವ ಶೈಕ್ಷಣಿಕ ಸಾಲಿನಿಂದ ಮಿತಿ ಹೇರಲು ಮುಂದಾಗಿರುವ ಸರ್ಕಾರ, ಈ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆಗಾಗಿ ತಜ್ಞರ ಸಮಿತಿ ರಚಿಸಿದೆ.

ಲಿಂಗರಾಜು ಕೋರಾ

  ಬೆಂಗಳೂರು :  ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಕಂಪ್ಯೂಟರ್‌ ಸೈನ್ಸ್‌ ಹಾಗೂ ಸಂಬಂಧಿತ ವಿಭಾಗದ ಸೀಟುಗಳನ್ನು ಮನಸೋ ಇಚ್ಛೆ ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ಬರುವ ಶೈಕ್ಷಣಿಕ ಸಾಲಿನಿಂದ ಮಿತಿ ಹೇರಲು ಮುಂದಾಗಿರುವ ಸರ್ಕಾರ, ಈ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆಗಾಗಿ ತಜ್ಞರ ಸಮಿತಿ ರಚಿಸಿದೆ.

ಸಂಬಂಧಿಸಿದ ಕೋರ್ಸುಗಳಿಗೆ ನೈಜ ಪ್ರವೇಶ ಸೀಟುಗಳ ಸಾಮರ್ಥ್ಯ, ಮೂಲ ಕೋರ್ಸುಗಳ ಪ್ರವೇಶಕ್ಕೆ ಕೈಗೊಳ್ಳಬೇಕಾದ ಪ್ರೋತ್ಸಾಹಕ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ ಒಂದು ತಿಂಗಳಲ್ಲಿ ಸೂಕ್ತ ಶಿಫಾರಸುಗಳನ್ನು ಮಾಡಲು ತಜ್ಞರ ಸಮಿತಿಗೆ ಸೂಚಿಸಲಾಗಿದೆ.

2025ನೇ ಸಾಲಿನ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ನಂತರ ಸುಮಾರು 9000 ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಸೀಟುಗಳು ಭರ್ತಿಯಾಗದೆ ಉಳಿದಿವೆ. ಇದಕ್ಕೆ ಕಾರಣ, ಎಂಜಿನಿಯರಿಂಗ್‌ ಕಾಲೇಜುಗಳು ಕೆಲವೇ ಬೇಡಿಕೆಯ ಕೋರ್ಸುಗಳ ಪ್ರವೇಶಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮೂಲಕ ಸೀಟುಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವುದು. ಈ ರೀತಿ ಸೀಟುಗಳ ಹೆಚ್ಚಳ ಹಾಗೂ ಹಾಗೂ ಬಹುತೇಕ ವಿದ್ಯಾರ್ಥಿಗಳು ಆ ಕೋರ್ಸುಗಳಿಗೆ ಮುಗಿಬೀಳುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಉದ್ಯೋಗಾವಕಾಶಗಳು ಸಿಗದೆ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಇದನ್ನು ತಡೆಯುವ ಜೊತೆಗೆ ಪ್ರವೇಶ ಕಡಿಮೆಯಾಗುತ್ತಿರುವ ಸಿವಿಲ್‌, ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ಪ್ರವೇಶಕ್ಕೂ ಉತ್ತೇಜನ ನೀಡಿ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಸುಧಾರಣೆ ತರಲು ಮುಂದಾಗಿದೆ.

ತಿಂಗಳಲ್ಲಿ ವರದಿ ಸೂಚನೆ:

ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ(ಐಐಐಟಿ) ನಿವೃತ್ತ ನಿರ್ದೇಶಕ ಡಾ.ಎಸ್‌. ಸದನಗೋಪನ್‌ ಅಧ್ಯಕ್ಷತೆಯಲ್ಲಿ 10 ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಲಾಗಿದೆ. ಐಐಎಸ್ಸಿಯ ಪ್ರೊ.ಜಗದೀಶ್‌, ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್‌ ಸೇರಿ ಹಲವರು ಸಮಿತಿಯಲ್ಲಿದ್ದಾರೆ.

ಈ ಸಮಿತಿ ಕಂಪ್ಯೂಟರ್‌ ಹಾಗೂ ಸಂಬಂಧಿತ ಕೋರ್ಸುಗಳಿಗೆ ನೈಜ ಪ್ರವೇಶಾತಿ ಸೀಟಗಳ ಸಾಮರ್ಥ್ಯ ಪುನರ್‌ ಪರಿಶೀಲಿಸಬೇಕು. ಇತರೆ ಮೂಲ ಎಂಜಿನಿಯರಿಂಗ್‌ ಕೋರ್ಸುಗಳ ಪಠ್ಯಕ್ರಮವನ್ನು ಪ್ರಸ್ತುತ ಕಾಲಘಟ್ಟದ ಕೈಗಾರಿಕಾ ಹಾಗೂ ಉದ್ಯೋಗ ಅವಶ್ಯಕತೆಗಳಿಗೆ ತಕ್ಕಂತೆ ಪರಿಷ್ಕರಿಸುವುದು. ಮೂಲ ಎಂಜಿನಿಯರಿಂಗ್‌ ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧ್ಯಯನ ಮಾಡಿ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ತೆಲಂಗಾಣ ಮಾದರಿ:

ಕಂಪ್ಯೂಟರ್‌ ವಿಜ್ಞಾನದಂಥ ಕೆಲವೇ ಕೋರ್ಸುಗಳಿಗೆ ಪ್ರತೀ ವರ್ಷ ಕಾಲೇಜುಗಳು ಕೇಳಿದಷ್ಟೂ ಸೀಟುಗಳ ಪ್ರವೇಶಕ್ಕೆ ಅನುಮತಿ ನೀಡುತ್ತಿರುವ ಎಐಸಿಟಿಇ ಕ್ರಮದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು, ಇದರಿಂದ ಉದ್ಯೋಗ ಸಮಸ್ಯೆ ಹಾಗೂ ಮೂಲ ಕೋರ್ಸುಗಳಿಗೆ ಪ್ರವೇಶಾತಿ ಕಡಿಮೆಯಾಗಿ ಆ ಕ್ಷೇತ್ರದಲ್ಲಿ ಉದ್ಯೋಗಗಳಿಗೆ ಅಗತ್ಯ ಮಾನವ ಸಂಪನ್ಮೂಲ ದೊರೆಯದ ಸಮಸ್ಯೆ ಎದುರಾಗಲಿದೆ ಎಂಬ ಬಗ್ಗೆ ಈ ಹಿಂದೆ ಪತ್ರವನ್ನೂ ಬರೆದಿದ್ದರು. ಆದರೆ, ಎಐಸಿಟಿಇಯಿಂದ ಸಚಿವರ ಪತ್ರಕ್ಕೆ ಪ್ರತಿಕ್ರಿಯೆ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ರೀತಿ ಸೀಟುಗಳ ಹೆಚ್ಚಳಕ್ಕೆ ಮಿತಿ ಹೇರುವ ಅಧಿಕಾರ ರಾಜ್ಯ ಸರ್ಕಾರಕ್ಕೂ ಇದೆ ಎಂದು ಪ್ರತಿಪಾದಿಸಿದ್ದ ಅವರು, ತೆಲಂಗಾಣದಲ್ಲಿ ಇದೇ ರೀತಿ ಕಂಪ್ಯೂಟರ್ ವಿಜ್ಞಾನ ಮತ್ತು ಸಂಬಂಧಿತ ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟುಗಳನ್ನು ಮಿತಿಗೊಳಿಸಲು ನಿಯಮಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲೂ ಅದೇ ಮಾದರಿಯಲ್ಲಿ ನಿಯಮಗಳನ್ನು ತರಲು ಯೋಜಿಸಲಾಗಿದೆ ಎಂದು ಹೇಳಿದ್ದರು.

ಸಿಎಸ್‌ ಸಂಬಂಧಿತ 99000 ಸೀಟುಗಳು

ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಟ್ಟು 1.53 ಲಕ್ಷ ಎಂಜಿನಿಯರಿಂಗ್ ಸೀಟುಗಳು ಲಭ್ಯವಿದೆ. ಈ ಪೈಕಿ ಸುಮಾರು 99,000 ಸೀಟುಗಳು ಕಂಪ್ಯೂಟರ್ ವಿಜ್ಞಾನ ಮತ್ತು ಸಂಬಂಧಿತ ಕೋರ್ಸ್‌ಗಳಾಗಿವೆ. ಇನ್ನುಳಿದ 54 ಸಾವಿರ ಸೀಟುಗಳು ಮಾತ್ರ ಮೂಲ ಎಂಜಿನಿಯರಿಂಗ್‌ ಕೋರ್ಸುಗಳಿಗೆ ಸಂಬಂಧಿಸಿವೆ. 2025ನೇ ಸಾಲಿನ ಸಿಟಿಇ ಪ್ರವೇಶ ಪ್ರಕ್ರಿಯಲ್ಲಿ ಭರ್ತಿಯಾಗದೆ ಉಳಿದಿದ್ದ 15,000 ಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳಲ್ಲಿ 9,000 ಸೀಟುಗಳು ಕಂಪ್ಯೂಟರ್ ವಿಜ್ಞಾನ ಮತ್ತು ಸಂಬಂಧಿತ ಸ್ಟ್ರೀಮ್‌ಗಳಿಗೆ ಸೇರಿದವಾಗಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ
80 ಶಾಸಕರ ಬೆಂಬಲ ಇದೆ ಎಂಬುದು ಪ್ರಶ್ನೆಯಲ್ಲ: ಸತೀಶ್‌