ಕೊಪ್ಪಳ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು, ದುರಸ್ತಿ ಮಾಡಿದ ಮೇಲೆ ಮತ್ತೆ ಭರ್ತಿಯಾಗಿರುವುದರಿಂದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಭಾನುವಾರ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಇದಾದ ಮೇಲೆ ಕ್ರಸ್ಟ್ ದುರಸ್ತಿಗಾಗಿ ಶ್ರಮಿಸಿದ ಕನ್ನಯ್ಯ ನಾಯ್ಡು, ಎಂಜಿನಿಯರ್, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ, ನಗದು ಪುರಸ್ಕಾರ ಮತ್ತು ಪ್ರಮಾಣಪತ್ರ ನೀಡಿದರು. ಆದರೆ ಬೆಳಗ್ಗೆ 11.55ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಪ್ರಾರಂಭವಾಗಿದ್ದು ಮಧ್ಯಾಹ್ನ 2 ಗಂಟೆಗೆ. ಮುನಿರಾಬಾದ್ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ 4 ಗಂಟೆಯವರೆಗೂ ಇದ್ದು, ಎಂಜಿನಿಯರ್‌ರಿಂದ ಹಿಡಿದು, ಸಿಬ್ಬಂದಿ ಸೇರಿದಂತೆ 140ಕ್ಕೂಹೆಚ್ಚು ಜನರನ್ನು ಸನ್ಮಾನಿಸುವ ವರೆಗೂ ವೇದಿಕೆಯಲ್ಲಿದ್ದರು. ಇವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರಾದ ಶಿವರಾಜ ತಂಗಡಗಿ, ಜಮೀರ್ ಅಹ್ಮದ್, ಬಸವರಾಜ ರಾಯರಡ್ಡಿ ಹಾಗೂ ಎನ್. ಎಸ್. ಬೋಸರಾಜು ಸಾಥ್ ನೀಡಿದರು.
ತುಂಗಭದ್ರಾ ಜಲಾಶಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಬಾಗಿನ ಅರ್ಪಿಸಿರುವುದು ಗಮನಾರ್ಹ ಸಂಗತಿಯಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಭಾಷಣ ಮಾಡಿದ ಎಲ್ಲರೂ ಕ್ರಸ್ಟ್ ದುರಸ್ತಿಗಾಗಿ ಶ್ರಮಿಸಿದ ಕನ್ನಯ್ಯ ನಾಯ್ಡು ಅವರನ್ನು ಪದೇ ಪದೇ ಸ್ಮರಿಸಿದರು. ಅವರತ್ತ ಕೈ ಮಾಡಿ, ಇವರಿಂದಲೇ ನೀರು ಉಳಿಯುವಂತಾಯಿತು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಬರುವಂತೆ ಮಾಡಿದರು ಎಂದು ಗುಣಗಾನ ಮಾಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರಾದ ಜಮೀರ್ ಅಹ್ಮದ್, ಶಿವರಾಜ ತಂಗಡಗಿ, ಎನ್. ಎಸ್. ಬೋಸರಾಜು, ಶರಣುಪ್ರಕಾಶ ಪಾಟೀಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಬಾದರ್ಲಿ ಹಂಪನಗೌಡ ಮೊದಲಾದವರು ಇದ್ದರು.