ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಚಿಂತನೆ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Updated : Jan 20 2024, 12:40 PM IST

ಸಾರಾಂಶ

ರೆಡ್ಡಿ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರೆಡ್ಡಿ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. 

ಶುಕ್ರವಾರ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶ್ರೀ ಮಹಾಯೋಗಿ ವೇಮನ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. 

ಆನೇಕಲ್‌ನಲ್ಲಿ ರೆಡ್ಡಿ ಜನ ಸಂಘದ ಶಿಕ್ಷಣ ಸಂಸ್ಥೆಗೆ ಜಮೀನು ಒದಗಿಸಲು ಸರ್ಕಾರ ಸಿದ್ದವಿದೆ. ಅರಣ್ಯ ಭೂಮಿ ಹೊರತುಪಡಿಸಿ, ಕಂದಾಯ ಭೂಮಿ ಅಥವಾ ಸರ್ಕಾರಿ ಭೂಮಿ ಗುರುತಿಸಿ ಅದನ್ನು ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ಒದಗಿಸಲು ಸರ್ಕಾರ ಅಗತ್ಯಕ್ರಮ ಕೈಗೊಳ್ಳುತ್ತದೆ. 

ಹಾಗೆಯೇ ಕೆ.ಸಿ.ರೆಡ್ಡಿ ಅವರ ಹುಟ್ಟೂರಿನಲ್ಲಿ ಈಗಾಗಲೇ ಕೊಟ್ಟಿರುವ 20 ಎಕರೆ ಜಾಗದ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ಕೊಡಲಿದೆ. ಸಚಿವರಾದ ರಾಮಲಿಂಗಾರೆಡ್ಡಿ, ಶಿವರಾಜ ತಂಗಡಗಿ ಅವರು, ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಬಸವಣ್ಣ, ಕನಕದಾಸ, ಅಂಬೇಡ್ಕರ್, ವೇಮನ ಯಾರೂ ಒಂದು ಜಾತಿಗೆ ಸೀಮಿತರಾದವರಲ್ಲ. ಇವರೆಲ್ಲರೂ ವಿಶ್ವ ಮಾನವರು. ಪ್ರತೀ ಮಗುವೂ ಹುಟ್ಟುತ್ತಾ ವಿಶ್ವ ಮಾನವ. ಬೆಳೆಯುತ್ತಾ ಅಲ್ಪಮಾನವರಾಗಿ ಬಿಡುತ್ತಾರೆ ಎಂದು ಕುವೆಂಪು ಹೇಳಿರುವ ಮಾತು ಸತ್ಯ.

 ವೇಮನ ಅವರು ಆಕಸ್ಮಿಕವಾಗಿ ರೆಡ್ಡಿ ಸಮುದಾಯದಲ್ಲಿ ಹುಟ್ಟಿದ್ದರೂ ಅವರು ಇಡೀ ಮನುಕುಲಕ್ಕೆ ಬೇಕಾದವರಾಗಿದ್ದರು ಎಂದರು. ಶಿಕ್ಷಣ ಕಲಿತು ನಾವು ಮೌಢ್ಯ ಆಚರಿಸಬಾರದು.‌ 

ಶಿಕ್ಷಣದ ಬೆಳಕಿನಿಂದ ನಾವು ಮೌಢ್ಯದ ಹೊರಗೆ ಬರಬೇಕು. ದುರಾದೃಷ್ಟವಶಾತ್‌ ನಮ್ಮ ವಿದ್ಯಾವಂತರು ಕೂಡ ಜಾತಿಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ಶಿಕ್ಷಣದಿಂದ ಜ್ಞಾನಿಗಳಾಗಿ ವೈಚಾರಿಕತೆ ಬೆಳೆಸಿಕೊಳ್ಳುವ ಮೂಲಕ ಮನುಷ್ಯರಾಗಬೇಕಿತ್ತು. 

ಆದರೆ, ನಾವು ಮತ್ತೆ ಅನಿಷ್ಠ ಪದ್ಧತಿಗಳನ್ನು ಮುಂದುವರೆಸಿಕೊಂಡು ಹೋದರೆ, ವೇಮನ ಅವರು ಬಯಸಿದಂತೆ ಸಮಾಜ ಬದಲಾವಣೆ ಆಗಲು ಸಾಧ್ಯವೇ? ಅದಕ್ಕೋಸ್ಕರ ವೇಮನಾದಿಯಾಗಿ ಬಸವಾದಿ ಶರಣರ ಸಂದೇಶ ಈ ಸಮಾಜಕ್ಕೆ ಹೋಗಬೇಕು. 

ಜನರು ಅದನ್ನು ಅರ್ಥ ಮಾಡಿಕೊಂಡು ನಡೆಯಬೇಕೆಂದು ಮಹಾತ್ಮರ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಶಿವರಾಜ ತಂಗಡಗಿ, ಶಾಸಕರಾದ ಜನಾರ್ಧನ ರೆಡ್ಡಿ, ಚನ್ನಾರೆಡ್ಡಿ ಪಾಟೀಲ್‌, ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷರಾದ ಎಸ್.ಜಯರಾಮ ರೆಡ್ಡಿ, ಮಾಜಿ ಸಚಿವ ಎಚ್.ಎಂ.ರೇವಣ್ಣ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್‌.ಮಂಜುಳಾ, ನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ ಉಪಸ್ಥಿತರಿದ್ದರು. ಜನಪದ ತಜ್ಞೆ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು.

ರೆಡ್ಡಿ ಸಮುದಾಯದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ಒತ್ತಾಯ ಸಮಾರಂಭದಲ್ಲಿ ಕೇಳಿಬಂತು. 

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಗ್ಗೆ ನಾನೇನು ಹೇಳುವಂತಿಲ್ಲ. ನಿಮ್ಮ ಅಪೇಕ್ಷೆಯನ್ನು ಪಕ್ಷದ ಹೈಕಮಾಂಡ್‌ಗೆ ತಲುಪಿಸುತ್ತೇನೆ. ಮುಂದಿನ ನಿರ್ಧಾರ ಪಕ್ಷದ ವರಿಷ್ಠರದ್ದು ಎಂದರು.

Share this article