ರೈತರ ನೆರವಿಗೆ ಧಾವಿಸಲು ಸಿಎಂಗೆ ಮನವರಿಕೆ: ಸಚಿವ ಎಂ.ಬಿ.ಪಾಟೀಲ

KannadaprabhaNewsNetwork |  
Published : Aug 11, 2026, 03:30 AM IST
ವೈಜ್ಞಾನಿಕ ಬೆಳೆ ಹಾನಿ ವರದಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಸೂಚನೆ | Kannada Prabha

ಸಾರಾಂಶ

ವಿಜಯಪುರ ಜಿಲ್ಲೆಯಲ್ಲಿ 14 ಮಿಮೀ ಮಳೆ ಕೊರತೆಯಿಂದಾಗಿ ಬಿತ್ತನೆಯಾದ ಬೆಳೆಗಳಿಗೆ ತೇವಾಂಶ ಕೊರತೆಯಾಗಿದ್ದು, ರೈತರ ಜಮೀನಿನಲ್ಲಿ ಹಾನಿಗೀಡಾದ ಬೆಳೆಗಳ ಭಾವಚಿತ್ರದೊಂದಿಗೆ ವೈಜ್ಞಾನಿಕವಾದ ನಿಖರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ -14 ಮಿಮೀ ಮಳೆ ಕೊರತೆಯಿಂದಾಗಿ ಬಿತ್ತನೆಯಾದ ಬೆಳೆಗಳಿಗೆ ತೇವಾಂಶ ಕೊರತೆಯಾಗಿದ್ದು, ರೈತರ ಜಮೀನಿನಲ್ಲಿ ಹಾನಿಗೀಡಾದ ಬೆಳೆಗಳ ಭಾವಚಿತ್ರದೊಂದಿಗೆ ವೈಜ್ಞಾನಿಕವಾದ ನಿಖರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಆಧಾರಿತ ಕೃಷಿ ಬಹಳ ಕಷ್ಟ ಎಂಬುದನ್ನು ಬರ ಪರಿಸ್ಥಿತಿ ಅವಲೋಕನ ವೇಳೆ ಕಂಡುಕೊಂಡಿದ್ದೇನೆ. ಬಹುತೇಕ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಬರುವುದು ನಮ್ಮ ಕರ್ತವ್ಯ. ಈ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೊಗರಿ, ಸೂರ್ಯಕಾಂತಿ, ಕಬ್ಬು ಬೆಳೆ ಸೇರಿದಂತೆ ಪ್ರತಿಯೊಂದೂ ಬೆಳೆಯನ್ನು ಅವಲೋಕಿಸಿರುವೆ. ಮುಖ್ಯಮಂತ್ರಿಗೆ ಈ ಕುರಿತು ಮನದಟ್ಟು ಮಾಡಿಕೊಡುವ ಮೂಲಕ ರೈತರಿಗೆ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಗಮನ ಸೆಳೆಯಲಾಗುವುದು. ವಾಸ್ತವ ಪರಿಸ್ಥಿತಿಯ ವರದಿ ಸಲ್ಲಿಸಲಾಗುವುದು. ಅದರಲ್ಲಿ ತಪ್ಪಾಗದಂತೆ ವಾಸ್ತವಾಂಶಗಳಿಂದ ಕೂಡಿದ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ 7.75 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಆದರೆ ಇಲ್ಲಿಯವರೆಗೆ 6.79 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ. 87.7ರಷ್ಟು ಪ್ರದೇಶದಲ್ಲಿ ಮಾತ್ರ ವಿವಿಧ ಬೆಳೆಗಳ ಬಿತ್ತನೆಯಾಗಿದೆ. 2026ನೇ ಸಾಲಿನಲ್ಲಿ ಜೂನ್ ತಿಂಗಳಲ್ಲಿ 90.4 ಮಿಮೀ ವಾಡಿಕೆ ಮಳೆಯ ಪೈಕಿ ಕೇವಲ 72.6 ಮಿಮೀ ಮಾತ್ರ ಮಳೆಯಾಗಿದೆ. ಜುಲೈನಲ್ಲಿ ವಾಡಿಕೆಯಂತೆ 72.5ರಷ್ಟು ಮಳೆಯ ಪೈಕಿ 20 ಮಿಮೀ ಮಳೆಯಾಗಿದೆ. ಆಗಸ್ಟ್ 7ರವರೆಗೆ ವಾಡಿಕೆಯಂತೆ 19.4 ಮಿಮೀ ಮಳೆಯಾಗಬೇಕಿತ್ತು. ಆದರೆ ಕೇವಲ 12.5 ಎಂಎಂ ಮಳೆಯಾಗಿ 36 ಮಿಮೀ ಮಳೆಯ ಅಭಾವವಾಗಿದೆ. ಜೂ.1 ರಿಂದ ಆ.8ರವರೆಗೆ ವಾಡಿಕೆಯಂತೆ 182.3 ಮಿಮೀ ಮಳೆಯಾಗಬೇಕಿತ್ತು. ಆದರೆ 157.6 ಮಿಮೀ ಮಳೆಯಾಗಿದೆ. ಇದರಿಂದಾಗಿ -14 ಮಿಮೀ ಮಳೆ ಕೊರತೆಯಾಗಿದೆ ಎಂದು ವಿವರಿಸಿದರು.

ಬೆಳೆಗಳಿಗೆ ತೇವಾಂಶ ಕೊರತೆತೊಗರಿ, ಹತ್ತಿ, ಮೆಕ್ಕೆಜೋಳ, ಕಬ್ಬು ಹಾಗೂ ಸೂರ್ಯಕಾಂತಿ ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾಗಿ ಬಿತ್ತನೆಯಾಗಿವೆ. ವಿಜಯಪುರ ತಾಲೂಕಿನ ಹಿಟ್ನಳ್ಳಿ, ಮದಭಾವಿ ಹಾಗೂ ಶಿವಣಗಿ ಗ್ರಾಮಗಳಲ್ಲಿ, ದೇವರಹಿಪ್ಪರಗಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ, ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ ತೇವಾಂಶ ಕೊರತೆ ಎದುರಿಸುತ್ತಿವೆ ಎಂದು ಸಚಿವರು ತಿಳಿಸಿದರು.

ಕುಡಿವ ನೀರಿಗೆ ಸಮಸ್ಯೆಯಿಲ್ಲ:

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಯಥೇಚ್ಛ ನೀರು ಸಂಗ್ರಹವಿದೆ. ಇದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎಂದ ಸಚಿವರು, ಜಿಲ್ಲೆಯ ಜಲಾಶಯಗಳಲ್ಲಿ ಶೇ. 94ಕ್ಕೂ ಅಧಿಕ ನೀರು ಸಂಗ್ರಹವಾಗಿದ್ದು, ಭೀಮಾ ನದಿಗೆ ನೀರು ಹರಿ ಬಿಡುತ್ತಿರುವುದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಮಗಾರಿ ಕೈಗೊಳ್ಳಲು ಟಾಸ್ಕ್ ಫೋರ್ಸ್ ಸಮಿತಿಗೆ ಈಗಾಗಲೇ ₹4 ಕೋಟಿ ಮತ್ತು ಪ್ರತಿ ಮತಕ್ಷೇತ್ರಕ್ಕೆ ₹1 ಕೋಟಿಯಂತೆ ಜಿಲ್ಲೆಗೆ ಒಟ್ಟು ₹12 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ತಿಳಿಸಿದರು.

27 ವಾರಗಳಿಗೆ ಸಾಕಷ್ಟು ಮೇವು:

ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸಾಕಷ್ಟು ಮೇವು ದಾಸ್ತಾನು ಮಾಡಿಕೊಳ್ಳುವಂತೆ ಭಾನುವಾರ ಬರ ಪರಿಸ್ಥಿತಿ ಅವಲಕೋಕನ ವೇಳೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವಾರದಲ್ಲಿ ಇನ್ನೂ 3-4 ತಾಲೂಕಿನ ಬರಪರಿಸ್ಥಿತಿ ಅವಲೋಕನ ಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಅಂದಾಜು 268616 ದೊಡ್ಡ ಜಾನುವಾರು, 805963 ಸಣ್ಣ ಜಾನುವಾರುಗಳಿವೆ. ಜಿಲ್ಲೆಯಲ್ಲಿ ಅಂದಾಜು 3,83,089 ಮೆಟ್ರಿಕ್ ಟನ್ ಒಣ ಮೇವು ರೈತರ ಬಳಿ ದಾಸ್ತಾನಿದೆ. ಈ ಮೇವು ಮುಂದಿನ 28 ವಾರಗಳಿಗೆ ಸಾಕಾಗುತ್ತದೆ ಎಂದು ಸಚಿವರು ತಿಳಿಸಿದರು.

ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮ ಬರಗಿಮಠ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸುದ್ದಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಪ್ರಭ ಪ್ರಶಸ್ತಿ ಪುರಸ್ಕೃತ ಡಾ.ಪ್ರಸಾದ ಸಾಸನೂರಗೆ ಸನ್ಮಾನ
ಮಂತ್ರಿಯಾಗಲು 136 ಶಾಸಕರೂ ಅರ್ಹರಿದ್ದಾರೆ: ಎಂ.ಬಿ. ಪಾಟೀಲ