ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು, ನಾಯಕರು ಮತಯಾಚನೆ ಮಾಡಿದರು. ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ-2 ಯಾತ್ರೆಯಲ್ಲಿ ಮಾತನಾಡಿದ ನಾಯಕರು ನಾಯಕಿ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಿ ಸಂಸತ್ತಿನಲ್ಲಿ ಜಿಲ್ಲೆಯ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಅವರಿಗೆ ಮತವೆಂಬ ಆಶೀರ್ವಾದ ನೀಡಿ ಎಂದು ಎಲ್ಲರೂ ಮನವಿ ಮಾಡಿದರು.ಸಂಯುಕ್ತಾ ಪಾಟೀಲ್ ಗೆದ್ದೇ ಗೆಲ್ತಾರೆ:
ನಿಕೇತ್ ರಾಜ್ ಮೌರ್ಯ ಮಾತನಾಡಿ, ಸಂಯುಕ್ತಾ ಪಾಟೀಲ ಗೆದ್ದೇ ಗೆಲ್ತಾರೆ, ಎಂ.ಪಿ.ಆಗ್ತಾರೆ ಎಂಬ ವಿಶ್ವಾಸ ಇದೆ. ನಮ್ಮ ಹೆಣ್ಣು ಮಕ್ಕಳು ಕಾಂಗ್ರೆಸ್ ಜೊತೆ ನಿಲ್ಲಲು ತೀರ್ಮಾನ ಮಾಡಿದ್ದಾರೆ ಎಂದರು.ನಮ್ಮ ಮನೆಯ ಹೆಣ್ಣು ಮಗಳನ್ನು ಗೆಲ್ಲಿಸುವ ಚುನಾವಣೆ ಎಂಬುದು ನಮ್ಮೆಲ್ಲರ ಹೃದಯದಲ್ಲೊ ಅಚ್ಚೊತ್ತಿದೆ. ಇಂದು ಎಲ್ಲೆಡೆ ಒಂದೇ ಮಾತು, ಭಾಗ್ಯಗಳ ರಾಜ್ಯ, ಅನ್ನರಾಮಯ್ಯ ಆಗಿದ್ದಾರೆ. ಕನ್ನಡಿಗರ ಧ್ವನಿಯಾಗಿದ್ದಾರೆ. ಮೋದಿ ದುರಾಡಳಿತದ ವಿರುದ್ಧ ಮಾತನಾಡುವ ಸಾಮರ್ಥ್ಯ ಇರುವವರು ಸಿದ್ದರಾಮಯ್ಯ ಅವರೊಬ್ಬರಿಗೆ ಎಂದರು.
ದೇಶದ ಜನರನ್ನು ಸುಲಭವಾಗಿ ಮಂಗ ಮಾಡಹುದು ಎಂದು ಮೋದಿ ತಿಳಿದಿದ್ದರು. ಆದರೆ ಜನ ದಡ್ಡರಲ್ಲ. ಕರ್ನಾಟಕ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಇಡೀ ದೇಶದ ಜನ ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅನ್ನು ದೇಶದಲ್ಲಿ ಸೋಲಿಸಲು ಸಾಧ್ಯವಿಲ್ಲ. ಕೆಟ್ಟ ಸೋಲಿನ ನಂತರ ತಲೆ ಎತ್ತಿ ನಿಂತಿದ್ದು ಕರ್ನಾಟಕದಿಂದ ಎಂದರು.ಜಾತಿ ಧರ್ಮದ ವಿಚಾರವನ್ನೇ ಬಿಜೆಪಿಯವರು ಈ ಹಿಂದೆ ಚರ್ಚೆ ಮಾಡುತ್ತಿದ್ದರು. ಈಗ ಟಿವಿ ಹಾಕಿದರೆ ಹಿಂದೂ ಮುಸ್ಲಿಂ ಚರ್ಚೆ ಇಲ್ಲ. ಇಡೀ ರಾಜ್ಯ ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡುತ್ತಿದೆ. ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಎಂದು ವಿವರಿಸಿದರು.
ಸಹಕಾರ ಸಚಿವ ರಾಜಣ್ಣ ಮಾತನಾಡಿ, ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದಾಗ ಹೇಳಿದ ಮಾತನ್ನು ನಡೆಸಿಕೊಡಲಿಲ್ಲ. ಉದ್ಯೋಗ ಕೊಡ್ತೀವಿ, ಕಪ್ಪು ಹಣ ತರ್ತಿವಿ ಅಂದರು, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದವರು ಯಾವುದನ್ನು ಮಾಡಲಿಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಧರ್ಮದ ಮಾತಿನಿಂದ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ. ಧರ್ಮವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ದೇಶವನ್ನು ಒಡೆದು ಅಶಾಂತಿ ನಿರ್ಮಿಸುತ್ತಿರುವ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಮಾರಂಭದಲ್ಲಿ ಅಭ್ಯರ್ಥಿ ಸಂಯುಕ್ತ ಪಾಟೀಲ್, ಶಿವಾನಂದ ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ, ಭೀಮಸೇನ್ ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಪ್ರದೀಪ್ ಈಶ್ವರ್, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಆನಂದ ನ್ಯಾಮಗೌಡ, ಅಜಯ್ ಕುಮಾರ್ ಸರನಾಯಕ್, ಪಕ್ಷದ ಮುಖಂಡರಾದ ಬಿ.ಆರ್.ಯಾವಗಲ್, ಎಂ.ಪಿ.ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.