ಮುಖ್ಯಮಂತ್ರಿ ಬದಲಾವಣೆಗಾಗಿ ಸಿಎಂ-ಡಿಸಿಎಂಗೆ ಕರೆದಿರಬಹುದು

KannadaprabhaNewsNetwork |  
Published : Jan 17, 2026, 02:30 AM IST
16ಕೆಡಿವಿಜಿ1, 2-ಡಿಸಿಎಂ ಡಿ.ಕೆ.ಶಿವಕುಮಾರ ಆಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ.ಶಿವಗಂಗಾ. | Kannada Prabha

ಸಾರಾಂಶ

ಸಂಕ್ರಾಂತಿಯಿಂದ ಸೂರ್ಯಪಥ ಬದಲಾವಣೆ ಆದಂತೆಯೇ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಪಥ ಸಹ ಹೈಕಮಾಂಡ್‌ನತ್ತ ಬದಲಾವಣೆಯಾಗಿದ್ದು, ಎಲ್ಲೋ ಒಂದು ಕಡೆ ಸಿಎಂ ಬದಲಾವಣೆ ಕುರಿತಂತೆ ಕರೆದಿರಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಆಪ್ತ, ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.

- ಸಂಕ್ರಾಂತಿಯ ನಂತರ ಸಿದ್ದು-ಡಿಕೆಶಿ ಪಥವೂ ಹೈಕಮಾಂಡ್‌ನತ್ತ ಬದಲಾವಣೆ: ಚನ್ನಗಿರಿ ಶಾಸಕ ಶಿವಗಂಗಾ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂಕ್ರಾಂತಿಯಿಂದ ಸೂರ್ಯಪಥ ಬದಲಾವಣೆ ಆದಂತೆಯೇ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಪಥ ಸಹ ಹೈಕಮಾಂಡ್‌ನತ್ತ ಬದಲಾವಣೆಯಾಗಿದ್ದು, ಎಲ್ಲೋ ಒಂದು ಕಡೆ ಸಿಎಂ ಬದಲಾವಣೆ ಕುರಿತಂತೆ ಕರೆದಿರಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಆಪ್ತ, ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗುತ್ತಾರೆಂಬ ಸಂಪೂರ್ಣ ವಿಶ್ವಾಸ ನನಗಿದೆ. ಸಿಎಂ-ಡಿಸಿಎಂ ಇಬ್ಬರನ್ನೂ ಕರೆಸಿ, ಮಾತನಾಡುವುದಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಅದಕ್ಕೆ ಪೂರಕವಾಗಿ ಸಿಎಂ-ಡಿಸಿಎಂಗೆ ರಾಹುಲ್ ಗಾಂಧಿ ದೆಹಲಿಗೆ ಕರೆದಿದ್ದಾರೆ ಎಂದರು.

ಸಿಎಂ- ಡಿಸಿಎಂ ಇಬ್ಬರನ್ನೂ ಹೈಕಮಾಂಡ್‌ ದೆಹಲಿಗೆ ಕರೆದಿದ್ದು, ಎಲ್ಲೋ ಒಂದು ಕಡೆ ಸಿಎಂ ಬದಲಾವಣೆ ಕುರಿತಂತೆ ಕರೆದಿರಬಹುದು. ನಮಗೆ ಪೂರಕವಾಗಿಯೇ ಹೈಕಮಾಂಡ್ ನಿರ್ಧಾರ ಆಗಬಹುದು. ಈಗಲೂ ನಮಗೆ ಸಂಪೂರ್ಣ ಹಾಗೂ ದೃಢ ವಿಶ್ವಾಸವೂ ಇದೆ. ಮುಂದೆಯೂ ಇದು ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಏಳೂವರೆ ವರ್ಷ ಅಧಿಕಾರ ನಡೆಸಿದ್ದಾರೆ. ಹೊಸ ಮುಖಗಳು ಶಾಸಕರಾಗಲು ಕಾರಣರಾದ ಡಿ.ಕೆ. ಶಿವಕುಮಾರ ಬಾಕಿ 2 ವರ್ಷ ಸಿಎಂ ಆಗಬೇಕೆಂಬುದು ನಮ್ಮೆಲ್ಲರ ಆಶಯ. ಎಲ್ಲರ ಅಭಿಪ್ರಾಯದಂತೆಯೇ ಎಲ್ಲವೂ ನಡೆಯುತ್ತಿದೆ. ಇದು ಉತ್ತಮ ಬೆಳವಣಿಗೆ, ಶುಭ ಸುದ್ದಿಯಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿಕೆ ಶಿವಕುಮಾರರ ಶ್ರಮ ಹೆಚ್ಚಾಗಿದೆ. ಪಕ್ಷಕ್ಕೆ ಸಾಕಷ್ಟು ದುಡಿದ ಡಿ.ಕೆ.ಶಿವಕುಮಾರರಿಗೆ ಹೈಕಮಾಂಡ್ ಸಿಹಿ ಸುದ್ದಿ ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರಾ ಅಥವಾ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗುತ್ತಾರಾ ಅಥವಾ ಬೇರೆಯವರು ಯಾರಾದರೂ ಮುಖ್ಯಮಂತ್ರಿ ಆಗುತ್ತಾರಾ ಎಂಬುದು ಸ್ಪಷ್ಟವಾಗಬೇಕಾಗಿದೆ. ಈ ಬಗ್ಗೆ ವರಿಷ್ಠರು ತೆರೆ ಎಳೆಯಬೇಕಾಗಿದೆ. ನಮಗೆ ಪೂರಕವಾಗಿಯೇ ನಿರ್ಣಯ ಬರುವ ವಿಶ್ವಾಸವಿದೆ ಎಂದು ಶಾಸಕರು ಹೇಳಿದರು.

ನಾವಂತೂ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲೇ ಇದ್ದೇವೆ. ಉಪ ಮುಖ್ಯಮಂತ್ರಿ ಅವರು ಮುಖ್ಯಮಂತ್ರಿಗಳಾದ ಭಾವನೆ ನನಗೆ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿಯುವ ಆಸೆ ಇತ್ತು. ಈಗ ಅರಸುರ ದಾಖಲೆಯನ್ನೂ ಮುರಿಯುವ ಸಿದ್ದರಾಮಯ್ಯನವರ ಆಸೆಯೂ ಈಡೇರಿದೆ. ಇದಕ್ಕೆ ಪೂರಕವಾಗಿ ಸಿಎಂ, ಡಿಸಿಎಂ ಇಬ್ಬರನ್ನೂ ಹೈಕಮಾಂಡ್‌ ದೆಹಲಿಗೆ ಬುಲಾವ್ ನೀಡಿದೆ ಎಂದು ಅವರು ವಿವರಿಸಿದರು.

ಸಂಕ್ರಾಂತಿ ಮುಗಿದ ನಂತರ ಮಾತನಾಡುತ್ತೇನೆ ಅಂತಾ ನಾನು ಹೇಳಿದ್ದೆ. ಅದರಂತೆ ಇದೀಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರನ್ನೂ ನಮ್ಮ ವರಿಷ್ಠರು ದೆಹಲಿಗೆ ಕರೆದಿದ್ದಾರೆ. ಮುಖ್ಯಮಂತ್ರಿ ಅವರನ್ನು ಬದಲಾವಣೆ ಮಾಡಬಹುದು. ನಾಯಕತ್ವದ ಕುರಿತಂತೆ ಇರುವಂತಹ ಗೊಂದಲಗಳಿಗೂ ಹೈಕಮಾಂಡ್ ತೆರೆ ಎಳೆಯಬೇಕು. ಸಿದ್ದರಾಮಯ್ಯ ಮುಂದುವರಿತಾರೋ ಅಥವಾ ಡಿ.ಕೆ.ಶಿವಕುಮಾರ ಸಿಎಂ ಆಗ್ತಾರೋ ಎಂಬುವನ್ನು ವರಿಷ್ಠರು ಬಗೆಹರಿಸಲಿ ಎಂದು ಒತ್ತಾಯಿಸಿದರು.

ಸಧ್ಯಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇರುತ್ತಾರೋ, ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗುತ್ತಾರೋ ಎಂಬ ಗೊಂದಲಕ್ಕೆ ಪರಿಹಾರ ಸಿಗಬೇಕಾಗಿದೆ. ಎರಡೂವರೆ ದಶಕಗಳಾದರೂ ಚನ್ನಗಿರಿ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅಧಿಕಾರವೂ ಸಿಕ್ಕಿಲ್ಲ. ನಾವೇನೂ ಸಂನ್ಯಾಸಿಗಳಲ್ಲ. ಒಂದು ಅವಕಾಶ ಕೊಟ್ಟರೆ, ನಾವೂ ಕೆಲಸ ಮಾಡುತ್ತೇವೆ ಎನ್ನುವ ಮೂಲಕ ಸಿಎಂ ಬದಲಾವಣೆಯಾದಲ್ಲಿ ತಾವೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬ ಸುಳಿವನ್ನು ಬಸವರಾಜ ಶಿವಗಂಗಾ ವ್ಯಕ್ತಪಡಿಸಿದರು.

- - -

(ಕೋಟ್‌) ಮುಖ್ಯಮಂತ್ರಿ ಯಾರು ಆಗಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾದರೆ ಸಂಪುಟ ಬದಲಾವಣೆ ಆಗುತ್ತದೆ. ಹೊಸಬರಿಗೆ ಅವಕಾಶ ಸಿಕ್ಕರೆ ಒಳ್ಳೆಯದು. ಇದರಿಂದ ಆಡಳಿತದಲ್ಲಿ ಬದಲಾವಣೆ ಆಗುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಕಸ ಗುಡಿಸುವ ಕೆಲಸ ಕೊಟ್ಟರೂ ನಾನು ಮಾಡುತ್ತೇನೆ.

- ಬಸವರಾಜ ವಿ. ಶಿವಗಂಗಾ, ಡಿಕೆಶಿ ಆಪ್ತ, ಚನ್ನಗಿರಿ ಶಾಸಕ.

- - -

-16ಕೆಡಿವಿಜಿ1, 2.ಜೆಪಿಜಿ:

ಡಿಸಿಎಂ ಡಿ.ಕೆ.ಶಿವಕುಮಾರ ಆಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ