ಗಡಿ ಸಮಸ್ಯೆಗಳಿಗೆ ಸ್ಪಂದಿಸುವರೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

KannadaprabhaNewsNetwork |  
Published : Jul 09, 2026, 04:00 AM ISTUpdated : Jul 09, 2026, 04:22 AM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗುರುವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಗಡಿ ಭಾಗದ ಕನ್ನಡಿಗರ ನಿರೀಕ್ಷೆಗಳು ಗರಿಗೆದರಿವೆ. ಆಡಳಿತಾತ್ಮಕ ಸಭೆಗಳ ಜೊತೆಗೆ ಗಡಿ ಭಾಗದ ಹಲವು ವರ್ಷಗಳ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಯಾವ ನಿಲುವು ಪ್ರಕಟಿಸುತ್ತಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

ಶ್ರೀಶೈಲ ಮಠದ

 ಬೆಳಗಾವಿ :  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗುರುವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಗಡಿ ಭಾಗದ ಕನ್ನಡಿಗರ ನಿರೀಕ್ಷೆಗಳು ಗರಿಗೆದರಿವೆ. ಆಡಳಿತಾತ್ಮಕ ಸಭೆಗಳ ಜೊತೆಗೆ ಗಡಿ ಭಾಗದ ಹಲವು ವರ್ಷಗಳ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಯಾವ ನಿಲುವು ಪ್ರಕಟಿಸುತ್ತಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

ಈ ಭೇಟಿ ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಗಡಿ ವಿವಾದದ ವಿಚಾರಣೆಗೆ ಮುನ್ನ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬೆಳಗಾವಿಗೆ ಆಗಮಿಸುತ್ತಿರುವುದು ರಾಜಕೀಯ ಹಾಗೂ ಆಡಳಿತಾತ್ಮಕ ಮಹತ್ವ ಪಡೆದುಕೊಂಡಿದೆ.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಕಳೆದ ನೂರು ದಿನಗಳಿಂದ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. 

ಪಾಲಿಕೆಯಲ್ಲಿ ಗೊತ್ತುವಳಿ ಅಂಗೀಕಾರದ ಕುರಿತು ಅಭಿಪ್ರಾಯ ತಿಳಿಸಬೇಕು ಎಂದು ಆಗ್ರಹ

 ಪಾಲಿಕೆಯಲ್ಲಿ ಗೊತ್ತುವಳಿ ಅಂಗೀಕಾರದ ಕುರಿತು ರಾಜ್ಯ ಸರ್ಕಾರ ತನ್ನ ಸ್ಪಷ್ಟ ಅಭಿಪ್ರಾಯ ತಿಳಿಸಬೇಕು ಎಂದು ಸಂಘಟನೆಗಳು ಆಗ್ರಹಿಸುತ್ತಿವೆ. ಈ ವಿಷಯದಲ್ಲಿ ಮುಖ್ಯಮಂತ್ರಿಯ ಮಧ್ಯಸ್ಥಿಕೆ ಅಗತ್ಯ ಎಂದು ಕನ್ನಡಪರ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದರ ಜೊತೆಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಗಡಿ ಸಂರಕ್ಷಣಾ ಆಯೋಗದ ಮುಖ್ಯ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯೂ ಮತ್ತೆ ಮುನ್ನೆಲೆಗೆ ಬಂದಿದೆ. ಗಡಿ ಭಾಗದ ಸಮಸ್ಯೆಗಳ ಪರಿಹಾರಕ್ಕಾಗಿ ಆಯೋಗವೇ ಗಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂಬುದು ಸಂಘಟನೆಗಳ ವಾದವಾಗಿದೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಕಾನೂನು ಸಿದ್ಧತೆಯನ್ನು ತೀವ್ರಗೊಳಿಸಿದೆ. ಈ ಬೆಳವಣಿಗೆಯ ನಡುವೆಯೇ ಕರ್ನಾಟಕ ಸರ್ಕಾರವೂ ಗಡಿ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಿ ಸ್ಪಷ್ಟ ಸಂದೇಶ ನೀಡಬೇಕೆಂಬ ನಿರೀಕ್ಷೆ ವ್ಯಕ್ತವಾಗಿದೆ.ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿರುವ ಮನವಿಯಲ್ಲಿ ಗಡಿ ವಿವಾದ, ಮಹಾನಗರ ಪಾಲಿಕೆ ಗೊತ್ತುವಳಿ, ಗಡಿ ಸಂರಕ್ಷಣಾ ಆಯೋಗದ ಸ್ಥಳಾಂತರ, ಗಡಿ ಭಾಗದ ಅಭಿವೃದ್ಧಿ ಹಾಗೂ ಕನ್ನಡಿಗರ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಸಾಧ್ಯತೆ ಇದೆ.ಗಡಿ ಭಾಗದ ಕನ್ನಡಿಗರ ಸಮಸ್ಯೆಗಳನ್ನು ಆದ್ಯತೆಯಿಂದ ಬಗೆಹರಿಸಬೇಕು.  

ಇಬ್ಬರು ಗಡಿ ಉಸ್ತುವಾರಿ

ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಉತನ್ನದ ಮಟ್ಟದ ಸಮಿತಿ ರಚಿಸುವುದರ ಜೊತೆಗೆ ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಆದರೆ, ಗಡಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯದಲ್ಲಿ ಗಡಿ ಉಸ್ತುವಾರಿ ಸಚಿವರೇ ಇಲ್ಲ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ. 

ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಪ್ರಾದೇಶಿಕ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಜೊತೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅ‍ವರು ಗಡಿ ಭಾಗದ ಜನಪ್ರತಿನಿಧಿಗಳು ಹಾಗೂ ಕನ್ನಡಪರ ಸಂಘಟನೆಗಳ ಅಭಿಪ್ರಾಯವನ್ನೂ ಆಲಿಸುವರೇ ಎಂಬ ಕುತೂಹಲ ಮೂಡಿದೆ.ಗಡಿ ವಿವಾದದ ಅಂತಿಮ ತೀರ್ಮಾನ ಸುಪ್ರೀಂ ಕೋರ್ಟ್‌ನಲ್ಲಿದ್ದರೂ, ಗಡಿ ಭಾಗದ ಜನರ ಸಮಸ್ಯೆಗಳಿಗೆ ಆಡಳಿತಾತ್ಮಕ ಪರಿಹಾರ ಕಲ್ಪಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮೊದಲ ಬೆಳಗಾವಿ ಭೇಟಿ ಗಡಿ ಭಾಗದ ಜನರ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತದೆ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಸಮಾಲೋಚನೆ
ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಿ: ಬಿ.ಡಿ. ಬಾಣಕಾರ