ಅಪರಾಧ ತನಿಖಾ ವಿಭಾಗ(ಸಿಐಡಿ)ದಿಂದ ‘ಸಿಐಡಿ-ಡಿಕೋಡ್’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ‘ಸೈಬರ್ ಹ್ಯಾಕಥಾನ್’ ನೋಂದಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು..
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪರಾಧ ತನಿಖಾ ವಿಭಾಗ(ಸಿಐಡಿ)ದಿಂದ ‘ಸಿಐಡಿ-ಡಿಕೋಡ್’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ‘ಸೈಬರ್ ಹ್ಯಾಕಥಾನ್’ ನೋಂದಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಈ ಸೈಬರ್ ಹ್ಯಾಕಥಾನ್ ನೋಂದಣಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು.
ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವಲ್ಲಿ ಸ್ವಯಂಪ್ರೇರಿತವಾಗಿ ತನಿಖಾ ಸಂಸ್ಥೆಗಳ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸಿಐಡಿ, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ(ಡಿಎಸ್‌ಸಿಐ), ಇನ್ಫೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ‘ಸೆಂಟರ್ ಫಾರ್ ಸೈಬರ್ ಕ್ರೈಂ ಟ್ರೈನಿಂಗ್ ಆ್ಯಂಡ್ ರಿಸರ್ಚ್(ಸಿಸಿಐಟಿಆರ್) ವತಿಯಿಂದ ಈ ಸೈಬರ್ ಹ್ಯಾಕಥಾನ್ ಆಯೋಜಿಸಲಾಗಿದೆ.
ಪಿಇಎಸ್ ವಿಶ್ವವಿದ್ಯಾಲಯವು ಈ ಕಾರ್ಯಕ್ರಮದ ಆತಿಥ್ಯ ವಹಿಸಿದೆ.ಮಾ.2ರಂದು ಹ್ಯಾಕಥಾನ್ ಡೇ
24 ಗಂಟೆ ಅವಧಿಗೆ ನಿರ್ದಿಷ್ಟಪಡಿಸಲಾದ ಈ ಹ್ಯಾಕಥಾನ್‌ನಲ್ಲಿ ಡಾರ್ಕ್ ವೆಬ್ ಮೇಲ್ವಿಚಾರಣೆ ಮತ್ತು ಪತ್ತೆ, ಕ್ರಿಪ್ಟೋಕರೆನ್ಸಿಗಳು ಮತ್ತು ಓಪನ್ ಸೋರ್ಸ್ ಇಂಟೆಲಿಜೆನ್ಸ್ ವಿಷಯಾಧಾರಿತ ಏಕೀಕೃತ ವೇದಿಕೆಯನ್ನು ಒಳಗೊಂಡಿದೆ. ತಾಂತ್ರಿಕ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳು ಈ ಹ್ಯಾಕಥಾನ್‌ನಲ್ಲಿ ಭಾಗವಹಿಸಲಿದ್ದಾರೆ.
ಇಂದಿನಿಂದ ನೋಂದಣಿ ಆರಂಭವಾಗಿದ್ದು, ಜ.31ರಂದು ನೋಂದಣಿ ಕೊನೆಗೊಳ್ಳಲಿದೆ. ಫೆ.15ರಂದು ತಂಡಗಳನ್ನು ಅಂತಿಮಗೊಳಿಸಲಾಗುತ್ತದೆ. ಮಾ.2ರಂದು ಹ್ಯಾಕಥಾನ್ ಡೇ ನಡೆಯಲಿದ್ದು, ಮಾ.3ರಂದು ವಿಜೇತರನ್ನು ಘೋಷಿಸಲಾಗುತ್ತದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.ಸಂಕ್ಷಿಪ್ತ ಸೈಬರ್ ಕ್ರೈಂ ತನಿಖಾ ಕೈಪಿಡಿ ಬಿಡುಗಡೆ
ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಅಧಿಕಾರಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಿಐಡಿ ಇದೇ ಪ್ರಥಮ ಬಾರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರೂಪಿಸಿರುವ ‘ಸಂಕ್ಷಿಪ್ತ ಸೈಬರ್ ಕ್ರೈಂ ತನಿಖಾ ಕೈಪಿಡಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.
ಡಿಜಿಟಲ್ ಫಾರೆನ್ಸಿಕ್ ಮತ್ತು ಸೈಬರ್ ಅಪರಾಧಗಳ ತನಿಖಾ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವವುಳ್ಳ ನುರಿತ ಪೊಲೀಸ್ ಅಧಿಕಾರಿಗಳು ಹಾಗೂ ಡಿಎಸ್‌ಸಿಐನ ವಿಷಯ ತಜ್ಞರು ಈ ಕೈಪಿಡಿಯನ್ನು ಸಿದ್ಧಪಡಿಸಿದ್ದಾರೆ.
ಇದರಲ್ಲಿ ಸೈಬರ್ ತನಿಖಾ ಪ್ರಕ್ರಿಯೆ, ಡಿಜಿಟಲ್ ಫಾರೆನ್ಸಿಕ್, ಸೈಬರ್ ಅಪರಾಧಗಳ ಅವಲೋಕನ, ಸೈಬರ್ ಕಾನೂನುಗಳು, ಸೈಬರ್ ಅಪರಾಧಗಳ ಕಾರ್ಯ ವಿಧಾನ, ವಿದ್ಯುನ್ಮಾನ ಸಾಕ್ಷ್ಯಗಳ ಸ್ವೀಕಾರಾರ್ಹತೆ ಸೇರಿದಂತೆ ತನಿಖಾ ವಿಧಾನಗಳ ವ್ಯಾಪಕ ವಿಷಯಾಧಾರಿತ ಮಾಹಿತಿಗಳನ್ನು ಒಳಗೊಂಡಿದೆ.
ಕಾನೂನು ಮತ್ತು ನೈತಿಕ ಚೌಕಟ್ಟಿನ ಪರಿಮಿತಿಯೊಳಗೆ ಪರಿಣಾಮಕಾರಿಯಾಗಿ ತನಿಖೆ ನಡೆಸುವ ಪ್ರಾಮುಖ್ಯತೆಗೆ ವಿಶೇಷ ಒತ್ತು ನೀಡಲಾಗಿದೆ. ತನಿಖಾಧಿಕಾರಿಗಳ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಸ್ಪಷ್ಟಪಡಿಸಲಾಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.