ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಅಧಿವೇಶನದಲ್ಲೇ ಮಸೂದೆ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Feb 01, 2024, 02:08 AM ISTUpdated : Feb 01, 2024, 12:20 PM IST
Siddaramaiah

ಸಾರಾಂಶ

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕದೆ ಹಿಂದಿರುಗಿಸಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಮಂಡಲದ ಬಜೆಟ್‌ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕದೆ ಹಿಂದಿರುಗಿಸಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಮಂಡಲದ ಬಜೆಟ್‌ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕೆಗಳು, ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಳಿಸಲಾಗಿತ್ತು. 

ಆದರೆ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮುಂಚೆಯೇ ವಿಧಾನಮಂಡಲ ಅಧಿವೇಶನ ಘೋಷಣೆಯಾದ ಕಾರಣ ವಾಪಸ್ಸು ಕಳಿಸಿದ್ದಾರೆ.

ಏಕೆಂದರೆ ಅಧಿವೇಶನ ಘೋಷಣೆಯಾದ ಸಮಯದಲ್ಲಿ ಸುಗ್ರೀವಾಜ್ಞೆಗೆ ಸಹಿ ಹಾಕಲು ಬರುವುದಿಲ್ಲ ಎಂದು ಸಮರ್ಥಿಸಿಕೊಂಡರಲ್ಲದೆ, ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು.

ಸಹಿ ಬಗ್ಗೆ ಮರು ಚಿಂತಿಸಲು ಡಿಸಿಎಂ ಮನವಿ: ಈ ಮಧ್ಯೆ, ಮತ್ತೊಂದಡೆ ವಿಧಾನಸೌಧದಲ್ಲೇ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕುವ ವಿಚಾರದಲ್ಲಿ ಮರು ಚಿಂತಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಧಿವೇಶನ ಘೋಷಣೆಯಾದ ಬಳಿಕ ರಾಜ್ಯಪಾಲರು ಸಹಿ ಹಾಕಲು ಬರುವುದಿಲ್ಲ ನಿಜ. ಆದರೆ, ಅಧಿವೇಶನ ಘೊಷಣೆಗೂ ಮೊದಲೇ ಜ.5ರಂದೇ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. 

ಕನ್ನಡ ಭಾಷೆ, ಸಂಸ್ಕೃತಿ, ಕನ್ನಡಿಗರ ಸ್ವಾಭಿಮಾನ ರಕ್ಷಣೆ ಮಾಡೋದು ನಮ್ಮ ಕರ್ತವ್ಯ. ಹಾಗಾಗಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯದ ಸುಗ್ರೀವಾಜ್ಞೆ ಮಾಡಿದ್ದೆವು. ಇದನ್ನು ರಾಜ್ಯಪಾಲರು ಯಾಕೆ ವಾಪಸ್‌ ಕಳುಹಿಸಿದರೋ ಗೊತ್ತಿಲ್ಲ. 

ಮಾಹಿತಿ ಪಡೆದುಕೊಳ್ಳುತ್ತೇವೆ. ಜೊತೆಗೆ ನಾವು ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದೇ ಪಡೆಯುತ್ತೇವೆ. ಸುಗ್ರೀವಾಜ್ಞೆಗೆ ಯಾವುದೇ ಸಂಘ, ಸಂಸ್ಥೆಗಳಾಗಲಿ, ರಾಜಕೀಯ ಪಕ್ಷದವರಾಗಲಿ ಆಕ್ಷೇಪ, ವಿರೋಧ ಮಾಡಿಲ್ಲ. 

ಹಾಗಾಗಿ ಅಧಿವೇಶನದವರೆಗೆ ರಾಜ್ಯಪಾಲರು ಕಾಯಬಾರದು. ಸುಗ್ರೀವಾಜ್ಞೆಗೆ ಸಹಿ ಹಾಕುವ ವಿಚಾರದ ಬಗ್ಗೆ ಮರು ಚಿಂತನೆ ನಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಸುಗ್ರೀವಾಜ್ಞೆ ತಿರಸ್ಕರಿಸಿಲ್ಲ: ರಾಜಭವನದ ಸ್ಪಷ್ಟನೆ: ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ. ಅಧಿವೇಶನದಲ್ಲಿ ಈ ಕುರಿತ ಮಸೂದೆಗೆ ಅನುಮೋದನೆ ಪಡೆಯುವಂತೆ ಸೂಚಿಸಿದ್ದಾರೆ ಎಂದು ರಾಜಭವನ ಸ್ಪಷ್ಟಪಡಿಸಿದೆ.

ಈ ಸಂಬಂಧ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್‌.ಪ್ರಭು ಶಂಕರ್‌, ಕರ್ನಾಟಕ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧ್ಯಾದೇಶ 2024ನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ. 

ಬದಲಾಗಿ ಈಗಾಗಲೇ ಅಧಿಸೂಚನೆ ಹೊರಡಿಸಿರುವಂತೆ ಫೆ.12ರಿಂದ ಪ್ರಾರಂಭವಾಗುವ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮುಂದೆ ಸಂಬಂಧಿಸಿದ ಮಸೂದೆ ಮಂಡಿಸಿ ಅನುಮೋದನೆ ಪಡೆಯುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ