ಹಾವೇರಿ: ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತನಾಡಲು ಏನೂ ಇಲ್ಲ. ಅದಕ್ಕಾಗಿ ಸಂವಿಧಾನ ಬದಲಾಯಿಸುತ್ತಾರೆ ಎಂದು ರಾಜಕೀಯವಾಗಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದಲು ಮಾಡುವ ಬಿಜೆಪಿಗೆ ಮತ ಹಾಕಬೇಡಿ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರಿಗೆ ಮೋದಿಯವರ ವಿರುದ್ಧ ಹೇಳಲು ಏನೂ ಇಲ್ಲ. ಕಳೆದ ಬಾರಿ ಇದನ್ನೇ ಹೇಳಿದ್ದರು. ಸಂವಿಧಾನ ಬದಲು ಮಾಡಲು ಯಾರ ಕೈಯಲ್ಲೂ ಆಗುವುದಿಲ್ಲ ಎಲ್ಲದಕ್ಕೂ ಕಾನೂನು ಇದೆ. ಸಂವಿಧಾನ ಬದಲು ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಸುಮ್ಮನೆ ರಾಜಕೀಯ ಭಯ ಹುಟ್ಟಿಸಲು ಈ ರೀತಿ ಹೇಳುತ್ತಿದ್ದಾರೆ. ಡಾ ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವ ಶಾಶ್ವತ ಕೆಲಸ ಮಾಡಿದ್ದಾರೆ ಎಂದರು.ಭಾರತ ಮಾತಾ ಕೀ ಜೈ ಎನ್ನುವುದು ಬಿಜೆಪಿಯ ಅಪ್ಪನ ಮನೆ ಆಸ್ತಿನಾ ಎಂಬ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತಿಗೆ ತಿರಗೇಟು ನೀಡಿದ ಬೊಮ್ಮಾಯಿ, ಅವರ ಹೇಳಿಕೆ ಸರಿಯಾಗಿದೆ ತಪ್ಪೆನೂ ಇಲ್ಲ. ಭಾರತ ಮಾತಾ ಕಿ ಜೈ ಎಂದು ಕೂಗಲು ಭಾರತದ ಮಕ್ಕಳಿಗೆ ಅಧಿಕಾರ ಇದೆ. ಕಾಂಗ್ರೆಸ್ಸಿನವರು ಕೂಗಲಿ ನಾವು ಸ್ವಾಗತ ಮಾಡುತ್ತೇವೆ. ಭಾರತ ಮಾತೆ ಇನ್ನೂ ಖುಷಿ ಆಗುತ್ತಾಳೆ. ಆದರೆ, ಭಾರತ ಮಾತಾ ಕಿ ಜೈ ಎಂದು ಹೇಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಪ್ಪಣೆ ಕೇಳಿರುವುದು ಅಲ್ಲಿರುವವರ ಮನಸ್ಥಿತಿ ಏನು ಅಂತಾ ಬಿಂಬಿಸುತ್ತದೆ ಎಂದು ಹೇಳಿದರು.