ಕನ್ನಡಪ್ರಭ ವಾರ್ತೆ ಬೆಂಗಳೂರು
ಬುಧವಾರ ಕೂಡ ಎಂಟು ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಅವರು ನಗರದ ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖಾವಾರು ಸಭೆಗಳು ಇನ್ನೇನು ಮುಕ್ತಾಯಗೊಳ್ಳಲಿದ್ದು, ಸದ್ಯದಲ್ಲೇ ಬಜೆಟ್‌ಗೆ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಐದು ದಿನ 50 ಇಲಾಖೆ ಸಭೆ:ಫೆ.5ರಿಂದ ಆರಂಭವಾದ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಇದುವರೆಗೆ ಒಟ್ಟಾರೆ 50 ಇಲಾಖೆಗಳ ಸಭೆ ನಡೆಸಿದ್ದು, ಬಹುತೇಕ ಪೂರ್ಣಗೊಂಡಂತಾಗಿದೆ. ಮೊದಲ ದಿನ ಗುರುವಾರ ಗೃಹ ಇಲಾಖೆಯೂ ಸೇರಿ 11 ಇಲಾಖೆಗಳು, ನಂತರ ಫೆ.6ರ ಶುಕ್ರವಾರ 9 ಇಲಾಖೆಗಳು, ಫೆ.7 ಮತ್ತು 10ರಂದು ತಲಾ 11 ಇಲಾಖೆಗಳು, ಬುಧವಾರ 8 ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬರುವ ಬಜೆಟ್‌ನಲ್ಲಿ ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಕಾರ್ಯಕ್ರಮಗಳ ಅನುಷ್ಠಾನವಾಗಿದೆ, ಅನುಷ್ಠಾನವಾಗಬೇಕಿರುವ ಕಾರ್ಯಗಳೆಷ್ಟು, ಎಷ್ಟು ಹಣ ಉಳಿದಿದೆ? ಮುಂದಿನ ಹಣಕಾಸು ವರ್ಷದಲ್ಲಿ ಬರುವ ಆದಾಯ ಮತ್ತು ಖರ್ಚು, ಹೊಸ ಯೋಜನೆಗಳೇನು ಎಂಬ ಬಗ್ಗೆ ಮುಖ್ಯಮಂತ್ರಿ ಅವರು ಸಮಗ್ರ ಮಾಹಿತಿ ಪಡೆದ್ದಾರೆ.
ಬರುವ ದಿನಗಳಲ್ಲಿ ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು ಸೇರಿ ವಿವಿಧ ಸಂಘ-ಸಂಸ್ಥೆಗಳು, ತಜ್ಞರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಆಲಿಸಲಾಗುತ್ತದೆ. ಅಂತಿಮವಾಗಿ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಸಂಗ್ರಹವಾಗುವ ಆದಾಯ ಎಷ್ಟು, ಕೇಂದ್ರದಿಂದ ಬರುವ ತೆರಿಗೆ ಪಾಲು, ವಿವಿಧ ಯೋಜನೆಗಳ ಅನುದಾನ, ಸಾಲ ಸೌಲಭ್ಯ, ಖರ್ಚು ವೆಚ್ಚಗಳು ಎಲ್ಲವನ್ನೂ ಪರಾಮರ್ಶಿಸಿ ಬಜೆಟ್ ಸಿದ್ಧತೆ ಅಂತಿಮಗೊಳಿಸಲಿದ್ದಾರೆ.