ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನಲ್ಲಿ 1400 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜು.28 ರಂದು ಆಗಮಿಸುತ್ತಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಕೆ.ಎಂ.ಉದಯ್ ತಿಳಿಸಿದರು.ಮಂಗಳವಾರ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ಯಾವುದೇ ಲೋಪವಿಲ್ಲದಂತೆ ಆಯೋಜಿಸಲು ಶಿಷ್ಠಾಚಾರ, ಆಹಾರ, ವಸ್ತುಪ್ರದರ್ಶನ, ಕುಡಿಯುವ ನೀರು ಹಾಗೂ ಸ್ವಚ್ಛತೆ, ಭದ್ರತೆ, ವೇದಿಕೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.
ಲೋಕೋಯೋಗಿ ಇಲಾಖೆಯ- 81 ಕೋಟಿ ರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ- 12 ಕೋಟಿ ರು., ಕಾವೇರಿ ನೀರಾವರಿ ನಿಗಮ- 300 ಕೋಟಿ ರು. ಸೇರಿದಂತೆ ವಿವಿಧ ಇಲಾಖೆಗಳ 1400 ಕೋಒಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನಡೆಯಲಿದೆ ಎಂದರು.ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆಯಿಂದ ಉದ್ಘಾಟನೆಯಾಗುವ ಕಾಮಗಾರಿಯ ವಿವರವನ್ನು ನಿಖರವಾಗಿ ತಿಳಿಸಬೇಕು. ಶಿಷ್ಟಾಚಾರದಂತೆ ಸಚಿವರು, ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಹೆಸರುಗಳು ಆಹ್ವಾನ ಪತ್ರಿಕೆಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಂಡು, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ನೀಡುವ ಉಪಹಾರ ವಿತರಣೆಗೆ ಅಗತ್ಯ ಕೌಂಟರ್ ಗಳ ವ್ಯವಸ್ಥೆ ಮಾಡುವುದು. ಆಹಾರ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಬೇಕು. ಅಗತ್ಯ ಸ್ಥಳಗಳಲ್ಲಿ ಸಿ.ಸಿ.ಟಿವಿ ಅಳವಡಿಸುವಂತೆ ಸೂಚಿಸಿದರು.ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಸ್ಥಳಗಳಲ್ಲಿ ಮೊಬೈಲ್ ಶೌಚಾಲಯಗಳನ್ನು ಸ್ಥಾಪಿಸಬೇಕು. ಮಳೆಗಾಲ ಇರುವುದರಿಂದ ಪಾರ್ಕಿಂಗ್ ಸ್ಥಳವನ್ನು ಸಮತಟ್ಟು ಮಾಡಿ ವಾಹನ ನಿಲುಗಡೆಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ.ಲಕ್ಷ್ಮೀ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಸಭೆಯ ನಂತರ ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸಿದರು.