ಪಂಚಮಸಾಲಿ ಮೀಸಲಾತಿಗೆ ಅ.15ರಂದು ಸಿಎಂ ಸಭೆ: ಬಸವಜಯಮೃತ್ಯುಂಜಯ ಸ್ವಾಮೀಜಿ

KannadaprabhaNewsNetwork |  
Published : Sep 23, 2024, 01:17 AM IST
ಲಿಂಗಾಯತ ಪಂಚಮಸಾಲಿ ರಾಜ್ಯ ವಕೀಲರ ಪರಿಷತ್‌ ಸಮಾವೇಶದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಅಕ್ಟೋಬರ್‌ 15ರಂದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಕರೆದಿದ್ದಾರೆ. ಮೀಸಲಾತಿ ಬಗ್ಗೆ ಗಟ್ಟಿ ನಿರ್ಧಾರ ಪ್ರಕಟಿಸದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಅಕ್ಟೋಬರ್‌ 15ರಂದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಕರೆದಿದ್ದಾರೆ. ಮೀಸಲಾತಿ ಬಗ್ಗೆ ಗಟ್ಟಿ ನಿರ್ಧಾರ ಪ್ರಕಟಿಸದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಲಿಂಗಾಯತ ಪಂಚಮಸಾಲಿ ರಾಜ್ಯ ವಕೀಲರ ಪರಿಷತ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಶಾಸಕರ ಹಾಗೂ ಸ್ವಾಮೀಜಿಗಳ ಮಾತಿಗೆ ಬೆಲೆ ಕೊಡಲಿಲ್ಲ. ಈಗ ವಕೀಲರ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ. ಮೀಸಲಾತಿ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತಜ್ಞರ ಜೊತೆಗೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.ವಿನಯ ಕುಲಕರ್ಣಿ ಅವರು ಸಿಎಂ ಸಿದ್ದರಾಮಯ್ಯನವರಿಗೆ ದೂರವಾಣಿ ಕರೆ ಮಾಡಿ, ನಮ್ಮೊಂದಿಗೆ ಮಾತನಾಡಿಸಿದ್ದಾರೆ. ಮುಖ್ಯಮಂತ್ರಿಗಳು ಅಕ್ಟೋಬರ್‌ 15 ರಂದು ಸಭೆಗೆ ಆಗಮಿಸುವಂತೆ ಆಮಂತ್ರಣ ನೀಡಿದ್ದಾರೆ. ಆ ಸಭೆಯಲ್ಲಿ ಮೀಸಲಾತಿ ಬಗ್ಗೆ ಸರ್ಕಾರ ಗಟ್ಟಿ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ನಮ್ಮ ಸಮಾಜಕ್ಕೆ ಕೂಡಲಸಂಗಮದ‌ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ಸಿಕ್ಕಿದ್ದು ಅದೃಷ್ಟ. ಅವರು ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲು ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ಸ್ವಾಮೀಜಿ ‌ಇಲ್ಲದಿದ್ದರೆ ಈ ಹೋರಾಟಕ್ಕೆ ಬೆಲೆ ಇರುತ್ತಿರಲಿಲ್ಲ ಎಂದರು.

ಮೀಸಲಾತಿಗಾಗಿ ಸ್ವಾಮೀಜಿ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿದರು. ಆ ಮೂಲಕ‌ ಮೀಸಲಾತಿ‌‌ ವಿಚಾರದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಕೀಲರ ಸಮಾವೇಶ ‌ಬೆನ್ನಲ್ಲೇ ಸ್ವಾಮೀಜಿ ‌ನೇತೃತ್ವದ ನಿಯೋಗ ಭೇಟಿಗೆ ಸಿಎಂ ಸಿದ್ದರಾಮಯ್ಯ ಸಮಯ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಮಾತನಾಡಿ ನಿಯೋಗ ಭೇಟಿಗೆ ಅವಕಾಶ ಕಲ್ಪಿಸಿದ‌ ವಿನಯ‌ ಕುಲಕರ್ಣಿಗೆ ಅಭಿನಂದಿಸುತ್ತೇನೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಂಬಂಧ ‌ನಡೆಯುತ್ತಿರುವ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲವಿದೆ ಎಂದು ಹೇಳಿದರು.

ಈ ಹಿಂದೆ‌ ಹೋರಾಟದಲ್ಲಿ ಪಾಲ್ಗೊಂಡವರು ಇಂದು ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ‌ ಸಮಾಜದ ‌ಸ್ವಾಮೀಜಿ ಬಗ್ಗೆ ಮಾತನಾಡಿದರೆ ಹುಷಾರ್. ಮೊದಲು‌ ಬೆಂಬಲಿಸಿ ಈಗ ಸ್ವಾಮೀಜಿ ‌ಬಗ್ಗೆ ಹಗುರವಾಗಿ ಮಾತನಾಡಬೇಡಿ. ಸ್ವಾಮೀಜಿ ಅವರಲ್ಲಿ ಹೋರಾಟದ ಸ್ವಭಾವವೂ ಇದೆ, ಮೃದು ಸ್ವಭಾವವೂ ಇದೆ. ಅಕ್ಟೋಬರ್ 15ರಂದು ಸಿಎಂ ಭೇಟಿಗೆ ಹೋಗುವ ನಿಯೋಗದಲ್ಲಿ 11 ಜನ ನುರಿತ ತಜ್ಞರು ಇರಲಿ. ಸರ್ಕಾರದ ‌ಜೊತೆಗೆ ನಮ್ರತೆಯಿಂದ‌ ಹೋರಾಡಿ ಮೀಸಲಾತಿ ಪಡೆಯೋಣ. ಬೇಗ ಮೀಸಲಾತಿ ಸಿಕ್ಕರೆ ಸ್ವಾಮೀಜಿ ವಿಶ್ರಾಂತಿ ‌ಪಡೆಯಲು ಅನುಕೂಲ ಆಗುತ್ತದೆ ಎಂದು ಹೇಳಿದರು.

ಸಮಾವೇಶದಲ್ಲಿ ಕೆಲಕಾಲ ಗೊಂದಲ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಗಾಂಧಿಭವನದಲ್ಲಿ ನಡೆಯುತ್ತಿದ್ದ ವಕೀಲರ ಮಹಾಪರಿಷತ್‌ ಸಮಾವೇಶದಲ್ಲಿ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಮಾವೇಶ ಸ್ಥಳದಿಂದ ಚನ್ನಮ್ಮ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ವಕೀಲರು ಒತ್ತಾಯಿಸಿದರು. ಕಾರ್ಯಕ್ರಮ ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಭೇಟಿ ನೀಡಿ, ಈದ್‌ ಮಿಲಾದ್‌ ಮೆರವಣಿಗೆ ಇರುವ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡದಂತೆ ಮನವಿ ಮಾಡಿದರು.

ಆದರೂ ವಕೀಲರು ಪ್ರತಿಭಟನೆಗೆ ಅವಕಾಶ ನೀಡಲು ಪಟ್ಟುಹಿಡಿದರು. ಆಗ ಶಾಸಕ ವಿನಯ ಕುಲಕರ್ಣಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶ್ರೀಗಳ ಜೊತೆಗೆ ಮಾತನಾಡಿ, ಅಕ್ಟೋಬರ್‌ 15ರಂದು ಸಭೆ ಕರೆಯುವುದಾಗಿ ಭರವಸೆ ನೀಡಿದರು. ಹೀಗಾಗಿ ವಕೀಲರು ಮೆರವಣಿಗೆ ನಿರ್ಧಾರವನ್ನು ಕೈಬಿಟ್ಟರು. ಈ ಗದ್ದಲದ ನಡುವೆಯೇ ಸಭೆಯಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳುವಂತೆ ವಿನಯ ಕುಲಕರ್ಣಿ ಅವರನ್ನು ವಕೀಲರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ