ಕನ್ನಡಪ್ರಭ ವಾರ್ತೆ ಕುಷ್ಟಗಿ
ಎಲ್ಲ ಜಾತಿಯವರೂ ತಮ್ಮವರು ಮುಖ್ಯಮಂತ್ರಿಯಾಗಲಿ ಎಂದು ಅಭಿಮಾನದಿಂದ ಹೇಳುವುದು ಸಹಜ. ಆದರೆ, ಎಲ್ಲ ಜಾತಿಯ ನಾಯಕರಿಗೂ ಸಿಎಂ ಸ್ಥಾನ ಸಿಗುವುದು ಕಷ್ಟಸಾಧ್ಯ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅಭಿಪ್ರಾಯಪಟ್ಟರು.ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಜಿ.ಪರಮೇಶ್ವರಗೆ ಈವರೆಗೂ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಆದಾಗ್ಯೂ ಮತ್ತೆ ದಲಿತ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೆ, ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು, ಬಿಡುವುದು ಶಾಸಕಾಂಗ ಪಕ್ಷದಲ್ಲಿ ತೀರ್ಮಾನವಾಗುತ್ತದೆ ಎಂದರು.
ಮುಖ್ಯಮಂತ್ರಿ ಸ್ಥಾನವನ್ನು ಇವರಿಗೆ ಕೊಡಬೇಕು ಎನ್ನುವ ಅಭಿಪ್ರಾಯ ಮಂಡಿಸಲು ಬರುವುದಿಲ್ಲ. ಯಾರಿಗೆ ಕೊಡಬೇಕು ಎಂಬುದು ಶಾಸಕಾಂಗ ಪಕ್ಷ ಹಾಗೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.ಗ್ರಾಪಂಗೊಂದು ಮದ್ಯದ ಅಂಗಡಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಸದ್ಯಕ್ಕಂತೂ ಇಲ್ಲ ಎಂದು ಸಚಿವ ತಿಮ್ಮಾಪುರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ವೇಳೆ ಯಮನೂರ ಮೇಲಿನಮನಿ, ಬಾಳಪ್ಪ ಬೇವಿನಕಟ್ಟಿ, ಶರಣು ತೆಗ್ಗಿಹಾಳ, ಮರಿಯಪ್ಪ ಹಿರೇಮನ್ನಾಪುರ, ಪ್ರಕಾಶ ತಾಳಕೇರಿ, ಶಿವಕುಮಾರ ಕಟ್ಟಿಮನಿ, ಸಿದ್ದು ಟೆಕ್ಕಳಕಿ ಇದ್ದರು.