ಸಿಎಂ ಕಾರ್ಯಕ್ರಮ ಹಿನ್ನೆಲೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ಸಚಿವ ಸಂತೋಷ ಲಾಡ್

KannadaprabhaNewsNetwork |  
Published : Feb 19, 2024, 01:34 AM IST
ನವಲಗುಂದ ಪಟ್ಟಣದ ಮಾಡೆಲ್ ಹೈ ಸ್ಕೂಲ ಕ್ರೀಡಾಂಗಣದಲ್ಲಿನ ವೇದಿಕೆಯ ಸ್ಥಳ ವಿಕ್ಷಣೆ  | Kannada Prabha

ಸಾರಾಂಶ

ಫೆ.24ರಂದು ಸಿಎಂ ಸಿದ್ದರಾಮಯ್ಯ ನವಲಗುಂದಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಲಾಡ್‌ ಸಿದ್ಧತೆ ಪರಿಶೀಲಿಸಿದರು.

ನವಲಗುಂದ: ಪಟ್ಟಣಕ್ಕೆ ಫೆ. 24ರಂದು ಸಿ.ಎಂ. ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಆಶ್ರಯ ಯೋಜನೆ ಪ್ಲಾಟ್, ಹೆಲಿಪ್ಯಾಡ್, ಇಬ್ರಾಹಿಂಪುರ ರಸ್ತೆಗೆ ಹೊಂದಿರುವ ಚಕ್ಕಡಿ ರಸ್ತೆ ಹಾಗೂ ಮಾಡೆಲ್ ಹೈಸ್ಕೂಲ್‌ ಮೈದಾನದಲ್ಲಿ ವೇದಿಕೆಯ ಸ್ಥಳ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಆಶ್ರಯ ಪ್ಲಾಟ್‌ ಹಾಗೂ ಹೆಲಿಪ್ಯಾಡಗೆ ಭೇಟಿ ನೀಡಿದ ವೇಳೆ ಪುರಸಭೆ ಮುಖ್ಯಾಧಿಕಾರಿ ಸರಿಯಾಗಿ ಮಾಹಿತಿ ನೀಡದಿದ್ದಾಗ ಸಚಿವರು ತರಾಟೆ ತೆಗೆದುಕೊಂಡರು, ಈ ವೇಳೆ ಅಸಮಾಧಾನಗೊಂಡ ಜಿಲ್ಲಾಧಿಕಾರಿ ದಿವ್ಯಪ್ರಭು ಸಹ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಚಕ್ಕಡಿ ರಸ್ತೆ ವೀಕ್ಷಣೆ ಮಾಡಿ, ನಂತರ ವೇದಿಕೆ ಸ್ಥಳವಾದ ಮಾಡೆಲ್ ಹೈಸ್ಕೂಲ್‌ ಮೈದಾನಕ್ಕೆ ಭೇಟಿ ನೀಡಿ ಇಲ್ಲಿ ಎಷ್ಟು ಎಕರೆ ಜಮೀನು ಇದೆ. ಎಷ್ಟು ಜನ ಕೂಡಬಹುದು, ಅಧಿಕಾರಿಗಳಿಗೆ ಮತ್ತು ವಿಐಪಿಗಳಿಗೆ ಹಾಗೂ ಬಂದಂತಹ ಜನರಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಈ ಭಾಗದ ಶಾಸಕ ಎನ್.ಎಚ್. ಕೋನರಡ್ಡಿಯವರು ಕಳೆದ 8 ತಿಂಗಳಿನಿಂದ ಲವಲವಿಕೆಯಿಂದ ಕೆಲಸ ಮಾಡುವುದರ ಜೊತೆಗೆ ಸಾಕಷ್ಟು ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತಂದಿದ್ದಾರೆ. ನಮಗೂ ಮುಂಚೆ ಯಾವ ಯಾವ ಇಲಾಖೆಯಲ್ಲಿ ಅನುದಾನವನ್ನು ತರಬಹುದು ಎಂಬುದು ಅವರಿಗೆ ಗೊತ್ತಿದೆ. ಈಗಾಗಲೇ ಆಶ್ರಯ ಪ್ಲಾಟ್‌ಗಳು ಬೆಂಗಳೂರಿನಲ್ಲಿರುವ ಲೇಔಟ್‌ಗಳಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಾದರಿ ಕ್ಷೇತ್ರ ಮಾಡಲು ಅವರು ಪಣ ತೊಟ್ಟಿದ್ದಾರೆ ಎಂದರು.

ನಂತರ ಅಧಿಕಾರಿಗಳೊಂದಿಗೆ ಹುರಕಡ್ಲಿ ಅಜ್ಜನ ಕಲ್ಯಾಣ ಕೇಂದ್ರದಲ್ಲಿ ಪೂರ್ವಭಾವಿ ಸಭೆ ನಡೆಸಿದ ಸಚಿವ ಸಂತೋಷ ಲಾಡ್‌, ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಆಯಾ ಇಲಾಖೆಯವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಸಂಬಂಧಪಟ್ಟ ದಾಖಲಾತಿಗಳು ಮತ್ತು ಅದರ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ನಂತರ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿ ಸಿ.ಎಂ ಚುನವಾಣೆಯ ನಂತರ ಮೊದಲ ಬಾರಿಗೆ ನವಲಗುಂದಕ್ಕೆ ಆಗಮಿಸುತ್ತಿದ್ದಾರೆ. ಅಂದು ಧಾರವಾಡ ಜಿಲ್ಲೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕೆಲಸಗಳು ಮತ್ತು 50 ಬಸ್‌ಗಳಿಗೆ ಇದೇ ವೇಳೆ ಚಾಲನೆ ನೀಡಲಿದ್ದಾರೆ. ಅದರ ವೀಕ್ಷಣೆಗೆಂದು ಜಿಲ್ಲಾ ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ ನಾವು ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಅಧಿಕಾರಿಗಳು ಶಿಸ್ತನ್ನು ಪರಿಪಾಲನೆ ಮಾಡಬೇಕು. ಜನರಿಗೆ ಮಧ್ಯಾಹ್ನ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬರುವ ಜನರು ಶಾಂತಿ ಕಾಪಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಈಗಾಗಲೇ ಸರಕಾರದ ಪಂಚ ಯೋಜನೆಗಳ ಫಲಾನುಭವಿಗಳು ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಎಷ್ಟು ಜನ ಬರಬಹುದು ಮತ್ತು ಒಂದು ಇಲಾಖೆಯಿಂದ ಸುಮಾರು 4 ಸಾವಿರ ಜನ ಬರುವ ಸಾಧ್ಯತೆಗಳಿದ್ದರೆ ಮುಂಚಿತವಾಗಿ ತಿಳಿಸಿ. ಸುತ್ತಮುತ್ತಲಿನ ಗ್ರಾಮಗಳಿಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಆಯಾ ಮತ್ತು ಕಾರ್ಯಕರ್ತೆಯರು, ಪುರಸಭೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಬರುವುದಾದರೆ ಸೋಮವಾರ 19ರಂದು ಬೆಳಗ್ಗೆ 10ರ ಒಳಗಾಗಿ ಕರೆ ಮಾಡಿ ತಿಳಿಸಬೇಕು ಹೇಳಿದರು.

ಇದೇ ವೇಳೆ ಎಸ್.ಪಿ. ಗೋಪಾಲ ಬ್ಯಾಕೋಡ ಅವರು ಬರುವ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮತ್ತು ವಿಐಪಿಗಳು ಬರುವ ಮಾರ್ಗದಲ್ಲಿ ಯಾರೂ ಕೂಡ ತಮ್ಮ ವಾಹನಗಳನ್ನು ತೆಗೆದುಕೊಂಡು ಬರಬಾರದು. ಇದರಿಂದ ಟ್ರಾಫಿಕ ಮತ್ತು ಜನದಟ್ಟಣೆಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಆದಷ್ಟು ನಮ್ಮ ಪೊಲೀಸ್ ಇಲಾಖೆ ಮತ್ತು ಎಲ್ಲ ಇಲಾಖೆಯವರು ಒಗ್ಗೂಡಿ ಕೆಲಸ ಮಾಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ