ಸಾಧನಾ ಸಮಾವೇಶ, 16ರಂದು ಸಿಎಂರಿಂದ ಸಿದ್ಧತೆ ಪರಿಶೀಲನೆ: ಜಮೀರ್‌ ಅಹಮದ್‌ ಖಾನ್‌

KannadaprabhaNewsNetwork | Published : May 13, 2025 11:50 PM
Follow Us

ಸಾರಾಂಶ

ರಾಜ್ಯದ ತಾಂಡಾ, ಹಟ್ಟಿ, ಹಾಡಿ, ಮಜಿರೆ, ಕ್ಯಾಂಪ್‌ಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಒಂದು ಲಕ್ಷ ಕುಟುಂಬಗಳಿಗೆ ಅಧಿಕೃತವಾಗಿ ಮೇ 20ರಂದು ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯದ ತಾಂಡಾ, ಹಟ್ಟಿ, ಹಾಡಿ, ಮಜಿರೆ, ಕ್ಯಾಂಪ್‌ಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಒಂದು ಲಕ್ಷ ಕುಟುಂಬಗಳಿಗೆ ಅಧಿಕೃತವಾಗಿ ಮೇ 20ರಂದು ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ. ಈ ಸಾಧನಾ ಸಮಾವೇಶಕ್ಕೆ ಸಿದ್ಧತೆ ನಡೆದಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೇ 16ರಂದು ಹೊಸಪೇಟೆಗೆ ಆಗಮಿಸಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಲಿದ್ದಾರೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್ ಖಾನ್‌ ತಿಳಿಸಿದರು.

ವಿಜಯನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈಗ ತಾನೇ ಫೋನ್ ಬಂದಿತ್ತು. ಮೇ 16ರಂದು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಬಂದು ಖುದ್ದು ಕಾರ್ಯಕ್ರಮದ ರೂಪುರೇಷ ನೋಡಲಿದ್ದಾರೆ. ಅವರೇ ಬಂದು ಸಿದ್ಧತೆ ಪರಿಶೀಲನೆ ಮಾಡಲಿದ್ದಾರೆ ಎಂದರು.

ಹೊಸಪೇಟೆಯಲ್ಲಿ ಮೇ 20 ರಂದು ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ನಾನು ಒಂದು ವಾರ ಇಲ್ಲೇ ಇದ್ದು, ಸಮಾರಂಭದ ಸಿದ್ಧತೆ ನೋಡುವೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ವಿಜಯನಗರದ ಜಿಲ್ಲೆ ಮೇಲೆ ಸಿಎಂ ಅವರಿಗೆ ವಿಶೇಷ ಕಾಳಜಿ ಇದೆ. ಈ ಭಾಗದ ರೈತರ ಅನುಕೂಲಕ್ಕೆ ಸಕ್ಕರೆ ಕಾರ್ಖಾನೆ ಘೋಷಣೆ ಮಾಡಲಿದ್ದಾರೆ ಎಂದರು.

ಈ ವೇಳೆ ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸದೇ ಸಚಿವ ಜಮೀರ್‌ ಅಹಮದ್ ಖಾನ್‌ ತೆರಳಿದರು. ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ, ಶಾಸಕ ಜೆ.ಎನ್‌. ಗಣೇಶ್‌, ಹುಡಾ ಅಧ್ಯಕ್ಷ ಇಮಾಮ್‌ ನಿಯಾಜಿ ಮತ್ತಿತರರಿದ್ದರು.