ರಾಜ್ಯ ತೀವ್ರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಗಾದಿ ಅಲಂಕರಿಸಿದ ಡಿ.ಕೆ.ಶಿವಕುಮಾರ್, ತಮಗೆ ದೊರೆತ ಉನ್ನತ ಸ್ಥಾನದ ಸಂಭ್ರಮ ಅನುಭವಿಸುವುದಕ್ಕೂ ಸಮಯ ನೀಡದೆ ರಾಜ್ಯದ ರೈತರ ಹಿತ ಕಾಪಾಡುವತ್ತ ಧಾವಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ತೀವ್ರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಗಾದಿ ಅಲಂಕರಿಸಿದ ಡಿ.ಕೆ.ಶಿವಕುಮಾರ್, ತಮಗೆ ದೊರೆತ ಉನ್ನತ ಸ್ಥಾನದ ಸಂಭ್ರಮ ಅನುಭವಿಸುವುದಕ್ಕೂ ಸಮಯ ನೀಡದೆ ರಾಜ್ಯದ ರೈತರ ಹಿತ ಕಾಪಾಡುವತ್ತ ಧಾವಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಮರುದಿನವೇ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಬರ ವೀಕ್ಷಣೆಗೆ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಿಸಿ, ವರದಿ ನೀಡುವಂತೆ ಸೂಚಿಸಿದ್ದರು. ಜತೆಗೆ ತಾವೇ ಖುದ್ದಾಗಿ ಬಾಗಲಕೋಟೆ, ಬೀದರ್ ಸೇರಿ ಇನ್ನಿತರ ಜಿಲ್ಲೆಗಳಿಗೆ ತೆರಳಿ ರೈತರ ಜತೆಗೆ ಮಾತನಾಡಿ, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಜತೆಗೆ, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬರ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು. ಜತೆಗೆ ಬರ ಪರಿಸ್ಥಿತಿಯಿಂದ ರೈತರು, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ವಿಶೇಷ ಅನುದಾನ ನೀಡಿದರು. ಅದಾದ ನಂತರ ಸರ್ಕಾರಿ ನೌಕರರೊಂದಿಗೆ ನಡೆಸಿದ ಸಂವಾದದ ಸಂದರ್ಭದಲ್ಲಿ ರೈತರ ಹಿತ ಕಾಪಾಡುವಂತೆ ಸೂಚಿಸಿದರು ಹಾಗೂ ಬರದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸಲಹೆಗಳನ್ನು ನೀಡಿದರು.
ರೈತರ ನೆರವಿಗೆ ಧಾವಿಸಿದ ಸಿಎಂ:
ಬರ ಪರಿಸ್ಥಿತಿ ತೀವ್ರತೆ ಅರಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಮುಂಗಾರು ಬೆಳೆ ವಿಮೆ ಮೊತ್ತ 585.72 ಕೋಟಿ ರು. ಬಿಡುಗಡೆಯ ಘೋಷಣೆ ಮಾಡಿದರು. ಅದಕ್ಕೆ ತಕ್ಕಂತೆ ಮೊದಲ ಕಂತಾಗಿ 243.44 ಕೋಟಿ ರು. ಬಿಡುಗಡೆಯನ್ನೂ ಮಾಡಿದರು. ಉಳಿದ ಮೊತ್ತವನ್ನು ಹಂತಹಂತವಾಗಿ ಬಿಡುಗಡೆ ಮಾಡಿ ರೈತರ ಆರ್ಥಿಕ ಸಂಕಷ್ಟಕ್ಕೆ ನೆರವಾದರು. ಅದರ ಜತೆಗೆ ಮಳೆ ಕೊರತೆಯಿಂದ ಬೆಳೆ ಹಾನಿಯ ನಿಖರ ಲೆಕ್ಕ ಪಡೆಯಲು ಡ್ರೋನ್ ಮತ್ತು ಉಪಗ್ರಹ ಮೂಲಕ ಬೆಳೆ ಸಮೀಕ್ಷೆಗೆ ಚಾಲನೆ ನೀಡಿದರು. ಅದರೊಂದಿಗೆ ಸಣ್ಣ ರೈತರಿಗಾಗಿ ರೈತ ಮಿತ್ರ ಹಾಗೂ ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆಗಳನ್ನೂ ಘೋಷಿಸಿದರು. ಹಾಗೆಯೇ, 3 ಎಕರೆ ಅಥವಾ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕಕ್ಕೆ ಶೇ.50ರಷ್ಟು ಸಹಾಯಧನ ನೀಡುವುದಾಗಿ ಘೋಷಿಸಿದರು.
ಕಳೆದ ವರ್ಷದಂತೆ ಈ ವರ್ಷವೂ ಮಾವು ಬೆಳೆಗಾರರಿಗೆ ಪ್ರೋತ್ಸಾಹ ಧನ ಮುಂದುವರಿಕೆ, ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ಸೂಕ್ತ ನಿರ್ದೇಶನ ನೀಡಿದರು. ಹೀಗೆ ಪ್ರತಿ ಹಂತದಲ್ಲೂ ಬರದ ಛಾಯೆಯಿಂದ ರಾಜ್ಯದ ರೈತರು ಆರ್ಥಿಕ ಸಮಸ್ಯೆಗೆ ಸಿಲುಕದಂತೆ ಯತ್ನಿಸಿದರು. ಅದಕ್ಕೆ ತಕ್ಕಂತೆ ಯೋಜನೆಗಳು ಹಾಗೂ ನೆರವನ್ನೂ ನೀಡಿದರು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ತಡೆಯಲು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1 ಕೋಟಿ ರು. ಅನುದಾನ ನೀಡಿದರು.
ಮುಂಗಾರು ಅವಧಿ ಮುಗಿಯುವುದಕ್ಕೆ ಮುನ್ನವೇ ರಾಜ್ಯದಿಂದ ಅಧ್ಯಯನ ನಡೆಸಿ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಘೋಷಿಸಿದರು. ಜತೆಗೆ ಇನ್ನೂ 50ರಿಂದ 70 ತಾಲೂಕುಗಳು ಅದರಲ್ಲಿ ಸೇರ್ಪಡೆ ಮಾಡುವ ಕುರಿತು ವರದಿ ನೀಡುವಂತೆಯೂ ಮುಖ್ಯಮಂತ್ರಿ ಸೂಚಿಸಿದರು. ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ತಂಡವನ್ನು ಕಳುಹಿಸುವಂತೆ ಪ್ರಧಾನಿ ಮೋದಿ ಸೇರಿ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದರು.
ಇದೀಗ ಶ್ರೀಗಂಧದ ಮಾದರಿಯಲ್ಲಿ ರೈತರು ವಾಣಿಜ್ಯ ಕೃಷಿಯತ್ತ ಮುಖ ಮಾಡಿ ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದೊಂದಿಗೆ ‘ತೇಗದ ಸಿರಿ’ ಯೋಜನೆ ಘೋಷಿಸಿದ್ದಾರೆ.
ನೀರಾವರಿ ಯೋಜನೆಗಳಿಗೆ ವೇಗ:
ರಾಜ್ಯದ ನೀರಾವರಿ ಯೋಜನೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ನಿಯಮಿತವಾಗಿ ಜಲಸಂಪನ್ಮೂಲ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ನಡೆಸುತ್ತಲೇ ಬಂದಿದ್ದಾರೆ. ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ಆರಂಭಿಸಲಾಗಿದ್ದ ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾರ್ಯ ಮುಖ್ಯಮಂತ್ರಿಯಾದಾಗ ಪೂರ್ಣಗೊಳಿಸಿ, ಕೇಂದ್ರ ಜಲಶಕ್ತಿ ಸಚಿವರು, ಆಂಧ್ರಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳನ್ನು ಕರೆತಂದು ಅದರ ಉದ್ಘಾಟನೆ ಮಾಡಿದರು. ಅದರ ಜತೆಗೆ ಎತ್ತಿನಹೊಳೆ ಸೇರಿ ಇನ್ನಿತರ ನೀರಾವರಿ ಯೋಜನೆಗಳ ಪ್ರಗತಿ ಮೇಲೆ ನಿಗಾವಹಿಸಿ ಕಾಲಕಾಲಕ್ಕೆ ಮಾರ್ಗದರ್ಶನ, ಆದೇಶವನ್ನು ಮಾಡುತ್ತಾ ಬಂದಿದ್ದಾರೆ. ಇನ್ನು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯಲು ಕೇಂದ್ರ ಸರ್ಕಾರದ ನೆರವಿನೊಂದಿಗೆ ಯೋಜನೆ ರೂಪಿಸಿ, ಅದರ ಅನುಷ್ಠಾನಕ್ಕಾಗಿ ಕ್ರಮಗಳನ್ನೂ ಕೈಗೊಳ್ಳುತ್ತಿದ್ದಾರೆ.
ಮೇಕೆದಾಟು ಪರಿಷ್ಕೃತ ಡಿಪಿಆರ್ ಸಲ್ಲಿಕೆ:
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನವೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪಣ ತೊಟ್ಟಿದ್ದ ಡಿ.ಕೆ. ಶಿವಕುಮಾರ್, ಅದಕ್ಕಾಗಿ ಮೇಕೆದಾಟುವಿನಿಂದ ಬೆಂಗಳೂರುವರೆಗೆ ಪಾದಯಾತ್ರೆಯನ್ನೂ ನಡೆಸಿದ್ದರು. ಅಲ್ಲದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸತತವಾಗಿ ದೆಹಲಿಗೆ ತೆರಳಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅನುಮತಿ ಪಡೆಯುವ ಕೆಲಸವನ್ನೂ ಮಾಡಿದರು. ಇದೀಗ ಮುಖ್ಯಮಂತ್ರಿಯಾದ ನಂತರ ಕೇಂದ್ರ ಸರ್ಕಾರದ ಸೂಚನೆಯಂತೆ ಮೇಕೆದಾಟು ಯೋಜನೆಗೆ ಅನುಕೂಲವಾಗುವಂತೆ ಪರಿಷ್ಕೃತ ಡಿಪಿಆರ್ ಸಲ್ಲಿಕೆಯಾಗುವಂತೆ ಮಾಡಿದ್ದಾರೆ.
ಕಾವೇರಿಗಾಗಿ ತಮಿಳುನಾಡು ಒತ್ತಡಕ್ಕೆ ಜಗ್ಗದ ಸಿಎಂ:
ಒಂದೆಡೆ ಮುಂಗಾರು ಕೊರತೆ, ಮತ್ತೊಂದೆಡೆ ಜಲಾಶಯಗಳಲ್ಲಿ ನೀರಿನ ಪ್ರಮಾಣದ ಇಳಿಕೆಯ ನಡುವೆಯೂ ಸಿಡಬ್ಲ್ಯುಎಂಎ ಮತ್ತು ಸಿಬ್ಲ್ಯುಆರ್‌ಸಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಆದೇಶಿಸಿತ್ತು. ಸತತ ಮೂರು ಆದೇಶಗಳು ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಬಂದಿದ್ದು, ತಮಿಳುನಾಡಿಗೆ ನೀರು ಹರಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅದನ್ನು ಪರೋಕ್ಷವಾಗಿ ಧಿಕ್ಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆದೇಶದಲ್ಲಿ ಸೂಚಿಸಿದಷ್ಟು ನೀರು ಹರಿಸಲು ನಿರಾಕರಿಸಿದರು. ಜತೆಗೆ ಕಳೆದ 25 ವರ್ಷಗಳಲ್ಲಿಯೇ ಅತೀ ಕಡಿಮೆ ನೀರು ಹರಿಸುವಂತೆ ಮಾಡಿದರು.
ಕಾವೇರಿಗಾಗಿ ಒಗ್ಗಟ್ಟು ಸರ್ವ ಪಕ್ಷ ಸಭೆ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ನದಿ ನೀರಿನ ವಿಚಾರವಾಗಿ ರಾಜಕೀಯ ಬದಿಗಿಟ್ಟು ಸರ್ವ ಪಕ್ಷ ಸಭೆ ನಡೆಸಿದರು. ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಿದರೆ ರಾಜ್ಯಕ್ಕೆ ಎದುರಾಗುವ ಸಮಸ್ಯೆಗಳು, ಕಾವೇರಿ ನೀರು ಹರಿಸದಂತೆ ತಡೆಯಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಪಕ್ಷಾತೀತವಾಗಿ ನಾಯಕರ ಜತೆಗೆ ಚರ್ಚೆ ನಡೆಸಿ ಸಲಹೆಗಳನ್ನು ಪಡೆದರು.ಕಸ್ತೂರಿ ರಂಗನ್ ವರದಿಗೆ ವಿರೋಧ:
ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ ರೈತರು ಮತ್ತು ಜನರ ಜೀವನಕ್ಕೆ ಮಾರಕವಾಗುವ ಕಸ್ತೂರಿ ರಂಗನ್ ವರದಿ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಅಧಿಸೂಚನೆಯ ವಿರುದ್ಧವಾಗಿ ಬಹಿರಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದಾರೆ. ಅಲ್ಲದೆ, ರಾಜ್ಯದ ರೈತರ ಮತ್ತು ಜನರ ಹಿತ ಕಾಪಾಡುವ ದೃಷ್ಟಿಯಿಂದ ಸೆ. 21ರಿಂದ 23ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನವನ್ನೂ ಕರೆದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.