ಕನ್ನಾಳೆಯನ್ನು ನಂಬದೆ ಖಾತೆಗೆ ಅಭ್ಯರ್ಥಿಗಳಿಂದ ಹಣ!

KannadaprabhaNewsNetwork |  
Published : Sep 13, 2026, 02:00 AM IST
ಪ್ರಜಾ ಸೇವಾ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು | Kannada Prabha

ಸಾರಾಂಶ

ತಾವು ಹಣ ಕೊಟ್ಟ ಬಳಿಕ ಮೋಸ ಮಾಡಿದರೆ ಸಾಕ್ಷಿಗೆ ಇರಲಿ ಎಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆಗೆ ನಗದು ಕೊಡದೆ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದ ಅಭ್ಯರ್ಥಿಗಳ ಮುನ್ನೆಚ್ಚರಿಕೆಯೇ ಈಗ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಸಿಐಡಿಗೆ ಪ್ರಬಲ ಪುರಾವೆ ಅಸ್ತ್ರ ನೀಡಿದಂತಾಗಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾವು ಹಣ ಕೊಟ್ಟ ಬಳಿಕ ಮೋಸ ಮಾಡಿದರೆ ಸಾಕ್ಷಿಗೆ ಇರಲಿ ಎಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆಗೆ ನಗದು ಕೊಡದೆ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದ ಅಭ್ಯರ್ಥಿಗಳ ಮುನ್ನೆಚ್ಚರಿಕೆಯೇ ಈಗ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಸಿಐಡಿಗೆ ಪ್ರಬಲ ಪುರಾವೆ ಅಸ್ತ್ರ ನೀಡಿದಂತಾಗಿದೆ.

ಸಿಐಡಿ ಮೊದಲ ಹಂತದ ತನಿಖೆಯಲ್ಲಿ ಪಶು ವೈದ್ಯ ಹುದ್ದೆ ಖರೀದಿ ವ್ಯವಹಾರದಲ್ಲಿ ಸುಮಾರು 5 ಕೋಟಿ ರು. ಬ್ಲ್ಯಾಕ್‌ (ಕಪ್ಪು) ಹಣ ಹಾಗೂ 70 ಲಕ್ಷ ರು. ವೈಟ್ ಹಣ ಪತ್ತೆಯಾಗಿದೆ. ಈ ವೈಟ್‌ ಹಣದ ಕುರಿತು ಅಭ್ಯರ್ಥಿಗಳು ವಿಚಾರಣೆ ವೇಳೆ ಕುತೂಹಲಕಾರಿ ಸಂಗತಿಯನ್ನು ಮುಂದೆ ಹೇಳಿದ್ದಾರೆ.

‘ತಾವು ಕನ್ನಾಳೆ ಮೇಲೆ ಪೂರ್ಣ ವಿಶ್ವಾಸ ಹೊಂದಿರಲಿಲ್ಲ. ಹಾಗಾಗಿ ನಮಗೆ ಮೋಸ ಮಾಡಿದರೆ ಪುರಾವೆ ತೋರಿಸಲು ಭಾಲ್ಕಿ ತಾಲೂಕಿನ ಸಹಕಾರ ಬ್ಯಾಂಕ್‌ನಲ್ಲಿದ್ದ ಆತ ಸೂಚಿಸಿದ ಖಾತೆಗಳಿಗೆ ಹಣ ಜಮೆ ಮಾಡಿದ್ದೆವು’ ಎಂದು ಕೆಲ ಅಭ್ಯರ್ಥಿಗಳು ಹೇಳಿರುವುದಾಗಿ ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ ತಿಳಿಸಿದ್ದಾರೆ.

17 ಖಾತೆಗಳ ಹಣ ವರ್ಗಾವಣೆ:

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ಅಭ್ಯರ್ಥಿಗಳ ಜತೆ ನಗದು ರೂಪದಲ್ಲಿ ಹಣಕಾಸು ವ್ಯವಹಾರವನ್ನು ಬಸವರಾಜ್ ಕನ್ನಾಳೆ ಹಾಗೂ ಆತನ ಸಹಚರರು ಯೋಜಿಸಿದ್ದರು. ಅಲ್ಲದೆ ಅಭ್ಯರ್ಥಿಗಳಿಂದ ಯಾವುದೇ ಕಾರಣಕ್ಕೂ ಚೆಕ್‌ನಲ್ಲಿ ಹಣ ಸ್ವೀಕಾರ ಮಾಡಬಾರದು ಅಥವಾ ಆನ್‌ಲೈನ್‌ ಮೂಲಕ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಬಾರದು ಎಂದು ತನ್ನ ಬಂಟ ಕನ್ನಾಳೆಗೆ ಐಎಸ್‌ಎ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಸಹ ತಾಕೀತು ಮಾಡಿದ್ದರು ಎನ್ನಲಾಗಿದೆ. ಬ್ಯಾಂಕ್ ಮೂಲಕ ಹಣದ ವಹಿವಾಟು ನಡೆದರೆ ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ ಎಂದು ಆರೋಪಿಗಳು ಜಾಗ್ರತೆ ವಹಿಸಿದ್ದರು. ಹೀಗಾಗಿಯೇ ಹಲವು ಅಭ್ಯರ್ಥಿಗಳಿಂದ ಕೋಟ್ಯಂತರು ರು. ಹಣವನ್ನು ನಗದು ರೂಪದಲ್ಲಿ ಪಡೆದಿದ್ದರು. ಇದುವರೆಗೆ ಸುಮಾರು 5 ಕೋಟಿ ರು.ನಷ್ಟು ಕಪ್ಪು ಹಣ ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಆ ಹಣವನ್ನು ಜಪ್ತಿ ಮಾಡುತ್ತೇವೆ ಎಂದು ಮೂಲಗಳು ಹೇಳಿವೆ.

ಆದರೆ ಕಪ್ಪು ಹಣದ ವ್ಯವಹಾರಕ್ಕೆ ಕೆಲ ಅಭ್ಯರ್ಥಿಗಳು ಅಸಮ್ಮತಿ ಸೂಚಿಸಿದ್ದರು. ಪಶುವೈದ್ಯ ಹುದ್ದೆ ಸಿಗದೆ ಹೋದರೆ ಕೊಟ್ಟ ಹಣ ಸಹ ವಾಪಸ್ ಸಿಗುವುದಿಲ್ಲ ಎಂದು ಅಭ್ಯರ್ಥಿಗಳ ಭೀತಿಗೆ ಕಾರಣವಾಗಿತ್ತು. ಹೀಗಾಗಿ ಬಸವರಾಜ್‌ ಕನ್ನಾಳೆಗೆ ನಗದು ಹೊಂದಿಸಲು ಕಷ್ಟವಾಗುತ್ತಿದೆ ಎಂದು ಹೇಳಿದ ಅ‍ವರು, ಆನಂತರ ಆತ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 70 ಲಕ್ಷ ರು. ಹಣವನ್ನು ಜಮೆ ಮಾಡಿದ್ದರು ಎಂದು ಮೂಲಗಳು ವಿವರಿಸಿವೆ.

....ಬಾಕ್ಸ್‌...ಬ್ಯಾಂಕ್ ಖಾತೆಯಿಂದ ಬೇರೆಡೆಗೆ ಹಣ

ಭಾಲ್ಕಿಯ ಸಹಕಾರ ಬ್ಯಾಂಕ್‌ನ 17 ಖಾತೆಗಳಿಗೆ ಕೆಲ ಅಭ್ಯರ್ಥಿಗಳು ಹಣ ಜಮೆ ಮಾಡಿದ ಕೂಡಲೇ ಆ ಹಣವನ್ನು ಬೇರೆ ಖಾತೆಗಳಿಗೆ ಬಸವರಾಜ್ ಕನ್ನಾಳೆ ವರ್ಗಾಯಿಸಿದ್ದಾನೆ. ಆ ಹಣ ಎಲ್ಲಿ ಹೋಗಿದೆ ಎಂಬುದು ಗೊತ್ತಾಗಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಸೂಚಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

--

ಅಭ್ಯರ್ಥಿ ಮನೆಯಲ್ಲಿ 2 ದಿನ ಇ.ಡಿ. ಠಿಕಾಣಿ

ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಯೊಬ್ಬನ ಮನೆಯಲ್ಲೇ 48 ಗಂಟೆಗಳು ಇ.ಡಿ. ಅಧಿಕಾರಿಗಳು ಠಿಕಾಣಿ ಹೂಡಿ ಆತನಿಂದ ನೇಮಕಾತಿ ಅಕ್ರಮದ ಮಾಹಿತಿ ಬಾಯಿ ಬಿಡಿಸಿದ್ದರು ಎಂದು ತಿಳಿದು ಬಂದಿದೆ. ಬಸವರಾಜ್ ಕನ್ನಾಳೆ ಸಂಪರ್ಕದಲ್ಲಿದ್ದ ಆ ಅಭ್ಯರ್ಥಿ ಬಗ್ಗೆ ಮಾಹಿತಿ ಕಲೆ ಹಾಕಿ ಇ.ಡಿ. ದಾಳಿ ನಡೆಸಿತ್ತು. ಆದರೆ ಅಭ್ಯರ್ಥಿಯನ್ನು ಬೆಂಬಿಡದೆ ಎರಡು ದಿನಗಳು ಕಾಡಿದ ನಂತರ ಆತ ಸತ್ಯ ಹೊರ ಹಾಕಿದ್ದಾನೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಉತ್ತಮ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು: ಪ್ರದೀಪ್
ವಿಕಸಿತ ಭಾರತ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ